ಫೋಟೋ ಕೃಪೆ ʼದಿ ಪ್ರಿಂಟ್ʼ
ಶ್ರೀನಗರ : ಕಾಶ್ಮೀರದಲ್ಲಿ, ಶ್ರೀನಗರದ ಬಳಿ ಹೈದರ್ಪೊರಾದಲ್ಲಿ ನವಂಬರ್ 15ರಂದು ನಡೆದ ಎನ್‍ಕೌಂಟರ್ ನಲ್ಲಿ ನಾಲ್ಕು ಉಗ್ರಗಾಮಿಗಳು ಹತರಾಗಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೋಲಿಸ್ ತಿಳಿಸಿದ್ದರು.. ಅವರ ಹೆಣಗಳನ್ನು, ಕಾನೂನು ವ್ಯವಸ್ಥೆಯ ಸಮಸ್ಯೆಯಾಗದಿರಲೆಂದು ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ, ಹೂಳಲಾಗಿದೆ ಎಂದೂ ವರದಿಯಾಗಿದೆ. ಆದರೆ ಅವರಲ್ಲಿ ಇಬ್ಬರ ಸಂಬಂಧಿಕರು ಅವರು ಉಗ್ರಗಾಮಿಗಳಲ್ಲ, ಅಥವ ಭಯೋತ್ಪಾದಕರ ಬೆಂಬಲಿಗರಲ್ಲ, ತಮಗೆ ನ್ಯಾಯ ಬೇಕು ಅವರ ಹೆಣಗಳನ್ನು ಸೂಕ್ತ ಅಂತಿಮ ಸಂಸ್ಕಾರಗಳನ್ನು ನಡೆಸಲು ತಮಗೆ ಕೊಡಬೇಕು ಎಂದು ನವಂಬರ್ 17ರಂದು ಶ್ರೀನಗರದ ಪ್ರೆಸ್ ಎಂಖ್ಲೇವ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ, ಈ ಕುರಿತು ಅವರು ಜಮ್ಮು-ಕಾಶ್ಮೀರದ ಉಪರಾಜ್ಯಪಾಲರನ್ನು ವಿನಂತಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಹತ್ಯೆಯಾದ ಅಲ್ತಾಫ್ ಅಹ್ಮದ್ ಮತ್ತು ಮುದಸಿರ್ ಗುಲ್ ಉಗ್ರಗಾಮಿಗಳಲ್ಲ. ಅವರನ್ನು ಮಾನವ ಗುರಾಣಿಗಳನ್ನಾಗಿ ಬಳಸಲಾಗಿದೆ ಎಂಬ ಸಂದೇಹ ಉಂಟಾಗಿದೆ. ನಿಶ್ಶಸ್ತ್ರ ನಾಗರಿಕರನ್ನು ಮಾನವ ಗುರಾಣೀಗಳನ್ನಾಗಿ ಬಳಸಿಕೊಳ‍್ಳುವುದು ಅತ್ಯಂತ ಆಘಾತಕಾರಿ ಸಂಗತಿ . ಆದ್ದರಿಂದ ಈ ಬಗ್ಗೆ ಒಂದು ನ್ಯಾಯಾಂಗ ತನಿಖೆ ನಡೆಸಬೇಕು, ಅವರ ಹೆಣಗಳನ್ನು ಸಂಬಂಧಿಕರು ಕೇಳುತ್ತಿರುವಂತೆ ಸರಿಯಾದ ಅಂತಿಮ ಸಂಸ್ಕಾರ ನಡೆಸಲಿಕ್ಕಾಗಿ ಕೊಡಬೇಕು ಎಂದು ರಾಜ್ಯದ ಹಿರಿಯ ಸಿಪಿಐ(ಎಂ) ಮುಖಂಡ ಮಹಮ್ಮದ್ ಯುಸುಫ್ ತರಿಗಾಮಿ ಆಡಳಿತವನ್ನು ಆಗ್ರಹಿಸಿದ್ದಾರೆ. ಯಾವ ಸನ್ನಿವೇಶದಲ್ಲಿ ಈ ಹತ್ಯೆಗಳು ನಡೆದಿವೆ ಎಂಬುದರ ಆಮೂಲಾಗ್ರ ತನಿಖೆ ನಡೆಸಬೇಕಾಗಿದೆ ಎಂಧೂ ಅವರು ಹೇಳಿದ್ದಾರೆ.
ಕಾಶ್ಮೀರದಲ್ಲಿ ಕಾನೂನಿನ ಆಳ್ವಿಕೆಯನ್ನು ರಾಜಾರೋಷವಾಗಿ ಉಲ್ಲಂಘಿಸಲಾಗುತ್ತಿದೆ. ಇದು ಅತ್ಯಂತ ದುರದೃಷ್ಟಕರ. ಮನಬಂದಂತೆ ಜನಗಳನ್ನು ಬಂಧಿಸುವುದು, ಯುವಜನರನ್ನು ಕರಾಳ ಕಾಯ್ದೆಗಳ ಅಡಿಯಲ್ಲಿ ಹಿಡಿದು ಹಾಕುವುದು ಮತ್ತು ಈಗ ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸುವ ಆರೋಪ, ಕೆಟ್ಪ ಪರಿಸ್ಥಿತಿ ಮತ್ತಷ್ಟು ಹೊಲಸಾಗುತ್ತಿದೆ ಎಂದು ತರಿಗಾಮಿ ಖೇದ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರುಕ್ ಅಬ್ದುಲ್ಲ ಕೂಡ ಉಪರಾಜ್ಯಪಾಲರು ಮಧ್ಯಪ್ರವೇಶಿಸಿ ನಿಷ್ಪಕ್ಷಪಾತ ತನಿಖೆಗೆ ಮತ್ತು ಹತ್ಯೆಯಾದ ನಾಗರಿಕರ ಶವಗಳನ್ನು ಅವರ ಸಂಬಂಧಿಕರಿಗೆ ಹಿಂದಿರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಮತ್ತೊಬ್ಬರು ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರು ಕೂಡ ಈ ಹತ್ಯೆಗಳ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.