ಖ್ಯಾತ ಕಥೆಗಾರ, ಸಂಘಟಕ ಕುಕ್ಕರಹಳ್ಳಿ ಬಸವರಾಜು ನಿಧನ

ಮೈಸೂರು : ಖ್ಯಾತ ಕಥೆಗಾರ, ಲೇಖಕ, ರಂಗಕರ್ಮಿ ಕುಕ್ಕರಹಳ್ಳಿ ಬಸವರಾಜು ಅವರು ಗುರುವಾರ ಮೈಸೂರಿನ ರಾಮಕೃಷ್ಣನಗರದ ತಮ್ಮ ನಿವಾಸದಲ್ಲಿ  ನಿಧನರಾಗಿದ್ದಾರೆ. ಅವರಿಗೆ  67 ವರ್ಷ ವಯಸ್ಸಾಗಿತ್ತು.

ಮೈಸೂರು ನಗರದ ಕುಕ್ಕರಹಳ್ಳಿಯಲ್ಲಿ ಧನಗಳ್ಳಿ ಸಿದ್ಧಯ್ಯ ಮತ್ತು ನಿಂಗಮ್ಮ ದಂಪತಿಯ ಮಗನಾಗಿ ಜನಿಸಿದ ಬಸವರಾಜು ಅವರು ಬಹುಮುಖ ಪ್ರತಿಭೆ. ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಮೈಸೂರಿನ ಮಹಾರಾಜ ಪದವಿ ಪೂರ್ವ ಕಾಲೇಜು ಮತ್ತು ಮರಿಮಲ್ಲಪ್ಪನವರ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸಿದ್ದರು. ಪದವಿ ಓದುತ್ತಿದ್ದಾಗಲೇ “ಸ್ಟೂಡೆಂಟ್ ಫಾರ್ ಡೆಮಾಕ್ರಸಿʼ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿಯಾಗಿ ದುಡಿದಿದ್ದರು.

ಪ್ರವೃತ್ತಿಯಲ್ಲಿ ಕಥೆಗಾರರಾಗಿರುವ ಕುಕ್ಕರಹಳ್ಳಿ ಬಸವರಾಜು ಸಾಹಿತ್ಯದ ಜತೆ ಸಾಕ್ಷರತೆ ಚಳವಳಿ, ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ದುಡಿದವರು. 2019ರಲ್ಲಿ ಅವರ ಕಾಲನೊದ್ದವರು ನೀಳ್ಗತೆ ಪ್ರಕಟವಾಗಿದ್ದು, 2020ರಲ್ಲಿ ಅವರ ʻಅವ್ವ ಬರಲೇ ಇಲ್ಲʼ ಕವನ ಸಂಗ್ರಹ ಪ್ರಕಟವಾಗಿದೆ.

ರಂಗಕರ್ಮಿಯಾಗಿ ಬಿ.ವಿ.ಕಾರಂತರ ನಿರ್ದೇಶನದ ಹಯವದನ ನಾಟಕದ ಜೊತೆಗೆ, ಹಲವು ನಿರ್ದೇಶಕರ ನಾಟಕಗಳು ಹಾಗೂ ಸಾಕ್ಷರತೆಯ ಬೀದಿ ನಾಟಕಗಳಲ್ಲಿ ನಟಿಸಿದ್ದರು. ಮೈಸೂರಿನ ಮಂಟೇಸ್ವಾಮಿ ಪ್ರತಿಷ್ಠಾನದ ಸದಸ್ಯರಾಗಿ, “ಸಂಕುಲʼ ಸಾಂಸ್ಕೃತಿಕ ಸಂಘಟನೆಯ ಕಾರ್ಯದರ್ಶಿಯಾಗಿಯೂ ದುಡಿದಿದ್ದರು. ರಂಗಾಯಣ ಹಾಗೂ ಮಂಟೇಸ್ವಾಮಿ ಪ್ರತಿಷ್ಠಾನದ ಜತೆಗೂಡಿ ಮಂಟೇಸ್ವಾಮಿ ಜಾನಪದ ಮೇಳ, ರಂಗಾಯಣದೊಟ್ಟಿಗೆ ವಿಮರ್ಶೆಯ ವಿಮರ್ಶೆ, ಮೈಸೂರಿನ ಜಿಲ್ಲಾಡಳಿತದೊಂದಿಗೆ ಜಿಲ್ಲಾ ಪಂಚಾಯಿತಿಯ ಆವರಣದಲ್ಲಿ ʻ50ರ ಮಧ್ಯರಾತ್ರಿʼ ಸ್ವಾತಂತ್ರ್ಯದ ಆಚರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿದ್ದರು.

