ಬೆಂಗಳೂರು : ಡಿಸೆಂಬರ್ 27ರಂದು 19 ಜಿಲ್ಲೆಗಳಲ್ಲಿ ನಡೆದ 58 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ವಿವಿಧ ನಗರ ಸಂಸ್ಥೆಗಳ 9 ವಾರ್ಡ್ಗಳ ಉಪಚುನಾವಣೆ ಹಾಗೂ ಅವಧಿ ಮುಗಿದಿರುವ 59 ಗ್ರಾಮ ಪಂಚಾಯಿತಿಗಳ ಚುನಾವಣೆಯ ಫಲಿತಾಂಶ ಕೂಡ ಇಂದು ಹೊರಬಿದ್ದಿದೆ.
ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಒಟ್ಟಾರೆ 1185 ವಾರ್ಡ್‍ಗಳಲ್ಲಿ ಕಾಂಗ್ರೆಸ್ 501, ಬಿಜೆಪಿ 431 ಅಭ್ಯರ್ಥಿಗಳು ಜಯಗಳಿಸಿದರೆ ಜೆಡಿಎಸ್‍ನಿಂದ 45 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಪಕ್ಷೇತರರು ಬರೋಬ್ಬರಿ 207 ಮಂದಿ ಜಯ ಸಾಧಿಸಿದ್ದಾರೆ. ನಗರಸಭೆಯಲ್ಲಿ ಬಿಜೆಪಿಯೇ ಮುನ್ನಡೆ ಸಾಧಿಸಿದ್ದು, ಒಟ್ಟು 166 ಸ್ಥಾನಗಳಲ್ಲಿ 67 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಪ್ರಬಲ ಪೈಪೋಟಿ ಒಡ್ಡಿರುವ ಕಾಂಗ್ರೆಸ್ 61ರಲ್ಲಿ ಜಯ ಸಾಧಿಸಿದರೆ ಜೆಡಿಎಸ್ 12ರಲ್ಲಿ ಗೆದ್ದಿದೆ. ಪಕ್ಷೇತರರು 26 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಸಿಪಿಐ (ಎಂ), ಎಸ್‌ಡಿಪಿಐ, ಅಮ್ ಆದ್ಮಿ ಪಕ್ಷ, ಕೆ.ಆರ್.ಎಸ್. ಸಹಿತ ಹಲವು ಪಕ್ಷಗಳು ಹಾಗೂ ಪಕ್ಷೇತರರು ಸೇರಿ 4,961 ಅಭ್ಯರ್ಥಿಗಳ ಸ್ಪರ್ಧಿಸಿದ್ದರು.
ಐದು ನಗರಸಭೆಗಳ ಪೈಕಿ ಚಿಕ್ಕಮಗಳೂರು ಮತ್ತು ಹೆಬ್ಬಗೋಡಿಯಲ್ಲಿ, ಗದಗ ಬೆಟಗೆರಿಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಶಿರಾ, ಹೊಸಪೇಟೆಯಲ್ಲಿ ಅತಂತ್ರ ಫಲಿತಾಂಶ ಬಂದಿದ್ದು, ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ಮುಂದಾಗಿದೆ. 19 ಪುರಸಭೆಗಳಲ್ಲಿ 7 ಕಡೆ ಕಾಂಗ್ರೆಸ್ ಅಕಾರ ಹಿಡಿಯುವ ಬಹುಮತ ಸಾಧಿಸಿದೆ. 5ರಲ್ಲಿ ಬಿಜೆಪಿ, 4ರಲ್ಲಿ ಅತಂತ್ರ ಪರಿಸ್ಥಿತಿ ಉಂಟಾಗಿದೆ. ಒಂದು ಕಡೆ ಪಕ್ಷೇತರರು ಪ್ರಾಬಲ್ಯ ಸಾಧಿಸಿ ಅಧಿಕಾರ ಹಿಡಿಯುವತ್ತ ಸಾಗಿದ್ದಾರೆ.
ಅಣ್ಣೆಗೆರೆ ಪುರಸಭೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ಜಿಗಣಿ ಪುರಸಭೆಯಲ್ಲೂ ಕೂಡ ಕಾಂಗ್ರೆಸ್ ಅಕಾರದ ಗದ್ದುಗೆ ಹಿಡಿದಿದೆ. ಚಂದಾಪುರ ಪುರಸಭೆಯನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ರಾಮನಗರ ಜಿಲ್ಲೆಯ ಬಿಡದಿ ಪುರಸಭೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತ ಪಡೆದಿದೆ. ಉಡುಪಿಯ ಕಾಪು ಪುರಸಭೆ ಬಿಜೆಪಿ ಪಾಲಾದರೆ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ಪ್ರತಿನಿಸಿರುವ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರ ಗದ್ದುಗೆಗೆ ಏರುವ ಮೂಲಕ ಬಿಜೆಪಿಗೆ ಮುಖಭಂಗ ಉಂಟಾಗಿದೆ. ರಾಯಭಾಗದ ಮುಗುಳಖೋಡ ಪುರಸಭೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಸವದತ್ತಿಯ ಮುನವಳ್ಳಿ ಹಾಗೂ ಕಾಗವಾಡದ ಉಗಾರಖುರ್ದ ಪುರಸಭೆಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.
ಬೆಳಗಾವಿ ಜಿಲ್ಲೆ ಕಿತ್ತೂರು ತಾಲ್ಲೂಕು ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಪಕ್ಷೇತರರು ಮೇಲುಗೈ ಸಾಸಿದ್ದಾರೆ. ಹರಭಾವಿ ಪಟ್ಟಣ ಪಂಚಾಯಿತಿಯಲ್ಲೂ ಪಕ್ಷೇತರರು ಮೇಲುಗೈ ಸಾಸಿದ್ದಾರೆ. ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಹಿಡಿತದಲ್ಲಿದ್ದ ಈ ಎರಡೂ ಕ್ಷೇತ್ರಗಳು ಪಕ್ಷೇತರರ ಪಾಲಾಗುವ ನಿರೀಕ್ಷೆ ಇದೆ. ನಿಡಗುಂದಿ ಪಟ್ಟಣ ಪಂಚಾಯಿತಿ, ವಿಜಯಪುರದ ಕೋಲಾರ ಪ.ಪಂ.ನಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಾದ ಹಾವೇರಿಯ ಶಿಗ್ಗಾಂವ್ ತಾಲ್ಲೂಕಿನ ಬಂಕಾಪುರ ಪುರಸಭೆ ಹಾಗೂ ಗುತ್ತಲ ಪ.ಪಂ.ಗಳು ಕಾಂಗ್ರೆಸ್ ಪಾಲಾಗಿವೆ. ಸಚಿವ ಶ್ರೀರಾಮಲು ಕ್ಷೇತ್ರದಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಮೊಳಕಾಲ್ಮೂರಿನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ. ಒಟ್ಟು 16 ಸ್ಥಾನಗಳಲ್ಲಿ ಕಾಂಗ್ರೆಸ್ 11, ಬಿಜೆಪಿ 02, ಪಕ್ಷೇತರರು 03 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಅವರ ಸ್ವಕ್ಷೇತ್ರದಲ್ಲಿಯೇ ಹಿನ್ನಡೆ ಆಗಿರುವುದು ಬಿಜೆಪಿಗೆ ತೀವ್ರ ಮುಜಗುರ ತಂದಿದೆ. ಕುಕನೂರು ಪಟ್ಟಣ ಪಂಚಾಯಿತಿಯ 19 ಸ್ಥಾನಗಳಲ್ಲಿ ಕಾಂಗ್ರೆಸ್ 10, ಬಿಜೆಪಿ 9 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಮಾಜಿ ಸಚಿವ ಬಸವರಾಜ ರಾಯರಡ್ಡಿ ಕೊನೆಯ ಕ್ಷಣದಲ್ಲಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ ಪಕ್ಷವನ್ನು ಗೆಲುವಿನ ದಡಕ್ಕೆ ಸೇರಿಸಿದ್ದಾರೆ. ಇದು ಸಚಿವ ಹಾಲಪ್ಪ ಆಚಾರಗೆ ಎಚ್ಚರಿಕೆ ಗಂಟೆಯಾಗಿದೆ.
ಕನಕಗಿರಿಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ, ಅಲ್ಲಿ ಬಿಜೆಪಿ ಶಾಸಕರಿದ್ದು ಹೀನಾಯ ಸೋಲು ಅನುಭವಿಸಿದೆ. ಕಾಂಗ್ರೆಸ್ 12, ಬಿಜೆಪಿ 5, ಕಾರಟಗಿ ಪುರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. 11 ಕಾಂಗ್ರೆಸ್, 11. ಬಿಜೆಪಿ, ಪಕ್ಷೇತರರು 1 ಸ್ಥಾನ ಗಳಿಸಿದ್ದಾರೆ. ಈ ಸಂಖ್ಯಾ ಬಲದೊಂದಿಗೆ ಶಿವರಾಜ ತಂಗಡಿಗಿ ರಾಜಕೀಯ ಭವಿಷ್ಯ ಚುರುಕುಗೊಂಡಿದೆ. ಭಾಗ್ಯನಗರ ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿ 9, ಕಾಂಗ್ರೆಸ್ 8, ಪಕ್ಷೇತರ 2 ,ತಾವರಗೇರಾ ಪಟ್ಟಣ ಪಂಚಾಯತಿಯಲ್ಲಿ ಕಾಂಗ್ರೆಸ್ 8, ಬಿಜೆಪಿ 5, ಪಕ್ಷೇತರ 3 ಸ್ಥಾನವನ್ನು ಪಡೆದಿದ್ದಾರೆ. ಒಟ್ಟಾರೆ. ಒಬ್ಬರು ಸಚಿವರು, ಇಬ್ಬರು ಬಿಜೆಪಿ ಶಾಸಕರಿದ್ದೂ ಬಿಜೆಪಿಗೆ ಹಿನ್ನಡೆಯಾಗಿದೆ.
ರಾಯಚೂರು ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಪಟ್ಟಣ ಪಂಚಾಯಿತಿಗಳಲ್ಲಿ, ಬಿಜೆಪಿ ಒಂದು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯಿತಿಯಲ್ಲಿ ಅತಿಹೆಚ್ಚು ಸ್ಥಾನಗಳನ್ನು ಪಡೆದಿವೆ. ಸಿರವಾರ ಪಟ್ಟಣ ಪಂಚಾಯಿತಿ 21 ಸ್ಥಾನಗಳ ಪೈಕಿ 9 ಕಾಂಗ್ರೆಸ್, 6 ಬಿಜೆಪಿ, 3 ಜೆಡಿಎಸ್ ಹಾಗೂ 2 ಪಕ್ಷೇತರರು ಆಯ್ಕೆಯಾಗಿದ್ದಾರೆ. ತುರವಿಹಾಳ ಪಟ್ಟಣ ಪಂಚಾಯಿತಿ 14 ಸ್ಥಾನಗಳ ಪೈಕಿ ಕಾಂಗ್ರೆಸ್ 9, ಬಿಜೆಪಿ 2 ಹಾಗೂ 3 ಪಕ್ಷೇತರರು ಆಯ್ಕೆಯಾಗಿದ್ದಾರೆ.
ಕವಿತಾಳ ಪಟ್ಟಣ ಪಂಚಾಯಿತಿ 16 ಸ್ಥಾನಗಳ ಪೈಕಿ 8 ಕಾಂಗ್ರೆಸ್, 4 ಬಿಜೆಪಿ, 3 ಜೆಡಿಎಸ್ ಹಾಗೂ 1 ಪಕ್ಷೇತರರು ಆಯ್ಕೆಯಾಗಿದ್ದಾರೆ. ಬಳಗಾನೂರ ಪಟ್ಟಣ ಪಂಚಾಯಿತಿ 12 ಬಿಜೆಪಿ ಸ್ಥಾನಗಳ ಪೈಕಿ 6 ಬಿಜೆಪಿ, 5 ಕಾಂಗ್ರೆಸ್, 1 ಪಕ್ಷೇತರ ಆಯ್ಕೆಯಾಗಿದ್ದಾರೆ. ಮಸ್ಕಿ ಪುರಸಭೆಯಲ್ಲಿ 23 ಸ್ಥಾನಗಳ ಪೈಕಿ 16 ಬಿಜೆಪಿ ಹಾಗೂ 9 ಕಾಂಗ್ರೆಸ್ ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.
ಮೂರೂ ಪಕ್ಷಗಳಿಗೆ ಚುನಾವಣಾ ದಿಕ್ಸೂಚಿ: 2023ರ ಏಪ್ರಿಲ್ ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಸ್ಥಳೀಯ ಮಟ್ಟದಲ್ಲಿ ರಾಜ್ಯದ ಪ್ರಮುಖ ಮೂರು ಪಕ್ಷಗಳಲ್ಲಿ ಯಾವ ಪಕ್ಷಗಳ ಮೇಲೆ ಜನರಿಗೆ ಒಲವಿದೆ ಎಂಬುದು ಸ್ಥಳೀಯ ಮಟ್ಟದ ಚುನಾವಣೆಗಳಿಂದ ನಿರ್ಧಾರವಾಗುತ್ತದೆ.