ಬೆಂಗಳೂರೂ: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈವರೆಗೆ ನಾಮಪತ್ರ ಸಲ್ಲಿಸಿದವರ ಸಂಖ್ಯೆ 9ಕ್ಕೆ ತಲುಪಿದೆ.
ಏ.7ರವರೆಗೆ ನಾಮಪತ್ರ ಸಲ್ಲಿಸಲು ಕಾಲಾವಕಾಶವಿದ್ದು, ಏ.8ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ.12ರಂದು ಸ್ಪರ್ಧೆಯಲ್ಲಿ ಅಂತಿಮವಾಗಿ ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗುತ್ತದೆ. ರಾಜ್ಯಾಧ್ಯಕ್ಷ ಹುದ್ದೆಯನ್ನೇರಲು ಆಕಾಂಕ್ಷಿಗಳು ಬಿರುಸಿನ ಪ್ರಚಾರ ಪ್ರಾರಂಭಿಸಿದ್ದಾರೆ. ಈಗಾಗಲೇ ವ.ಚ. ಚನ್ನೇಗೌಡ, ಮಹೇಶ್ ಜೋಶಿ, ಸಂಗಮೇಶ ಬಾದವಾಡಗಿ, ಸಿ.ಕೆ. ರಾಮೇಗೌಡ, ರಾಜಶೇಖರ ಮುಲಾಲಿ, ಬಸವರಾಜ ಸಿ. ಹಳ್ಳೂರ, ಬಾಡದ ಬದ್ರಿನಾಥ್ ಹಾಗೂ ಶಿವರಾಜ ಪಾಟೀಲ ನಾಮಪತ್ರ ಸಲ್ಲಿಸಿದ್ದಾರೆ.
ಕೇರಳ ಗಡಿನಾಡ ಘಟಕಕ್ಕೆ ಕಾಸರಗೋಡಿನ ರಾಧಾಕೃಷ್ಣ ಅವರು ಶನಿವಾರ ನಾಮಪತ್ರ ಸಲ್ಲಿಸಿದರು. ಸುಬ್ರಮಣ್ಯ ವಿ. ಭಟ್ ಕೂಡ ಈ ಘಟಕಕ್ಕೆ ಸ್ಪರ್ಧಿಸುತ್ತಿದ್ದಾರೆ. ಆಂಧ್ರ ಪ್ರದೇಶ ಗಡಿನಾಡ ಘಟಕಕ್ಕೆ ಕುಣೆ ಬಾಲರಾಜ್ ಹಾಗೂ ಮಹಾರಾಷ್ಟ್ರ ಗಡಿನಾಡ ಘಟಕಕ್ಕೆ ಎಸ್.ಎಸ್. ಸಾಲೀಮಠ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಪರಿಷತ್ತಿನ ರಾಜ್ಯಾಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ಮೇ 9ರಂದು ಚುನಾವಣೆ ನಡೆಯಲಿದೆ.