ನಿಸರ್ಗ ಟ್ರಸ್ಟ್(ರಿ) ನೈಸರ್ಗಿಕ ಆಹಾರೋತ್ಪನ್ನ ಕೇಂದ್ರದ ಅಧ್ಯಕ್ಷರಾಗಿ, ಸಾವಯವ ರೈತರ ಮಾರುಕಟ್ಟೆಗೆ ರೈತರ ಸಂತೆಯ ಆಯೋಜನೆ, ಸಾವಯವ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟ ಕೇಂದ್ರಗಳ ತೆರೆಯುವಿಕೆ, ಹೊನ್ನೂರಿನಲ್ಲಿ ನಿಸರ್ಗ ಟ್ರಸ್ಟ್ ವತಿಯಿಂದ ಸಾವಯವ ರೈತರಿಗಾಗಿ ಸಾಮೂಹಿಕ ಹೈನುಗಾರಿಕೆ ಬೇಸಾಯ ಮುಂತಾದ ಕಾರ್ಯಗಳಲ್ಲಿ ಕ್ರಿಯಾಶೀಲರಾಗಿದ್ದರು. ರಾಜ್ಯ ಸಂಪನ್ಮೂಲ ಕೇಂದ್ರ ಮೈಸೂರು ಇವರು ಆಯೋಜಿಸುತ್ತಿದ್ದ ಸಾಕ್ಷರತಾ ಚಳುವಳಿಗಳಲ್ಲಿ ಹಾಗೂ ಸಾಹಿತ್ಯ ರಚನಾ ಶಿಬಿರದಲ್ಲಿ ಪಾಲ್ಗೊಂಡಿದ್ದ ಕುಕ್ಕರಹಳ್ಳಿ ಬಸವರಾಜು ʻನೀನೇ ಕಾರಣʼ, ʻಸಾಕಮ್ಮನ ಕಥೆʼ, ʻಸಮಾನತೆʼ, ʻಹುಲಿ ಮತ್ತು ಕತ್ತೆʼ ಸೇರಿದಂತೆ ಹಲವು ಕಥಾ ಪುಸ್ತಕಗಳನ್ನು ರಚಿಸಿದ್ದಾರೆ.

ಮಾನವ ನಿರ್ಮಿತ ಅದ್ಭುತಗಳು ನವಸಾಕ್ಷರಿಗಾಗಿ ಮಾಹಿತಿ ಪುಸ್ತಕ, ʻರಾಗ ಸಂಗಮʼ ವಿವಿಧ ಲೇಖಕರುಗಳ ನಾಟಕ ಸಂಗ್ರಹಿಸಿದ್ದಾರೆ. ʻಸೂರಿಲ್ಲದ ರಂಗದಲಿʼ (ಮೂರು ಸಂಪುಟ) ವಿವಿಧ ಲೇಖಕರುಗಳ ನಾಟಕ ಸಂಗ್ರಹ ಸೇರಿದಂತೆ ಹಲವು ವೃತ್ತಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ʼಮೊಕಾರʼ ಸಂಕಲನದ ʻನೀರುʼ ಕಥೆ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹಾಗೂ ಶಿವಮೊಗ್ಗ ತೋಟಗಾರಿಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು.

ʻಬಾಳಾಟʼ ಕಥಾಸಂಕನದಲ್ಲಿರುವ ಮುನ್ನುಡಿಯಲ್ಲಿನ ಅವ್ವ ಪದ್ಯ ಮತ್ತು ಹಂಪಿ ಕನ್ನಡ ವಿವಿ ಪ್ರಕಟಿಸಿದ ” ನಾನೇಕೆ ಬರೆಯುತ್ತೇನೆ ʼಎನ್ನುವ ಲೇಖನ ಕಲಬುರ್ಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಎಂಎ ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು.

Donate Janashakthi Media

Leave a Reply

Your email address will not be published. Required fields are marked *