ಅನುಮಾನಾಸ್ಪದ ರೀತಿಯಲ್ಲಿ ಕಟ್ಟಡ ಕಾರ್ಮಿಕನ ಶವ ಪತ್ತೆ

ಬೆಂಗಳೂರು :ಕೂಲಿ ಕೆಲಸವನ್ನು ಅರಸಿ ರಾಯಚೂರಿನಿಂದ ಬೆಂಗಳೂರಿಗೆ ಕಟ್ಟಡ ಕೆಲಸಕ್ಕೆ ಬಂದಿದ್ದ ಕಟ್ಟಡ ಕಾರ್ಮಿಕ ತಾನು ಕೆಲಸ ಮಾಡುತ್ತಿದ್ದ ಕಟ್ಟಡದಲ್ಲಿಯೇ ಶವವಾಗಿ ಪತ್ತೆಯಾಗಿದ್ದಾನೆ.

ಮೃತನನ್ನು ರಾಯಚೂರು ಮೂಲದ ವೀರೇಶ್‌ (27) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆದರೆ, ವೀರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಅಥವಾ ಕೊಲೆಯಾಗಿದ್ದನಾ ಎಂಬ ಅನುಮಾನ ಎದುರಾಗಿದೆ.

ಮೃತ ವೀರೇಶ್ ಬೆಂಗಳೂರಿನ ಕೋಣನಕುಂಟೆಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದನು. 80 ಅಡಿ ರಸ್ತೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದನು. ಕೆಲಸ ಮುಗಿದ ನಂತರ ಅದೇ ಕಟ್ಟಡದಲ್ಲಿ ವೀರೇಶ್ ಉಳಿದುಕೊಳ್ಳುತ್ತಿದ್ದನು. ಆದರೆ, ಇಂದು ಬೆಳಗ್ಗೆ ವೀರೇಶ್ ಶವವಾಗಿ ಪತ್ತೆಯಾಗಿದ್ದಾನೆ. ಘಟನಾ ಸ್ಥಳದಲ್ಲಿ ರಕ್ತ ಕಲೆಗಳು ಪತ್ತೆಯಾಗಿವೆ. ಆದರೆ, ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಇಲ್ಲ. ಸ್ಥಳಕ್ಕೆ ಎಫ್‌ಎಸ್‌ಎಲ್‌ ತಂಡವೂ ಕೂಡ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಪೊಲೀಸರು ಸದ್ಯ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಕೋಣನಕುಂಟೆ ಪೊಲೀಸರಿಂದ ಸಿಆರ್‌ಪಿಸಿ 174ಸಿರಡಿ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುತ್ತಿದೆ.

ರಾಯಚೂರಿನಲ್ಲಿ ವಿಪರೀತ ಬಡತನ. ಅದರಲ್ಲಿಯೂ ಬೇಸಿಗೆ ಕಾಲದಲ್ಲಿ ಕೆಲಸವೂ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕೂಲಿ ಕೆಲಸವನ್ನು ಅರಸಿ ಬೆಂಗಳೂರಿಗೆ ಬಂದಿದ್ದರು. ಸಾಮಾನ್ಯವಾಗಿ ಕಟ್ಟಡ ನಿರ್ಮಾಣ ಕೆಲಸಕ್ಕೆ ಬರುವ ಕುಟುಂಬಗಳು ನಿರ್ಮಾಣ ಹಂತದ ಕಟ್ಟಡದಲ್ಲಿ ಅಥವಾ ಅದರ ಪಕ್ಕದಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಂಡು ವಾಸವಾಗಿರುತ್ತಾರೆ. ಆಗದವರು ಈ ರೀತಿ ಮಾಡಿರುವ ಸಾಧ್ಯತೆಗಳಿವೆ. ವಲಸೆ ಬರುವ ಕಟ್ಟಡ ಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡಬೇಕು ವಿರೇಶ್ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಕಟ್ಟಡ ಕಾರ್ಮಿಕರ ಸಂಘಟನೆ (CWFI) ಆಗ್ರಹಿಸಿದೆ.

 

Donate Janashakthi Media

Leave a Reply

Your email address will not be published. Required fields are marked *