ಬೆಂಗಳೂರು: ರಾಜ್ಯ ವಿಧಾನಸಭಾ ಅವಧಿ ಮೇ 24ಕ್ಕೆ ಅಂತ್ಯವಾಗಲಿದ್ದು, ಅದರ ಒಳಗಾಗಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ. ಈಗಾಗಲೇ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರಗಳನ್ನು ಕೈಗೊಂಡಿದೆ. ಇದರೊಂದಿಗೆ, ಮತದಾರರನ್ನು ಓಲೈಸಲು ಬೆಳೆಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಿವೆ. ಇತ್ತ ಚುನಾವಣಾ ಆಯೋಗ ವಿಧಾನಸಭಾ ಚುನಾವಣಾ ಪ್ರಕ್ರಿಯೆಗಳಲ್ಲಿ ತೊಡಗಿದೆ. ಪೊಲೀಸರ ಸಹಾಯದೊಂದಿಗೆ, ಆಯೋಗವು ವಿವಿದೆಡೆ ದಾಳಿ ನಡೆಸಿ ಮತದಾರರಿಗೆ ಹಂಚಲು ಶೇಖರಿಸಿಟ್ಟಿರುವ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.
ಚುನಾವಣಾ ಆಯೋಗವು ಇದುವರೆಗೆ ವಿವಿದೆಡೆ ದಾಳಿ ನಡೆಸಿ ಬರೋಬ್ಬರಿ 9.29 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ ರೌಡಿ ಪಟ್ಟಿಗೆ ಒಳಗಾಗಿರುವವು ತಮ್ಮ ಕಚೇರಿಗಳಲ್ಲಿ ಸಂಗ್ರಹಿಸಿಟ್ಟ ಅಕ್ಕಿ ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ ಹಾಗೂ ಕೋಲಾರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನು ಓದಿ: ಮತದಾರರಿಗೆ ಉಚಿತ ಉಡುಗೊರೆ-ಹಣದ ಆಮಿಷ: ಕಾನೂನು ಕ್ರಮಕ್ಕೆ ಚುನಾವಣಾ ಆಯೋಗ ಸೂಚನೆ
ಶಿವಾಜಿನಗರ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿರುವ ಚುನಾವಣಾ ಆಯೋಗ ಮತ್ತು ಪೊಲೀಸರು ಮತದಾರರಿಗೆ ಹಂಚಲು ಸಂಗ್ರಹಿಸಲಾದ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ಅಕ್ಕಿ ಚೀಲ ಸಂಗ್ರಹದ ಶಂಕೆ ಹಿನ್ನೆಲೆ ಶಿವಾಜಿನಗರದ ನೋವಾ ರಸ್ತೆಯಲ್ಲಿರುವ ಪಾಲಿಕೆ ಮಾಜಿ ಸದಸ್ಯ ಇಸ್ತಿಯಾಖ್ ಕಚೇರಿ ಮೇಲೆ ದಾಳಿ ನಡೆಸಿ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಮಾಸ್ತಿ ಗ್ರಾಮದಲ್ಲಿರುವ ಎಂಎಸ್ಐಎಲ್ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹ ಮಾಡಲಾಗಿದ್ದು ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 22.5 ಲಕ್ಷ ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ. ವರದಿಯಂತೆ ದಾಖಲೆ ಪುಸ್ತಕದಲ್ಲಿ ಇದ್ದ ಲೆಕ್ಕಕ್ಕಿಂತ ಹೆಚ್ಚು ಮದ್ಯ ಸಂಗ್ರಹ ಹಿನ್ನೆಲೆ ಅಬಕಾರಿ ಪೊಲೀಸರು ವೇಣು ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ತುಮಕೂರು ನಗರ ವಿಧಾನಸಭಾದಲ್ಲಿ ಬೊಮ್ಮನಹಳ್ಳಿ ಬಾಬು (ಅಟ್ಟಿಕಾ ಬಾಬು) ಎಂಬುವರಿಗೆ ಸೇರಿದ ಮನೆಯ ಮೇಲೆ ದಾಳಿ ಮಾಡಿ ನಡೆದಿದ್ದು, ನೂರಾರು ಸಂಖ್ಯೆಯ ಆಹಾರ ಪೊಟ್ಟಣಗಳು ಪತ್ತೆಯಾಗಿವೆ. ಪ್ರತಿ ಚೀಲದಲ್ಲಿ ಅಕ್ಕಿ, ಸಕ್ಕರೆ, ಬೇಳೆ, ಬೆಲ್ಲ, ಮೈದ ಇತರೆ ಆಹಾರ ವಸ್ತುಗಳಿದ್ದವು.
ಇದನ್ನು ಓದಿ: ವಲಸಿಗರು ತಮ್ಮ ಸ್ಥಳದಲ್ಲೇ ಮತದಾನ ಮಾಡಲು ರಿಮೋಟ್ ಮತಯಂತ್ರ ತಯಾರಿಸಿದ ಚುನಾವಣಾ ಆಯೋಗ
ಚೀಲದ ಮೇಲೆ ಬೊಮ್ಮನಹಳ್ಳಿ ಬಾಬು ಚಿತ್ರವಿದ್ದು, ಕ್ಷೇತ್ರದ ಅಭ್ಯರ್ಥಿ ಎಂದು ಮುದ್ರಿಸಲಾಗಿದೆ. ಯುಗಾದಿ ಹಬ್ಬದ ಸಮಯದಲ್ಲಿ ಜನರಿಗೆ ಹಂಚಿಕೆ ಮಾಡಲು ಆಹಾರ ಪೊಟ್ಟಣಗಳನ್ನು ದಾಸ್ತಾನು ಮಾಡಲಾಗಿತ್ತು ಎನ್ನಲಾಗಿದೆ.
ಜೆಡಿಎಸ್ ನಿಂದ ಸ್ಪರ್ಧಿಸಲು ಮುಂದಾಗಿರುವ ಎನ್.ಗೋವಿಂದರಾಜು ಎಂಬವರು ಮತದಾರರಿಗೆ ಸೀರೆ, ಹಣ ಹಂಚಿ ದೇವರ ಮೇಲೆ ಪ್ರಮಾಣ ಮಾಡಿಸಿಕೊಂಡು ಆಮಿಷ ಒಡ್ಡುತ್ತಿದ್ದಾರೆ ದೂರು ನೀಡಿರುವುದು ವರದಿಯಾಗಿದೆ.
ಇದಲ್ಲದೆ ಚುನಾವಣಾ ಆಯೋಗ ಇದುವರೆಗೂ ಸುಮಾರು 1.21 ಕೋಟಿ ರೂಪಾಯಿ ನಗದು ವಶಕ್ಕೆ ಪಡೆದುಕೊಂಡಿದೆ. 2.66 ಕೋಟಿ ಮೌಲ್ಯದ, 59,265 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ. 1.88 ಕೋಟಿ ಮೌಲ್ಯದ 577 ಕೆ.ಜಿ. ವಿವಿಧ ಮಾದಕ ವಸ್ತುಗಳು, ಇದಲ್ಲದೆ, 1.87 ಕೋಟಿ ಮೌಲ್ಯದ 5.32 ಕೆಜಿ ಚಿನ್ನ ಹಾಗೂ 80 ಲಕ್ಷ ಮೊತ್ತದ 15 ಕೆ.ಜಿ. ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ. 20,114 ಸೀರೆ, ಕುಕ್ಕರ್, ಲ್ಯಾಪ್ಟಾಪ್ ಸೇರಿದಂತೆ ಇತರ ಆಮಿಷ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಬರೋಬ್ಬರಿ 1.58 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