ಆಗಸ್ಟ್‌ 28-29ರಂದು ಸಿಇಟಿ ಪ್ರವೇಶ ಪರೀಕ್ಷೆ: ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ

ಬೆಂಗಳೂರು: ‘ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ರಾಜ್ಯದಲ್ಲಿಯೂ ರದ್ದುಪಡಿಸಲಾಗಿದೆ. ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಈ ಬಾರಿ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಅಂಕಗಳನ್ನು ಮಾತ್ರ ಪರಿಗಣಿಸಲಾಗುವುದು’ ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದ್ದಾರೆ.

ಸಿಇಟಿಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಅವರು, ‘ಆಗಸ್ಟ್‌ 28 ಮತ್ತು 29ರಂದು ಸಿಇಟಿ ನಡೆಯಲಿದೆ’ ದೃಢಪಡಿಸಿದರು.

ಇದನ್ನು ಓದಿ: ಲಸಿಕೆ ಪೂರೈಕೆಯನ್ನು ತುರ್ತಾಗಿ ವಿಸ್ತರಿಸಬೇಕಾಗಿದೆ ಮತ್ತು ಅದು ಸಾಧ್ಯವಿದೆ-ಜನವಿಜ್ಞಾನ ಜಾಲದ ಹೇಳಿಕೆ

‘ಸಿಇಟಿಗೆ ನೋಂದಣಿ ಜೂನ್‌ 15ರಿಂದ ಆರಂಭವಾಗಲಿದ್ದು, ಸಿಇಟಿ ಪರೀಕ್ಞಾ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರತಿ ವಿಷಯ 60 ಅಂಕಗಳ ಪರೀಕ್ಷೆ ಆಗಿರುತ್ತದೆ. ಮೊದಲ ದಿನ ಜೀವ ವಿಜ್ಞಾನ ಮತ್ತು ಗಣಿತ, ಎರಡನೇ ದಿನ ಭೌತ ವಿಜ್ಞಾನ ಮತ್ತು ರಸಾಯನವಿಜ್ಞಾನ ಪರೀಕ್ಷೆ ನಡೆಯಲಿದೆ. ಆಗಸ್ಟ್‌ 30ರಂದು ಪ್ರತ್ಯೇಕ ಕನ್ನಡ ಪರೀಕ್ಷೆ ನಡೆಯಲಿದೆ’ ಎಂದರು.

2021ನೇ ಸಾಲಿನ ವೃತ್ತಿಪರ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಜುಲೈ 7 ಮತ್ತು 8 ರಂದು ನಡೆಯುತ್ತದೆ ಎಂದು ಈ ಹಿಂದೆ ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದರು. ಆದರೆ ಕೊರೊನಾ ಎರಡನೇ ಅಲೆಯಿಂದ ನಿಗದಿಯಾದ ದಿನಾಂಕದಲ್ಲಿ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಆಗಸ್ಟ್‌ 28-29ರಂದು ಪರೀಕ್ಷೆ ನಡೆಸಲಾಗುವುದು ಎಂದು ಸಚಿವರು  ಹೇಳಿದರು.

ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಈ ಬಾರಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಅಂಕಗಳನ್ನು ಮಾತ್ರ ಪರಿಗಣಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಪತ್ರ ಬರೆದಿದ್ದರು. ಹೀಗಾಗಿ, ಈ ವಿಷಯದಲ್ಲಿ ಚರ್ಚೆ ನಡೆಯಿತು ಎಂದರು.

‘ಸಿಇಟಿ ಅಂಕಗಳನ್ನುಮಾತ್ರ ಪರಿಗಣಿಸುವ ಸಂಬಂಧಪಟ್ಟ ಎಲ್ಲ ಕೌನ್ಸಿಲ್‌ಗಳಿಗೆ ಪತ್ರ ಬರೆಯಲಾಗುವುದು’ ಎಂದೂ ಅವರು ಸ್ಪಷ್ಟಪಡಿಸಿದರು.

6.5 ಲಕ್ಷ ವಿದ್ಯಾರ್ಥಿಗಳು ಪದವಿ ಕೋರ್ಸ್‌ಗಳಿಗೆ ಬರುತ್ತಾರೆ. ಹೀಗಾಗಿ ಪದವಿ ಕೋರ್ಸ್ ಹೆಚ್ಚಿಸುವ ಬಗ್ಗೆ ಚರ್ಚಿಸುತ್ತೇವೆ. ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಶೇ.30ರಷ್ಟು ಹೆಚ್ಚಾಗುತ್ತದೆ. ಅವರ ಭವಿಷ್ಯಕ್ಕಾಗಿ ಉತ್ತಮ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *