ಕಟ್ಟಡ ಕಾರ್ಮಿಕರ ನಿಧಿ ದೋಚಲು ಸಚಿವರು-ಶಾಸಕರ ಹೊಂಚು: ಬಾಲಕೃಷ್ಣ ಶೆಟ್ಟಿ

ಉಡುಪಿ: ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರಕಾರದ ಸಚಿವರು, ಶಾಸಕರು ಇದೀಗ ಬಡ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿರುವ ನಿಧಿಯಲ್ಲಿ 450 ಕೋಟಿ ರೂಪಾಯಿ ಹಣವನ್ನು ಸ್ಲಂ ಬೋರ್ಡ್ ವಸತಿ ನಿರ್ಮಾಣ ಏಜೆನ್ಸಿಗಳಿಗೆ ನೀಡಿದ್ದಾರೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್(ಸಿಐಟಿಯು) ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಲಕೃಷ್ಣ ಶೆಟ್ಟಿ ಅವರು, ರಾಜ್ಯದಲ್ಲಿ ಭ್ರಷ್ಟಾಚಾರದ ಎಲ್ಲೆ ಮಿತಿಮೀರಿದ್ದು, ಶೇ. 40ರಷ್ಟು ಕಮಿಷನ್‌ ಆರೋಪಗಳು ರಾಜ್ಯ ಸರ್ಕಾರದ ಮೇಲಿದೆ. ಇವುಗಳ ನಡುವ  ರಾಜ್ಯದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರು ಹಲವು ವರ್ಷಗಳಿಂದ ಮಂಡಳಿಯಿಂದ ಮನೆ ನಿರ್ಮಾಣಕ್ಕೆ ಸಹಾಯಧನಕ್ಕಾಗಿ ಕಾಯುತಿದ್ದಾರೆ. ಆದರೆ ಅವರಿಗೆ ಯಾವುದೇ ಆರ್ಥಿಕ ನೆರವು ನೀಡದ ಮಂಡಳಿ ಅಧ್ಯಕ್ಷ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ವಸತಿ ಸೇರಿದಂತೆ ಇತರ ಸಚಿವರ ಒತ್ತಡಕ್ಕೆ ಮಣಿದು ಕೊಳಚೆ ನಿರ್ಮೂಲನ ಮಂಡಳಿ ಮೂಲಕ ನಿರ್ಮಿಸುವ 21000 ಮನೆಗಳಿಗೆ 433 ಕೋಟಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ನಿರ್ಮಿಸುವ 423 ಮನೆಗಳಿಗೆ 8.33 ಕೋಟಿ ರೂ. ಏಜೆನ್ಸಿದಾರರಿಗೆ ವರ್ಗಾಯಿಸಿದೆ ಎಂದು ತಿಳಿಸಿದರು.

ಈ ಮೂಲಕ ಸರಕಾರ ಲಕ್ಷಾಂತರ ಬಡ ಕಟ್ಟಡ ಕಾರ್ಮಿಕರಿಗೆ ದ್ರೋಹ ಬಗೆದಿದ್ದು, ಇದರಲ್ಲಿ ರಾಜ್ಯದ ಸಚಿವರು ಹಾಗೂ ಶಾಸಕರು ಅಪಾರ ಪ್ರಮಾಣದ ಹಣವನ್ನು ಕಮಿಷನ್ ರೂಪದಲ್ಲಿ ದೋಚಲು ಹೊಂಚು ಹಾಕಿರುವುದು ಕಂಡು ಬರುತ್ತದೆ ಎಂದು ಅವರು ಹೇಳಿದರು.

ನಕಲಿ ಕಟ್ಟಡ ಕಾರ್ಮಿಕರು

ವಸತಿ ಸಚಿವರು, ಸರಕಾರಗಳ ಅನುದಾನ ಬಳಸಿ, ಮನೆ ನಿರ್ಮಿಸುವ ಬದಲು ಸಾವಿರಾರು ನಕಲಿ ಕಟ್ಟಡ ಕಾರ್ಮಿಕರನ್ನು ಮಂಡಳಿಯಲ್ಲಿ ನೋಂದಾಯಿಸಿ, ನೂರಾರು ಕೋಟಿ ರೂಪಾಯಿ ಹಣ ದೋಚಿದ್ದಾರೆ. ಸಚಿವ ಶಿವರಾಮ ಹೆಬ್ಬಾರ್ ಕೋವಿಡ್ ಸಮಯದಲ್ಲಿ ಸಾವಿರಾರು ಕೋಟಿ ಖರೀದಿಗಳ ಮೂಲಕ ನೂರಾರು ಕೋಟಿ ಹಣದ ಅವ್ಯವಹಾರ ನಡೆಸಿದ್ದಾರೆ ಎಂದು ಬಾಲಕೃಷ್ಣ ಶೆಟ್ಟಿ ಆರೋಪಿಸಿದರು.

ಕಲ್ಯಾಣ ಮಂಡಳಿಯ ಕೆಲವು ಕಾರ್ಮಿಕ ಅಧಿಕಾರಿಗಳು ಏಜೆಂಟರು, ಭ್ರಷ್ಟರುಗಳಿಗೆ ಮಣೆ ಹಾಕಿದ ಪರಿಣಾಮ ನೈಜ ಕಾರ್ಮಿಕರಿಗೆ ಮಂಡಳಿ ಸೌಲಭ್ಯಗಳು ದೊರಕದೆ ನಕಲಿ ಜನರು ಕಬಳಿಸುವಂತಾಗಿದೆ. ಈಗಾಗಲೇ ರಾಜ್ಯ ಮಂಡಳಿಯಲ್ಲಿ ನೊಂದಾಯಿತ 37 ಲಕ್ಷ ಕಟ್ಟಡ ಕಾರ್ಮಿಕರ ಪೈಕಿ 17ಲಕ್ಷ ಮಂದಿ ಮಾತ್ರ ನಿಜವಾದ ಕಾರ್ಮಿಕರು. ಉಳಿದವರು ನಕಲಿ ಕಾರ್ಮಿಕರು ಎಂದು ಅವರು ದೂರಿದರು.

ಸ್ಲಂ ಬೋರ್ಡ್‌ಗೆ ವರ್ಗಾವಣೆ ಮಾಡಿರುವ ಹಣವನ್ನು ಮಂಡಳಿಗೆ ವಾಪಾಸ್ ಪಡೆಯಬೇಕು ಹಾಗೂ ನೋಂದಾಯಿತ ನೈಜ ಕಟ್ಟಡ ಕಾರ್ಮಿಕರಿಗೆ ಮಾತ್ರವೇ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಬೇಕು. ಮಂಡಳಿಯ ಎಲ್ಲ ಖರೀದಿಗಳನ್ನು ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿ ಇಂದು ಉಡುಪಿ ಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯ ಸಂಚಾಲಕರಾದ ಸುರೇಶ ಕಲ್ಲಾಗರ ಹಾಗೂ ರೊನಾಲ್ಡ್ ಕ್ವಾಡ್ರಸ್ ಉಪಸ್ಥಿತರಿದ್ದರು.

ಮರಳು ಸಮಸ್ಯೆ ಶಾಶ್ವತ ಪರಿಹಾರಕ್ಕೆ ಆಗ್ರಹ

ಉಡುಪಿ ಜಿಲ್ಲೆಯಲ್ಲಿ ನಿರ್ಮಾಣ ಕ್ಷೇತ್ರವು ಮರಳು ಲಭ್ಯತೆಯ ಮೇಲೆ ಅವಲಂಬಿತವಾಗಿದೆ. ಚೆನ್ನೈ ಹಸಿರು ಪೀಠದ ತೀರ್ಪಿನಿಂದಾಗಿ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ ನಡೆಯುತ್ತಿಲ್ಲ. ಇದರಿಂದ ಮರಳು ಲಭ್ಯತೆ ತೀವ್ರ ವಾಗಿ ಕುಸಿದಿದ್ದು, ದರದಲ್ಲಿ ತೀವ್ರ ಹೆಚ್ಚಳವಾಗಿದೆ. ಇದರಿಂದ ಸಣ್ಣ ಮತ್ತು ಮಧ್ಯಮವರ್ಗದ ಜನರು ಮನೆ ನಿರ್ಮಿಸದಿರುವುದರಿಂದ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ ಎಂದು ಬಾಲಕೃಷ್ಣ ಶೆಟ್ಟಿ ಹೇಳಿದರು.

ಈ ಕುರಿತು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ. ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಗಮನ ನೀಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *