ಬೆಂಗಳೂರು: ಮೊನ್ನೆಮೊನ್ನೆಯಷ್ಟೇ ಕನ್ನಡದಲ್ಲಿ ತಪ್ಪು ತಪ್ಪಾಗಿ ಆದೇಶ ಹೊರಡಿಸಿ ಸಾರ್ವಜನಿಕರಿಂದ ತೀವ್ರ ಟೀಕೆಗೆ ಒಳಗಾಗಿದ್ದ ರಾಜ್ಯ ಸರ್ಕಾರ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ಮತ್ತೆ ಸಾರ್ವಜನಿಕ ಟೀಕೆಗೆ ಒಳಗಾಗಿದೆ.
2022ನೇ ವರ್ಷದ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಆಚರಣೆ ಕುರಿತು ಜುಲೈ 19 ರಂದು ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆದಿದೆ. ಈ ಕುರಿತು ಕಾರ್ಯಸೂಚಿಯ ಕಿರುಪುಸ್ತಕದ ಮುಖಪುಟದಲ್ಲಿ ಇಸವಿಯನ್ನು ತಪ್ಪಾಗಿ ಬರೆಯಲಾಗಿದೆ. ಅಂದರೆ 2022ರ ಬದಲು 2021 ಎಂದು ನಮೂದಿಸಲಾಗಿದೆ. ಈ ಮೂಲಕ ಸರ್ಕಾರ ಹಳೆಯ ಕಾರ್ಯಸೂಚಿಯನ್ನೇ ಹೊಸದಾಗಿ ಮುದ್ರಿಸಿ ಎಡವಟ್ಟು ಮಾಡಿಕೊಂಡಿತೇ? ಎಂಬ ಅನುಮಾನ ಮೂಡಿದೆ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.
.@BJP4Karnataka ಸರ್ಕಾರ
2021ರಲ್ಲಿಯೇ ಉಳಿದುಬಿಟ್ಟಿದೆ
'ಟೇಕ್ ಆಪ್'
ಆಗಿಯೇ ಇಲ್ಲ ಎನ್ನುವುದಕ್ಕೆ
ಬೇರೆ ಸಾಕ್ಷಿ ಬೇಕೇ? pic.twitter.com/vfPbl79iim— Siddaramaiah (@siddaramaiah) July 19, 2022
ಈ ಕುರಿತು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಗಮನ ಸೆಳೆದಿದ್ದಲ್ಲದೆ, ಸರ್ಕಾರದ ವಿರುದ್ಧ ಟೀಕೆಯನ್ನೂ ಮಾಡಿದ್ದಾರೆ. ‘ರಾಜ್ಯದ ಬಿಜೆಪಿ ಸರ್ಕಾರ 2021ರಲ್ಲಿಯೇ ಉಳಿದುಬಿಟ್ಟಿದೆ, ‘ಟೇಕ್ ಆಪ್’ ಆಗಿಯೇ ಇಲ್ಲ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೇ?’ ಎಂದು ಅವರು ಪ್ರಶ್ನಿಸಿದ್ದಾರೆ.
ಫೆಸ್ಬುಕ್ ನಲ್ಲಿ ಬಹಳಷ್ಟು ಜನ ಈ ಪೋಸ್ಟ್ ನ್ನು ಹಂಚಿಕೊಂಡಿದ್ದಾರೆ. ಸರಕಾರ ಇನ್ನೂ ನಿದ್ರೆಯಲ್ಲಿದೆ. ಕನ್ನಡ ಗೊತ್ತಿಲ್ಲದ ಅಧಿಕಾರಿಗಳಿಂದ ಇಂತಹ ಎಡವಟ್ಟು ಸಂಭವಿಸುತ್ತಿವೆ. ಕನ್ನಡದ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು ಎಂದಿದ್ದಾರೆ.
ಒಟ್ಟಿನಲ್ಲಿ ಸರಕಾರ ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಿದೆ. ಎಲ್ಲವನ್ನೂ ತರಾತುರಿಯಲ್ಲಿ ಮಾಡಿಕೊಳ್ಳುತ್ತಿರುವ ಕಾರಣ ಇಂತಹ ಎಡವಟ್ಟುಗಳು ನಡೆತುತ್ತಿವೆ. ಸರಕಾರ ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕಿದೆ.