ಕಸಾಪ ಚುನಾವಣೆ: ಹೈಕೋರ್ಟ್ ಆದೇಶದ ಪ್ರತಿ ಅರ್ಪಿಸಿದ ಶೇಖರಗೌಡ ಮಾಲಿಪಾಟೀಲ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿಗೆ ಎರಡು ತಿಂಗಳಲ್ಲಿ ಚುನಾವಣೆ ನಡೆಸುವಂತೆ ಧಾರವಾಡ ಹೈಕೋರ್ಟ್ ಪೀಠ ನೀಡಿದ ಆದೇಶದ ಪ್ರತಿಯನ್ನು ಬುಧವಾರ ರಾಜ್ಯ ಸರ್ಕಾರದ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವಕುಮಾರ ಅವರಿಗೆ ರಾಜ್ಯ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶೇಖರಗೌಡ ಮಾಲಿಪಾಟೀಲ ಸಲ್ಲಿಸಿದರು.

ಹೈಕೋರ್ಟ್ ಆದೇಶದ ಪ್ರತಿ ಕೈಗೆ ಸಿಕ್ಕ ನಂತರ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಿಗದಿಪಡಿಸಲು ಮನವಿ ಮಾಡಿಕೊಳ್ಳುವಂತೆ ರಿಟ್ ಹಾಕಿದ್ದ ಶೇಖರಗೌಡರಿಗೆ ಕೋರ್ಟು ಆದೇಶಿಸಿತ್ತು. ಅದರಂತೆ ಸಹಕಾರ ಇಲಾಖೆ ಕಾರ್ಯದರ್ಶಿ, ಚುನಾವಣಾ ಅಧಿಕಾರಿ ಹಾಗೂ ಸಹಕಾರ ಇಲಾಖೆ ಸಚಿವ  ಎಸ್.ಟಿ. ಸೋಮಶೇಖರ್ ಅವರನ್ನು ಭೇಟಿ ಮಾಡಿ, ಆದಷ್ಟು ಬೇಗ ಕಸಾಪಗೆ ಚುನಾವಣೆ ನಡೆಸಬೇಕು. ಕೋವಿಡ್ ಕಾರಣಕ್ಕೆ ಮುಂದೂಡಲಾಗಿದ್ದ ಚುನಾವಣಾ ಪ್ರಕ್ರಿಯೆ ಶುರುಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಸಹಕಾರ ಇಲಾಖೆ‌ ಪ್ರಧಾನ ಕಾರ್ಯದರ್ಶಿ, ಚುನಾವಣಾ ಅಧಿಕಾರಿಗಳು ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದು ಶೇಖರಗೌಡ ಮಾಲಿಪಾಟೀಲ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಹಕಾರ ಕ್ಷೇತ್ರದ ಬಾಗಲಕೋಟೆಯ ಹೊನ್ನಯ್ಯ ಹಿರೇಮಠ, ರವೀಂದ್ರ ಕಲಬುರ್ಗಿ, ಶಿವಮೊಗ್ಗ ರಾಜು ಅವರು ಜೊತೆ ಇದ್ದರು.

ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಡೆಸಬೇಕೆಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಅವರನ್ನು ಭೇಟಿ ಮಾಡಿದ ಶೇಖರಗೌಡ ಮಾಲಿಪಾಟೀಲ ಹೈಕೋರ್ಟ್ ಪ್ರತಿಯನ್ನು ನೀಡಿದರು. ಈ ಸಂದರ್ಭ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ. ದೇವೇಗೌಡ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *