ಬೆಂಗಳೂರು: ಬೆಂಗಳೂರು ಬದುಕು ದುಬಾರಿಯಾಗಲು ಕಾರಣವಾಗಲಿದೆ. ಇದಕ್ಕೆ ಕಾರಣ ಕಸ. ವಿದ್ಯುತ್ ಬಿಲ್ ಮೂಲಕ ಕಸ ನಿರ್ವಹಣೆ ಸೆಸ್ ಸಂಗ್ರಹಕ್ಕೆ ಬಿಬಿಎಂಪಿ ನಿರ್ಧಾರ ಮಾಡಿದೆ. ಇನ್ನು ನಿತ್ಯದ ಖರ್ಚಿನ ಜೊತೆಗೆ ಇದೀಗ ಕಸದ ಬಿಲ್ (Garbage Bill) ಕಟ್ಬಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ವಿದ್ಯುತ್ ಬಿಲ್ ಗೆ ಅನುಗುಣವಾಗಿ ಕಸ ನಿರ್ವಹಣಾ ಸೆಸ್ ಸಂಗ್ರಹಕ್ಕೆ ಅನುಮತಿ ಕೋರಿ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.
ಕಸನಿರ್ವಹಣಾ ಸೆಸ್ ಸಂಗ್ರಹಕ್ಕೆ ಬೆಸ್ಕಾಂ ನೆರವು ಕೋರಲು ನಿರ್ಧರಿಸಲಾಗಿದೆ. ಬಿಬಿಎಂಪಿ ಆಡಳಿತಗಾರರಿಗೆ ಬಿಬಿಎಂಪಿ ಮುಖ್ಯ ಆಯುಕ್ತರಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಗೃಹ ತ್ಯಾಜ್ಯ ಉತ್ಪಾದಕರಿಗೆ ವಿದ್ಯುತ್ ಬಿಲ್ ಆಧರಿಸಿ ಪ್ರಸ್ತಾಪಿಸಿರುವ ಸೆಸ್ ವಿವರ ಹೀಗಿದೆ.
ವಿದ್ಯುತ್ ಬಿಲ್ – ಕಸ ಸೆಸ್
200 ರೂ. ವರೆಗೆ – 30 ರೂ.
200-500 ರೂ – 60 ರೂ.
500 – 1000 ರೂ – 100 ರೂ.
1001 – 2000 ರೂ – 200 ರೂ.
2001 – 3000 ರೂ – 350 ರೂ.
3000 ರೂ.ಗಿಂತ ಹೆಚ್ಚು – 500 ರೂ.
ಏನಿದು ಗಾರ್ಬೆಜ್ ಬಿಲ್?
ಬೆಂಗಳೂರು ಮಂದಿಗೆ ಕರೆಂಟ್ ಬಿಲ್ ಜತೆ ಗಾರ್ಬೆಜ್ ಯೂಸರ್ ಫೀ ಹೊಡೆತ ಬೀಳೋದು ಪಕ್ಕ ಆಗ್ತಿದೆ. ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡುತ್ತಿರುವ ಬಿಬಿಎಂಪಿ, ಕಸ ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡ್ತಿದೆ. ಇದೀಗ ಕಸ ನಿರ್ವಹಣೆಗೆ ಆದಾಯ ಕ್ರೂಢೀಕರಣಕ್ಕೆ ಪ್ಲ್ಯಾನ್ ಮಾಡಿರೋ ಬಿಬಿಎಂಪಿ ಇದೀಗ ಕಸ ಸಂಗ್ರಹಣೆಗೆ ಬಿಲ್ ನೀಡಲು ಮುಂದಾಗಿದೆ. ಬೆಂಗಳೂರಿಗರಿಗೆ ಕರೆಂಟ್ ಬಿಲ್ ಜೊತೆ ಕಸದ ಬಿಲ್ ಕೊಡುವ ಬಗ್ಗೆ ಚಿಂತನೆ ನಡೆಸಿದೆ.
ಬೆಂಗಳೂರಿಗರಿಗೆ ಡಬಲ್ ಟ್ಯಾಕ್ಸ್ ಹೊರೆ
ಬಿಬಿಎಂಪಿ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ಸಿಕ್ಕರೆ, ಬೆಂಗಳೂರಿನ ಜನರಿಗೆ ಡಬಲ್ ಟ್ಯಾಕ್ಸ್ ಹೊರೆ ಬೀಳಲಿದೆ. ಈಗಾಗಲೇ ಕರೆಂಟ್ ಬಿಲ್ ಕೂಡ ಹೆಚ್ಚಾಗಿಯೇ ಬರುತ್ತೆ ಅಂತ ಹಲವು ದೂರುಗಳು ಕೇಳಿ ಬರುತ್ತಲೇ ಇದೆ. ಇದೀಗ ಕರೆಂಟ್ ಬಿಲ್ ಆಧರಿಸಿ ಗಾರ್ಬೆಜ್ ಬಿಲ್ ಹಾಕಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ಕೊಟ್ರೆ ಬೆಂಗಳೂರಿನಲ್ಲಿರುವ ನಿವಾಸಿಗಳು ಕರೆಂಟ್ ಬಿಲ್ ಜೊತೆಗೆ ಗಾರ್ಬೆಜ್ ಟ್ಯಾಕ್ಸ್ ಕೂಡ ಕಟ್ಟಬೇಕು.
ಪ್ರಾಪರ್ಟಿ ಟ್ಯಾಕ್ಸ್ ಜೊತೆ ಗಾರ್ಬೆಜ್ ಸೆಸ್
ಬೆಂಗಳೂರು ಜನ ಸದ್ಯಕ್ಕೆ ವರ್ಷಕ್ಕೊಮ್ಮೆ ಪ್ರಾಪರ್ಟಿ ಟ್ಯಾಕ್ಸ್ ಕಟ್ಟುವ ವೇಳೆಯೇ ಗಾರ್ಬೆಜ್ ಸೆಸ್ ಕಟ್ಟುತ್ತಿದ್ದಾರೆ. ಆದ್ರೂ ಬಿಬಿಎಂಪಿಗೆ ಸೆಸ್ ಹಣ ಕಸ ನಿರ್ವಹಣೆಗೆ ಸಾಕಾಗುತ್ತಿಲ್ಲವೆಂದು ಬಿಬಿಎಂಪಿ ಇನ್ನು ಮುಂದೆ ಪ್ರತಿ ತಿಂಗಳು ಮನೆ ಮನೆಗಳಿಂದ ಗಾರ್ಬೆಜ್ ಟ್ಯಾಕ್ಸ್ ವಸೂಲಿ ಮಾಡಲು ಮುಂದಾಗಿದೆ. ಪ್ರತಿ ತಿಂಗಳು 40 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಇದರಿಂದ ಕಸದ ಗುತ್ತಿಗೆದಾರರಿಗೆ ಬಿಲ್, ಪೌರಕಾರ್ಮಿಕರಿಗೆ ಸಂಬಳ ನೀಡಲು ಅನುಕೂಲವಾಗಲಿದೆ.
ಗಾರ್ಬೆಜ್ ಸೆಸ್ ಬಗ್ಗೆ ಬಿಬಿಎಂಪಿ ಆಯುಕ್ತರ ಸ್ಪಷ್ಟನೆ
ಇನ್ನು ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿದ್ದು ಕಸ ಶುಲ್ಕ ವಿಚಾರವಾಗಿ ಹಳೇ ನಿಯಮಗಳೇ ಇರುತ್ತೆ. ಯಾವುದೇ ರೀತಿಯ ಬದಲಾವಣೆ ಸದ್ಯಕ್ಕೆ ಮಾಡಿಲ್ಲ. ಗಾರ್ಬೆಜ್ ಸೆಸ್ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.