ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರವೇ ಉಚಿತ ಬಸ್ ಪಾಸ್ ವಿತರಿಸಲು ಕಟ್ಟಡ ನಿರ್ಮಾಣ ಕಾರ್ಮಿಕ ಸಂಘಟನೆ ಆಗ್ರಹ

ಬೆಂಗಳೂರು: ರಾಜ್ಯಾದ್ಯಂತ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ  ಕಟ್ಟಡ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಹಣದಿಂದ ಉಚಿತ ಬಸ್ ಪಾಸ್ ನೀಡಲು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ನೀಡಿರುವ ಹೇಳಿಕೆಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ (ಸಿಐಟಿಯು) ತೀವ್ರ ವಿರೋಧ ವ್ಯಕ್ತಪಡಿಸಿದ್ದು ಕಲ್ಯಾಣ ಮಂಡಳಿ ಹಣದ ಬದಲು‌ ರಾಜ್ಯ ಸರ್ಕಾರವೇ ತನ್ನ ಹಣದಿಂದ ಉಚಿತ ಬಸ್ ಪಾಸ್ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಕಾರ್ಮಿಕ ಸಚಿವರು ಪದೇ ಪದೇ ಇಂತಹ ಕಾರ್ಯ ಸಾಧುವಲ್ಲದ ಹೇಳಿಕೆಯನ್ನು ನೀಡುತ್ತಲೇ ಬಂದಿದ್ದಾರೆ. ಸಚಿವರ ಇಂತಹ ಹೇಳಿಕೆಯಿಂದ ಅವರಿಗೆ ರಾಜಕೀಯ ಲಾಭವಾಗಬಹುದೇ ಹೊರತು ಲಕ್ಷಾಂತರ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಯಾವುದೇ ಪ್ರಯೋಜನವಾಗದು.

ಸಾರಿಗೆ ನಿಗಮಗಳ ಮೂಲಕ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡಬೇಕೆಂದು ಯಾವುದೇ ಕಟ್ಟಡ ಕಾರ್ಮಿಕರು ಅಥವಾ ಕಾರ್ಮಿಕ ಸಂಘಗಳು ಬೇಡಿಕೆಯನ್ನು ಇಟ್ಟಿಲ್ಲ.ರಾಜ್ಯಾದ್ಯಂತ ಅವ್ಯಾಹತವಾಗಿ ಬಸ್‌ಪಾಸ್‌ ನೀಡಿಕೆಯಿಂದ ಕಲ್ಯಾಣ ಮಂಡಳಿಯ ಸಾವಿರಾರು ಕೋಟಿ ಹಣ ಪ್ರತಿ ವರ್ಷ ಅಪವ್ಯಯವಾಗಲಿದೆ. ಜತೆಗೆ ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳಲ್ಲಿ ಹೆಚ್ಚಾಗಿ ಜನರು ಪ್ರಯಾಣ ಮಾಡುತ್ತಾರೆ. ಅಲ್ಲದೆ ರಾಜ್ಯದ ಕೆಲ ಪ್ರಮುಖ ನಗರಗಳನ್ನು ಹೊರತುಪಡಿಸಿ ಸಣ್ಣನಗರ ಮತ್ತು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ಕಟ್ಟಡ ಕಾರ್ಮಿಕರಿಗಂತೂ ಇದರಿಂದ ಯಾವ ಪ್ರಯೋಜನವಾಗದು.

ಇದನ್ನು ಓದಿ: ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ಪಾಸ್‌ ಸೇವೆ ಪುನರ್‌ ಆರಂಭ: ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲು ಕಾರ್ಮಿಕ ಇಲಾಖೆ ಚಿಂತನೆ

ಇದನ್ನು ಮನಗಂಡೇ ಬೆಂಗಳೂರು ನಗರ ಸಾರಿಗೆಗೆ ಮಾತ್ರ ಇದನ್ನು ಸೀಮಿತಪಡಿಸಿ ರಾಜ್ಯದ ಇತರೆಡೆ ವಿದ್ಯಾಭ್ಯಾಸ ಮಾಡುತ್ತಿರುವ ಕಟ್ಟಡ ಕಾರ್ಮಿಕರ ಮಕ್ಕಳು ಬಸ್ ಪಾಸ್  ಪಡೆಯಲು ಅಗತ್ಯವಿರುವ ಹಣಕಾಸಿನ ನೆರವನ್ನು ನೀಡಲು ಮಂಡಳಿ ಹಿಂದೆಯೇ ನಿರ್ಧರಿಸಿದೆ ಎಂದು ಸಂಘಟನೆಯು ವಿವರಿಸಿದೆ.

ಆದರೆ, ಸಾರಿಗೆ ನಿಗಮಗಳು ನಷ್ಟದಲ್ಲಿವೆ ಎನ್ನುವುದನ್ನು ನೆಪಮಾಡಿಕೊಂಡು ರಾಜ್ಯದ ಬಿಜೆಪಿ‌ ಸರ್ಕಾರ ಸಾರಿಗೆ ನಿಗಮಗಳ ಅಧ್ಯಕ್ಷರುಗಳು ಪದೇ ಪದೇ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಸೆಸ್ ಹಣದ ಮೇಲೆ ಕಣ್ಣು ಹಾಕಿ ಕಾರ್ಮಿಕರ ಪಿಂಚಣಿ, ಆರೋಗ್ಯ, ವಸತಿ, ಅವರ ಮಕ್ಕಳಿಗೆ ಶಿಕ್ಷಣ ಮದುವೆ ಹಾಗೂ ವೈದ್ಯಕೀಯ ನೆರವುಗಳಿಗಾಗಿ ಇರುವ ಹಣವನ್ನು ಕಬಳಿಸಲು ನಿರಂತರ ಪ್ರಯತ್ನ ನಡೆಸುತ್ತಲೇ ಇರುವುದು ಹೊಸದೇನಲ್ಲ  ಆದರೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಮತ್ತು ಕಾರ್ಮಿಕರ ಹಿತ ರಕ್ಷಿಸಬೇಕಾದ  ಕಾರ್ಮಿಕ ಸಚಿವರು ಇದಕ್ಕೆ ಕೈ ಜೋಡಿಸಲು ಹೊರಟಿರುವುದು ವಿಷಾದದ ಸಂಗತಿಯಾಗಿದೆ.

ರಾಜ್ಯದಲ್ಲಿ ನೋಂದಣಿಯಾಗಿರುವ ಲಕ್ಷಾಂತರ ಕಟ್ಟಡ ಕಾರ್ಮಿಕರು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬಾಕಿ ಇರುವ ವಿದ್ಯಾರ್ಥಿವೇತನ, ಆರೋಗ್ಯ, ಪಿಂಚಣಿ, ವಸತಿ, ಮದುವೆ, ಹೆರಿಗೆ ಇತ್ಯಾದಿ ಅರ್ಜಿಗಳನ್ನು ಇತ್ಯರ್ಥ ಪಡಿಸಬೇಕೆಂದು ಕಾರ್ಮಿಕ ಇಲಾಖೆಗಳನ್ನು ಅಲೆಯುತ್ತಿದ್ದಾರೆ ಕಾರ್ಮಿಕ ಸಂಘಗಳು ನಿರಂತರ ಹೋರಾಟ ನಡೆಸುತ್ತಲೇ ಬಂದಿವೆ. ಇಂತಹ ಗಂಭೀರ ಸಮಸ್ಯೆಗಳು ಮೊದಲು ಬಗೆಹರಿಸಬೇಕು ಅದರ ಬದಲು ಕಾರ್ಮಿಕ ಸಚಿವರು  ಕೇವಲ ಪ್ರಚಾರಕ್ಕೆ ಮತ್ತು ಮಂಡಳಿ ನೂರಾರು ಕೋಟಿ ಹಣವನ್ನು ಅಪವ್ಯಯ ಮಾಡುವ ಹೊಸ ಹೊಸ ಕಾರ್ಯಕ್ರಮಗಳನ್ನು ಪ್ರಕಟಿಸುವ  ನಿರ್ಧಾರಗಳನ್ನು ಕೈ ಬಿಡಬೇಕು. ಎಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ಆಗ್ರಹಿಸಿದೆ.

ಈಗಾಗಲೇ ಕೊವೀಡ್ ಮತ್ತು ಕೊವೀಡೇತರ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಸಾವಿರಾರು ಕೋಟಿ ಖರೀದಿಗಳನ್ನು ಮಾಡಿ ಅದರಲ್ಲಿ ನೂರಾರು ಕೋಟಿ ಹಣ ಭ್ರಷ್ಟಾಚಾರವಾಗಿರುವ ಬಗ್ಗೆ ತನಿಖೆಯಾಗಬೇಕೆಂದು ಕಾರ್ಮಿಕ ಸಂಘಗಳು ಹೋರಾಟ ನಡೆಸುತ್ತಲೇ ಇವೆ. ಇಂತಹ ಹೋರಾಟಗಳಿಂದಾಗಿಯೇ ಲಸಿಕೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ರೂ 700 ಕೋಟಿ ಹಾಗೂ ಸ್ಲಂ ಬೋರ್ಡಗಾಗಿ ರೂ 400 ಕೋಟಿ ಹಣ ವರ್ಗಾಹಿಸುವ ತೀರ್ಮಾನಗಳನ್ನು ಹಿಂಪಡೆಯಲು ಸಾಧ್ಯವಾದುದ್ದು ಎನ್ನುವುದನ್ನು ಕಾರ್ಮಿಕ ಸಚಿವರು ಗಮನಿಸಬೇಕು ಎಂದು ಸಂಘಟನೆಯು ಆಗ್ರಹಿಸಿದೆ.

ಕಲ್ಯಾಣ ಮಂಡಳಿಗೆ ಸಾವಿರಾರು ‌ಕೋಟಿ ಅನವಶ್ಯಕ ವೆಚ್ಚವಾಗುವ ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರಿಗೆ ಬಸ್ ಪಾಸ್ ನೀಡುವ ಪ್ರಸ್ತಾವನೆಯನ್ನು ಕೈಬಿಡಬೇಕು ಹಾಗೊಂದು ವೇಳೆ ನೀಡುವುದಾದರೆ ಅದರ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುವಂತೆ ಕಾರ್ಮಿಕರ ಸಚಿವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಬೇಕು ಎಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ಆಗ್ರಹಿಸಿದೆ.

ಆದರೆ ಅದಕ್ಕಿಂತ ಮೊದಲು ಕಲ್ಯಾಣ ಮಂಡಳಿಯಿಂದ ಪ್ರಕಟಿಸಲಾದ ಕೊವೀಡ್ ಪರಿಹಾರ ಸೇರಿ ಇತರೆ 19 ಕಾರ್ಯಕ್ರಮಗಳು  ಹಾಗೂ ಮಂಡಳಿ ಇತ್ತೀಚೆಗೆ ಕೈಗೊಂಡಿರುವ ಹೆಚ್ಚುವರಿ ಆರ್ಥಿಕ ಸೌಲಭ್ಯಗಳು ಸಮರ್ಪಕವಾಗಿ ಕಾರ್ಮಿಕರಿಗೆ ತಲುಪುವಂತೆ ಅಗತ್ಯ ಕ್ರಮವಹಿಸಬೇಕು ಎಂಬುದು ಸಂಘದ ಆಗ್ರಹವಾಗಿದೆ.

ಇದರ ಹೊರತಾಗಿ ಕಾರ್ಮಿಕ ಸಚಿವರು ಇಂತಹ ಪ್ರಯತ್ನ ಮುಂದುವರೆಸಿದರೆ ತೀವ್ರ ಪ್ರತಿಭಟನೆಗೆ ಕಟ್ಟಡ ಕಾರ್ಮಿಕ‌ಸಂಘಗಳು ಮುಂದಾಗಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್  ಎಚ್ಚರಿಕೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *