ಮೈಸೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಹಮ್ಮಿಕೊಂಡಿರುವ 14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನವು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‌ಒಯು) ಆವರಣದ ಘಟಿಕೋತ್ಸವ ಭವನದಲ್ಲಿ ಸೆಪ್ಟಂಬರ್ 8 ರಿಂದ 10ರವರೆಗೆ ನಡೆಯಲಿದೆ ಎಂದು ಪರಿಷತ್ ಸಂಯೋಜಕ ಎ.ಎನ್.ಮಹೇಶ್ ತಿಳಿಸಿದ್ದಾರೆ.
ಸಮ್ಮೇಳನದ ಪ್ರಮುಖ ಉದ್ದೇಶ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಒಂದೇ ವೇದಿಕೆಯಲ್ಲಿ ಸೇರಿಸುವುದು, ವಿಜ್ಞಾನವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ತಿಳಿಸುವುದು, ವಿಚಾರ ವಿನಿಮಯ ಹಾಗೂ ಹೊಸ ಆವಿಷ್ಕಾರಗಳ ಬಗ್ಗೆ ಬೆಳಕು ಚೆಲ್ಲುವುದು ಆಗಿದೆ ಎಂದು ತಿಳಿಸಿದರು.
ಸಮ್ಮೇಳನವು ಪರಿಷತ್ತಿನ ಜಿಲ್ಲಾ ಸಮಿತಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಕೆಎಸ್‌ಒಯು ಹಾಗೂ ಮೈಸೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ನಡೆಯಲಿದೆ.
‘ಸೆಪ್ಟಂಬರ್ 08ರಂದು ಬೆಳಿಗ್ಗೆ 10.30ಕ್ಕೆ ಸಮ್ಮೇಳನದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾಡಲಿದ್ದು, ಈ ಬಾರಿ ಖ್ಯಾತ ವಿಜ್ಞಾನಿ ಎ.ಎಸ್. ಕಿರಣ್‌ಕುಮಾರ್ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಶಾಸಕ ಎಲ್.ನಾಗೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸರ್ವಾಧ್ಯಕ್ಷರನ್ನು ಮೆರವಣಿಗೆಯಲ್ಲಿ ಬರ ಮಾಡಿಕೊಳ್ಳಲಾಗುವುದು’ ಎಂದು ಎ.ಎನ್.ಮಹೇಶ್ ಮಾಹಿತಿ ನೀಡಿದರು.
ಸಮ್ಮೇಳನದಲ್ಲಿ 8 ಗೋಷ್ಠಿಗಳು ಹಾಗೂ ಪರಿಣತರಿಂದ 17 ಉಪನ್ಯಾಸಗಳಿರಲಿವೆ. ರಾಜ್ಯದ ವಿವಿಧೆಡೆಯಿಂದ ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ವಿಜ್ಞಾನ ಜನಪ್ರಿಯಗೊಳಿಸಲು ಶ್ರಮಿಸಿದ ನಾಲ್ವರಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕೆಆರ್‌ವಿಪಿ) ಸಂಸ್ಥಾಪಕ ಅಧ್ಯಕ್ಷ ಎಚ್.ನರಸಿಂಹಯ್ಯ ಅವರ ಹೆಸರಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸಮ್ಮೇಳನದಲ್ಲಿ ಪ್ರಸ್ತಾವಾಗಲಿರುವ ಪ್ರಮುಖ ಗೋಷ್ಠಿ ಹಾಗೂ ಉಪನ್ಯಾಸದ ಶೀರ್ಷಿಕೆಗಳು;
೧. ವಿಜ್ಞಾನ ಶಿಕ್ಷಣ–ವಿಶೇಷವಾಗಿ ಭೌತವಿಜ್ಞಾನದಲ್ಲಿನ ಕೆಲವು ಅನುಭವಗಳು, ೨. ಆನಂದಕರ ಅಣುಗುಣ, ೩. ಶಾಂತಿಗಾಗಿ ವಿಜ್ಞಾನ, ೪. ವಿಜ್ಞಾನ ಮತ್ತು ಮೂಢನಂಬಿಕೆಗಳು, ೫. ಸಾಗರದಲ್ಲಿ ಪ್ಲಾಸ್ಟಿಕ್ ಮಾಲಿನ್ಯ, ೬. ವೈವಿಧ್ಯ– ಜೀವ ಜಗತ್ತಿನ ಜೀವಾಳ, ೭. ವಿಜ್ಞಾನದ ಸೌಂದರ್ಯ ಮತ್ತು ಸೌಂದರ್ಯದ ವಿಜ್ಞಾನ, ೮. ಭಾರತೀಯ ಬಾಹ್ಯಾಕಾಶ ಸಂಶೋಧನೆ–ಸಮಾಜದ ಏಳಿಗೆಯಲ್ಲಿ, ೯. ಕೆರೆಗಳು–ಜೀವ ಜಲದ ಕಣಗಳು, ೧೦. ಜೇಮ್ಸ್ ವೆಬ್ ದೂರದರ್ಶಕ, ೧೧. ಜನವಿಜ್ಞಾನ ಚಳವಳಿಯ ಅನುಭವಗಳು, ೧೨. ಮಹಿಳೆ ಮತ್ತು ವಿಜ್ಞಾನ, ೧೩. ನಿತ್ಯ ಬದುಕಿನಲ್ಲಿ ಮಾಹಿತಿ ತಂತ್ರಜ್ಞಾನ, ೧೪. ಸೌರಗ್ರಹದಿಂದ ಕಪ್ಪು ಕುಳಿಗಳತ್ತ– ನೂತನ ಖಗೋಳ ವಿಜ್ಞಾನದ ಸಿಂಹಾವಲೋಕನ, ೧೫. ಕೃತಕ ಬುದ್ಧಿಮತ್ತೆಯಿಂದ ಮಾನವ ಸಮುದಾಯದ ಪ್ರಗತಿ, ೧೬. ಮಿದುಳಿನ ವಯೋಗತಿ.
ಗೋಷ್ಠಿಯ ಪ್ರಮುಖಾಂಶಗಳನ್ನು ಒಳಗೊಂಡ ವೈವಿಧ್ಯಪೂರ್ಣ ಸ್ಮರಣ ಸಂಚಿಕೆ ಹೊರತರಲಾಗುವುದು. ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ಪ್ರಮುಖ ಹಲವು ನಿರ್ಣಯಗಳನ್ನು ಕೈಗೊಂಡು ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದರು.
ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬಯಸುವವರು ₹ 250 ಪಾವತಿಸಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ:984405284 (ಸಿ.ಕೃಷ್ಣೇಗೌಡ) ಸಂಪರ್ಕಿಸಬಹುದು.
ಗೋಷ್ಠಿಯಲ್ಲಿ ಕೆಆರ್‌ವಿಪಿ ಗೌರವ ಕಾರ್ಯದರ್ಶಿ ಸಿ.ಕೃಷ್ಣೇಗೌಡ, ಖಜಾಂಚಿ ಈ.ಬಸವರಾಜು, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ಹರಿಪ್ರಸಾದ್, ಕೃಷ್ಣಮೂರ್ತಿ ರಾಜ್ ಅರಸ್, ಜಿಲ್ಲಾ ಸಮಿತಿ ಕಾರ್ಯದರ್ಶಿ ಜಿ.ಬಿ.ಸಂತೋಷ್‌ಕುಮಾರ್ ಮತ್ತು ಜಿಲ್ಲಾ ಸಮಿತಿ ಸದಸ್ಯ ಮುರಳೀಧರ್ ಇದ್ದರು.