ಮನೋಜ್ ಬೊಗಟಿ
ಒಲೆಯ ಮಸಿಯಿಂದ
ಕಣ್ಣಿಗೆ ಕಪ್ಪು ಹಚ್ಚಿಕೊಳ್ಳುತ್ತಾಳೆ
ಬಿಸಿಲಿನ ಬೊಟ್ಟು
ಹಣೆಗಿಟ್ಟುಕೊಳ್ಳುತ್ತಾಳೆ
ಹೆಣ್ಣಾಗುವ ಹಂಬಲ ಅದೆಂಥದ್ದೋ
ಅರ್ಥವಾಗುವುದಿಲ್ಲ.
ಒಂದು ಡಜನ್ ಮೇಕೆಗಳ ಹಟ್ಟಿ
ಒಬ್ಬಳೇ ಗುಡಿಸಿ ಸಾರಿಸುತ್ತಾಳೆ
ಕರು ಹಾಕಿದ ನಾಲ್ಕು ದನಗಳಿಗೆ
ಒಬ್ಬಳೇ ಹುಲ್ಲು ಹಾಕುತ್ತಾಳೆ
ಗಟ್ಟಿಗಿತ್ತಿ ಅಕ್ಕ
ಯಾವೊಂದರ ಹೆದರಿಕೆಯೂ ಇಲ್ಲದ ಅಕ್ಕ-
ನನ್ನು ಅಕ್ಷರಮಾಲೆಯ अ ಮತ್ತೊಂದು क
ಯಾಕೋ ಹೆದರಿಸುತ್ತದೆ.
ಬಿಸಿಲನ್ನೇ ಹಣೆಗಿಟ್ಟುಕೊಳ್ಳುವ ಅಕ್ಕನನ್ನು
ಛೇಡಿಸುವ
ಅವಳೊಂದಿಗೆ ಒರಟಾಗಿ ವರ್ತಿಸುವ
ಸಾಹಸ ಯಾರೂ ಮಾಡಲಾರರು
ಉರಿಯುವ ಬೆಂಕಿಗೂ ಆಕೆಯ ಕಣ್ಣಲ್ಲಿ
ಕಣ್ಣಿಟ್ಟು ನೋಡುವ ಧೈರ್ಯವಿಲ್ಲ
ಯಾವ ಕಾಡನ್ನು ಬೆಂಕಿ ನುಂಗಿತೋ
ಆ ಕಾಡನ್ನು ನಿರ್ಭೀತಿಯಿಂದ ಹೊಕ್ಕು
ಹೊರಬರುವ ಅಕ್ಕನ ಪಾದಗಳಿಗೆ
ದುಷ್ಟ ಮುಳ್ಳುಗಳೂ ಅಂಜುತ್ತವೆ.
ಆದರೆ ಅದ್ಯಾಕೋ ಏನೋ
ಸಂಜೆ ಇಳಿಯುತ್ತಲೇ ಅಕ್ಕನಿಗೆ
ಮೇಕೆಯ ಕಿವಿಗಿಂತಲೂ ಸಣ್ಣದಾದ ए
ಮೈನಡುಗಿಸುತ್ತದೆ
ಮತ್ತು ಅಜ್ಜನ ಕೋಲಿಗಿಂತ ಸಣ್ಣದಾದ 1
ಬೆವರಿಳಿಸುತ್ತದೆ
ರಾತ್ರಿಶಾಲೆಯ ಶಿಕ್ಷಕರು
ಬಲವಂತವಾಗಿ ಕರೆದುಕೊಂಡು ಹೋಗುತ್ತಾರೆ
ಒಂದು ದಿನ ಅಕ್ಕ
ಕೈಕಾಲು ಬಡಿಯುತ್ತ ಅತ್ತಳು
ಅತ್ತು ನಮ್ಮನ್ನೆಲ್ಲ ಕಣ್ಣೀರಾಗಿಸಿದಳು
ನಡುಗುವ ಕೈಗಳಿಂದ
ಅಕ್ಕ ಮೊದಲ ಅಕ್ಷರ ಬರೆದಿದ್ದಳು
ಅದು भा
ನಂತರ ಅದರ ಪಕ್ಕಕ್ಕೆ
त ಜೋಡಿಸಿದಳು
ಅಕ್ಕ ಹಸಿದಿದ್ದಳು
ಆಮೇಲೆ ಅವರು
ನಡುವೆ र ಸೇರಿಸಿದಾಗ
ಅಕ್ಕನಿಗೆ ಹೇಗಾಗಿರಬೇಕು!
(ಭಾ + ತ = ಭಾತ್. ಅದರರ್ಥ ‘ಅನ್ನ’.)
(ಮನೋಜ್ ಬೋಗಟಿ ಪಶ್ಚಿಮ ಬಂಗಾಳದ ಡಾರ್ಜಲಿಂಗ್ ನವರು, ಅವರ ʻದೀದಿʼ ಎಂಬ ಕವಿತೆ ಅನುವಾದವನ್ನು ಸಂವರ್ತ ‘ಸಾಹಿಲ್’ ಕನ್ನಡೀಕರಿಸಿದ್ದಾರೆ.)