ತಿರುವನಂತಪುರಂ: ಕರ್ನಾಟಕ ಹಾಗೂ ಕೇರಳ ಗಡಿ ಭಾಗದ ಕಾಸರಗೋಡು ಜಿಲ್ಲೆಯಲ್ಲಿನ ಕನ್ನಡ ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿಗೆ ಕೇರಳ ಸರ್ಕಾರ ಬದ್ಧವಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿರುವ ಅವರು ಕೇರಳ ಗಡಿ ಭಾಗದ ಕನ್ನಡಿಗರ ಹಿತಾಸಕ್ತಿ ಕಾಪಾಡಲು ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದ್ದಾರೆ.
ಕೇರಳದಲ್ಲಿರುವ ಕನ್ನಡಿಗರ ಹಿತಾಸಕ್ತಿ ಮತ್ತು ರಕ್ಷಣೆಗೆ ಕುರಿತಂತೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ ಸೋಮಶೇಖರ ಅವರು ಕೆಲವು ದಿನಗಳ ಹಿಂದೆ ಕೇರಳ ಸರ್ಕಾರಕ್ಕೆ ಬರೆದ ಪತ್ರ ಬರೆದಿದ್ದರು. ಅವರ ಪತ್ರಕ್ಕೆ ಪ್ರತಿಕ್ರಿಯಿಸಿ ಕೇರಳ ಸರ್ಕಾರವು ಮರುಪತ್ರ ಬರೆದಿದೆ.
ಕನ್ನಡ ಭಾಷೆಯನ್ನು ನಿಭಾಯಿಸಲು ಜಿಲ್ಲಾ ಪೊಲೀಸ್ ಮುಖ್ಯಸ್ಥರ ಕಚೇರಿಯಲ್ಲಿ ಕನ್ನಡ ಮತ್ತು ಮಲಯಾಳಂ ಬಲ್ಲ ಗುಮಾಸ್ತರನ್ನು ನೇಮಿಸಲಾಗಿದೆ. ಕಾಸರಗೋಡು ಜಿಲ್ಲೆಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಕುಂದುಕೊರತೆಗಳನ್ನು ಹೆಚ್ಚುವರಿ ಎಸ್ಪಿ ಹರಿಶ್ಚಂದ್ರ ನಾಯ್ಕ್ ಮೂಲಕ ಪರಿಹರಿಸಲಾಗುವುದು ಎಂದು ಕೇರಳ ಸರ್ಕಾರ ಪತ್ರದಲ್ಲಿ ತಿಳಿಸಿದೆ.
ಕೇರಳ ಸರಕಾರದ ನಡೆಗೆ ಮೆಚ್ಚುಗೆ : ಕಾಸರಗೋಡು ಜಿಲ್ಲೆಯಲ್ಲಿ ವಾಸಿಸುವ ಕನ್ನಡಿಗರ ಹಿತದೃಷ್ಟಿಯಿಂದ ಕನ್ನಡ ಪರ ನೀತಿಯನ್ನು ಜಾರಿಗೆ ತರಲು ಮುಂದಾಗಿರುವ ಕೇರಳ ಸರ್ಕಾರದ ಚಿಂತನೆಗೆ ಕರ್ನಾಟಕ ಸರ್ಕಾರ ಮತ್ತು ನಾಡಿನ ಜನತೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್ ಅಭಿನಂದನೆ ಸಲ್ಲಿಸಿ, ಕಾಸರಗೋಡು ಜಿಲ್ಲೆಯಲ್ಲಿ ನೆಲೆಸಿರುವ ಕನ್ನಡಿಗರ ಅನುಕೂಲಕ್ಕಾಗಿ ವಿವಿಧ ಸರಕಾರಿ ಇಲಾಖೆಗಳಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿರುವ ಕೇರಳ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.