- ಕರ್ನಾಟಕದಲ್ಲಿ ಶಾಲಾ ಪಠ್ಯ ಪರಿಷ್ಕರಣೆ ವಿವಾದ
- ಎಸ್‌ಎಸ್‌ಎಲ್‌ಸಿ ಪಠ್ಯದಿಂದ ಸಮಾಜ ಸುಧಾರಕ ನಾರಾಯಣ ಗುರುಗೆ ಕೊಕ್
ಬೆಂಗಳೂರು : ಹತ್ತನೇ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ ಅವರ ಭಾಷಣ ಸೇರಿಸಿದ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಅದೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ಸಮಾಜ ಸುಧಾರಕ ನಾರಾಯಣಗುರು ಮತ್ತು ವಿಚಾರವಾದಿ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಕುರಿತ ಪಠ್ಯ ಭಾಗ ತೆಗೆಯಲು ಶಿಫಾರಸು ಮಾಡಿರುವುದು ಭಾರೀ ಆಕ್ಷೇಪಕ್ಕೆ ಕಾರಣವಾಗಿದೆ.
ಹಿಂದಿನ ವರ್ಷದ ಪಠ್ಯಪುಸ್ತಕ ದಲ್ಲಿ ‘ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು’ ಅಧ್ಯಾಯ ದಲ್ಲಿ ನಾರಾಯಣ ಗುರು ಮತ್ತು ಪೆರಿಯಾರ್ ಅವರ ಜೀವನ ಮತ್ತು ದರ್ಶನ ಪರಿಚಯಿಸುವ ಭಾಗವಿತ್ತು. ಈ ಬಾರಿ ಅದಕ್ಕೆ ಕತ್ತರಿ ಹಾಕಲು ಮುಂದಾಗಿದೆ.
ಎಸ್‌ಎಸ್‌ಎಲ್‌ಸಿ ಪಠ್ಯದಿಂದ ಸಮಾಜ ಸುಧಾರಕ ನಾರಾಯಣ ಗುರುಗಳ ಪಠ್ಯಕ್ಕೆ ಕೊಕ್ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ನಾರಾಯಣ ಗುರುಗಳ ಪಾಠವನ್ನು ಪಠ್ಯದಿಂದ ಕೈ ಬಿಟ್ಟಿಲ್ಲ ಎಂದು ಸ್ಪಷ್ಟ ಪಡಿಸಿದೆ.
ಸುಮಾರು 19 ಗೆರೆಗಳ ಈ ಪಠ್ಯದಲ್ಲಿ ನಾರಾಯಣ ಗುರುಗಳ ಹುಟ್ಟು, ಸಾಮಾಜಿಕ ಚಳುವಳಿ ಹಾಗೂ ಸಿದ್ದಾಂತಗಳ ಬಗ್ಗೆ ಮಾಹಿತಿ ಇದೆ. ದಕ್ಷಿಣ ಭಾರತದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ್ದ ನಾರಾಯಣ ಗುರುಗಳ ಪಠ್ಯವನ್ನು 10ನೇ ತರಗತಿ ಸಮಾಜ ವಿಜ್ಞಾನ ಪಾಠ ಪುಸ್ತಕದಿಂದ ಕಿತ್ತು ಹಾಕಲಾಗಿದೆ ಎಂಬ ವಿವಾದ ಸೃಷ್ಟಿಯಾಗಿತ್ತು. ಶ್ರೀನಾರಾಯಣ ಗುರು ಧರ್ಮಪರಿಪಾಲನಾ ಯೋಗಂ ಹೆಸರಿನ ಪಠ್ಯ ಈ ಹಿಂದಿನ ಎಸ್ಸೆಸ್ಸೆಲ್ಸಿ ಪಠ್ಯ ಪುಸ್ತಕದಲ್ಲಿ ಇತ್ತು. ಆದರೆ ಹೊಸ ಸಮಿತಿ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನೇ ಎಸ್ಸೆಸ್ಸೆಲ್ಸಿ ಪಠ್ಯದಿಂದ ತೆಗೆದು ಹಾಕಿತ್ತು. ಅಧ್ಯಾಯ 5 ರ ಸಾಮಾಜಿಕ ಮತ್ತು ಧಾರ್ಮಿಕ ಚಳುವಳಿ ವಿಭಾಗದಿಂದ ನಾರಾಯಣ ಗುರುಗಳು ಪಠ್ಯ ಔಟ್ ಆಗಿತ್ತು. ಬ್ರಹ್ಮ ಸಮಾಜ, ಆರ್ಯ ಸಮಾಜ, ವಿವೇಕಾನಂದರ ಪಠ್ಯದ ಜೊತೆಗೆ ನಾರಾಯಣ ಗುರುಗಳ ಜೀವನ ಚರಿತ್ರೆ ಕೂಡ ಈ ಹಿಂದೆ ಮುದ್ರಿತವಾಗಿತ್ತು. ಈ ನಡುವೆ ನಾರಾಯಣ ಗುರುಗಳ ಜೊತೆಗೆ ಪೆರಿಯಾರ್ ಪಠ್ಯಕ್ಕೂ ಸಮಿತಿ ಕತ್ತರಿ ಹಾಕಿದ್ದು, ನಾರಾಯಣ ಗುರು ಪಠ್ಯ ತೆಗೆದಿದ್ದಕ್ಕೆ ಗುರು ಅನುಯಾಯಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.
ಇಪ್ಪತ್ತನೇ ಶತಮಾನದ ಆರಂಭದಲ್ಲಿ ಮೇಲ್ವರ್ಗದ ಶೋಷಣೆ, ದಬ್ಬಾಳಿಕೆಯ ವಿರುದ್ಧ ಚಳುವಳಿಯನ್ನೇ ನಡೆಸಿದ ಪೆರಿಯಾರ್ ಬಗ್ಗೆ ಇನ್ನೊಂದು ಪಠ್ಯವಿತ್ತು. ಈ ಎರಡು ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಎಸ್ಸೆಸ್ಸೆಲ್ಸಿ ಪಠ್ಯದಿಂದ ತೆಗೆದು ಹಾಕಲಾಗಿದೆ ಎಂಬ ಆರೋಪಗಳು ವ್ಯಕ್ತವಾಗಿದೆ.
‘ಪಠ್ಯದಲ್ಲಿ ಸೇರಿಸದಿದ್ದರೆ ಪ್ರತಿಭಟನೆ : 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನಾರಾಯಣಗುರು ಮತ್ತು ಪೆರಿಯಾರ್ ಅವರ ಕುರಿತಾದ ಪಠ್ಯಭಾಗವನ್ನು ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಕೈಬಿಟ್ಟಿದ್ದು ಖಂಡನೀಯ ಎಂದು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಾಜ ಸುಧಾರಕ ಸಂತರೆನಿಸಿಕೊಂಡ ಇವರಿಬ್ಬರ ಸಂದೇಶಗಳಿರುವ ಪಠ್ಯ ಭಾಗವನ್ನು, ಪಠ್ಯಪುಸ್ತಕ ಪರಿಷ್ಕರಣೆಯ ವೇಳೆ ಪರಿಗಣಿಸದೇ ನಿರ್ಲಕ್ಷಿಸಿರುವುದು, ಜಾತಿ-ಧರ್ಮಗಳ ಕಲಹದ ಬೇಗೆಯಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಪಕ್ಷಗಳ ದುರುದ್ದೇಶಪೂರಿತ ನಡೆಯಾಗಿದೆ. ಪಠ್ಯ ಪರಿಷ್ಕರಣ ಸಮಿತಿ, ಇಲಾಖೆ ಅಥವಾ ಸರಕಾರ ಈ ಕುರಿತು ಯಾವುದೇ ಸ್ಪಷ್ಟೀಕರಣ ನೀಡದೇ ಈ ಸಂತರ ತತ್ವ-ಸಿದ್ಧಾಂತಗಳನ್ನು ಅನುಸರಿಸುತ್ತಿರುವ ಅವರ ಅನುಯಾಯಿಗಳಿಗೆ ಮಾಡಿದ ಬಹಿರಂಗ ಅವಮಾನ ಎಂಬುದು ಸತ್ಯ.
ಜಾತಿಪದ್ಧತಿಯ ಕಪಿ ಮುಷ್ಟಿಯಲ್ಲಿ ನಲುಗಿ, ಅಸ್ಪೃಶ್ಯತೆಯ ಪರಾಕಾಷ್ಠೆ ತಲುಪಿ, ಮತಾಂತರದ ಸುಳಿಗೆ ಸಿಲುಕಿದ್ದ ಸನಾತನ ಹಿಂದೂಧರ್ಮದ ಬಹುಸಂಖ್ಯಾತ ಹಿಂದುಳಿದ ವರ್ಗದ ಜನರ ಧ್ವನಿಯಾಗಿ, ಧಾರ್ಮಿಕ ಸುಧಾರಣೆಯ ಮೂಲಕ ಸಾಮಾಜಿಕ ಪರಿವರ್ತನೆಯ ಹರಿಕಾರರೆನಿಸಿದ ನಾರಾಯಣ ಗುರುಗಳ ತತ್ವ ಸಂದೇಶ, ಪ್ರಸ್ತುತ ಸನ್ನಿವೇಶದಲ್ಲಿ ಇಂದಿನ ಯುವ ಪೀಳಿಗೆಗೆ ಅತ್ಯಂತ ಮಹತ್ವಪೂರ್ಣದ್ದಾಗಿದೆ. ಅಸಹಿಷ್ಣುತೆ, ಅಸ್ಪೃಶ್ಯತೆ, ಕೋಮುಭಾವನೆ ಕೆರಳಿಸುವ ಘಟನೆಗಳು ಸೇರಿದಂತೆ ಪ್ರಪಂಚದಾದ್ಯಂತ ಆಂತರಿಕ ಕಲಹಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ, ಮುಂದಿನ ಪೀಳಿಗೆ ಶಾಂತಿ ಸೌಹಾರ್ದತೆಯಿಂದ ಬಾಳಿ ಬದುಕಲು ಇಂತಹ ತತ್ವಜ್ಞಾನಿಗಳ, ಸಾಮಾಜಿಕ ಪರಿವರ್ತಕರ ಜೀವನ ಸಂದೇಶ ಅತೀ ಅವಶ್ಯಕವಾದುದು. ಆದ್ದರಿಂದ ಸರಕಾರ ಈ ಕುರಿತು ಮರುಚಿಂತನೆ ನಡೆಸಬೇಕು, ಇಲ್ಲದೆ ಇದ್ದರೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.