ಪಾಲಿಕೆ ಚುನಾವಣೆ : ಬೆಳಗಾವಿಯಲ್ಲಿ ಬಿಜೆಪಿ, ಕಲಬುರ್ಗಿ ಹುಬ್ಬಳ್ಳಿ-ಧಾರವಾಡದಲ್ಲಿ ಅತಂತ್ರ ಸ್ಥಿತಿ

ಬೆಂಗಳೂರು : ರಾಜ್ಯದ ಮೂರು ಪ್ರತಿಷ್ಠಿತ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದಿದ್ದು. ಬೆಳಗಾವಿ ಪಾಲಿಕೆ ಅಧಿಕಾರವನ್ನು ಖಚಿತ ಪಡಿಸಿಕೊಂಡಿದೆ. ಕಾಂಗ್ರೆಸ್ ಕಲಬುರ್ಗಿ ಪಾಲಿಕೆಯಲ್ಲಿ ಅಧಿಕಾರ ಪಡೆಯುವ ಸಾಧ್ಯತೆಗಳಿವೆ. ಇನ್ನೂ ಜೆಡಿಎಸ್‍ಗೆ ತೀವ್ರ ಹಿನ್ನಡೆಯಾಗಿದೆ.

ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬೆಳಗಾವಿಯಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿಯುವತ್ತ ದಾಪುಗಾಲಿಟ್ಟಿದ್ದರೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಪಕ್ಷೇತರರ ನೆರವಿನೊಂದಿಗೆ ಪಾಲಿಕೆ ರಚನೆ ಕಸರತ್ತು ನಡೆಸಿದೆ. ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು, ಇಲ್ಲಿ ಬಿಜೆಪಿ ಕೂಡ ಪ್ರಬಲ ಪೈಪೋಟಿ ನೀಡಿದೆ.

ಹುಬ್ಬಳ್ಳಿ – ಧಾರವಾಡ ಪಾಲಿಕೆ ಚುನಾವಣಾ ಫಲಿತಾಂಶ : ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಯಾವ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ.

ಆರಂಭದಿಂದಲೂ ಕಾಂಗ್ರೆಸ್​ ಮತ್ತು ಬಿಜೆಪಿ ಮುನ್ನಡೆ ಕಾಯ್ದುಕೊಂಡು ಬಂದವಾದರೂ ಅಂತಿಮವಾಗಿ ಎರಡಕ್ಕೂ ಬಹುಮತ ಸಿಗಲಿಲ್ಲ. ಅತಂತ್ರ ಫಲಿತಾಂಶ ಬಂದಿದ್ದು, ಪಕ್ಷೇತರ ಅಭ್ಯರ್ಥಿಗಳೇ‌ ಈಗ ನಿರ್ಣಾಯಕ. ಮೇಯರ್ ಆಗಲು 45 ಮತ ಬೇಕಿದೆ. ಆದರೆ, ಬಿಜೆಪಿ ಒಟ್ಟು 39 ವಾರ್ಡ್​ಗಳಲ್ಲಿ ಗೆದ್ದಿದ್ದು, ಬಿಜೆಪಿ ಬಳಿ ಮೇಯರ್ ಆಯ್ಕೆಗೆ ವಿಶೇಷ ಮತದಾನದ ಹಕ್ಕು ಹೊಂದಿರುವ ಐವರು ಜನಪ್ರತಿನಿಧಿಗಳಿದ್ದಾರೆ. ಅಲ್ಲಿಗೆ ಬಿಜೆಪಿಗೆ ಒಟ್ಟು 44 ಸ್ಥಾನ ಸಿಕ್ಕಂತಾಗುತ್ತೆ. ಇನ್ನೂ ಒಬ್ಬರ ಅಗತ್ಯವಿದೆ.

ಇನ್ನು ಕಾಂಗ್ರೆಸ್​ ಒಟ್ಟು 33 ವಾರ್ಡ್​ಗಳಲ್ಲಿ ಗೆದ್ದಿದ್ದು, ಕಾಂಗ್ರೆಸ್ ಬಳಿ ಮೇಯರ್ ಆಯ್ಕೆಗೆ ವಿಶೇಷ ಮತದಾನದ ಹಕ್ಕು ಹೊಂದಿರುವ ಮೂವರು ಜನಪ್ರತಿನಿಧಿಗಳಿದ್ದಾರೆ. ಅಲ್ಲಿಗೆ ಕಾಂಗ್ರೆಸ್​ ಗೆ ಒಟ್ಟು 36 ಸ್ಥಾನ ಸಿಕ್ಕಂತಾಗುತ್ತೆ.

ಐಎಂಐಎಂ 3, ಪಕ್ಷೇತರ 6, ಜೆಡಿಎಸ್​ ಗೆ 1 ವಾರ್ಡ್​ನಲ್ಲಿ ಗೆಲುವಾಗಿದ್ದು, ಇವರು ಕಾಂಗ್ರೆಸ್​ ಕೈ ಹಿಡಿದರೆ ಬಿಜೆಪಿಗೆ ಹಿನ್ನೆಡೆ ಆಗಲಿದೆ. ಬಿಜೆಪಿ ಪಾಲಿಗೂ ಒಂದು ಸ್ಥಾನವನ್ನು ಪಡೆಯುವುದು ಕಷ್ಟದ ಕೆಲಸವೇನಲ್ಲ. ಹು.ಧಾ ಪಾಲಿಕೆಯ ಮೇಯರ್ ಆಯ್ಕೆಯಲ್ಲಿ ಪಕ್ಷೇತರರು ಮಹತ್ವ ಪಡೆದುಕೊಂಡಿದ್ದಾರೆ.

 ಪಕ್ಷವಾರು ಬಲಾಬಲ
ಬಿಜೆಪಿ- 39 ವಾರ್ಡ್​ಗಳು
ಕಾಂಗ್ರೆಸ್- 33 ವಾರ್ಡ್​ಗಳು
ಪಕ್ಷೇತರ- 6 ವಾರ್ಡ್​ಗಳು
ಎಐಎಂಐಎಂ- 3 ವಾರ್ಡ್​ಗಳು
ಜೆಡಿಎಸ್- 1 ವಾರ್ಡ್

ಬೆಳಗಾವಿ ಮಹಾನಗರ ಪಾಲಿಕೆ : ಬೆಳಗಾವಿ ಮಹಾನಗರ ಪಾಲಿಕೆಯ 50 ವರ್ಷದ ಇತಿಹಾಸದಲ್ಲಿ ಬಿಜೆಪಿ ಇತಿಹಾಸ ನಿರ್ಮಿಸಿದೆ. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಮರಾಠಿ ಭಾಷಿಕರು ಎಂಇಎಸ್ ಬದಲು ಬಿಜೆಪಿಗೆ ಜೈ ಎಂದಿದ್ದು, ಪಾಲಿಕೆಯನ್ನು ಬಿಜೆಪಿ ಕೈಗಿತ್ತಿದ್ದಾರೆ. ಮರಾಠಿ ಭಾಷಿಕರನ್ನ ದಾಳವಾಗಿಸಿಕೊಂಡು ದಶಕಗಳಿಂದ ಬೆಳಗಾವಿಯಲ್ಲಿ ಎಂಇಎಸ್ ರಾಜಕೀಯ ಮಾಡುತ್ತಿತ್ತು. ಈ ಮೊದಲು ಬೆಳಗಾವಿ ಜಿಲ್ಲೆಯಲ್ಲಿ 5 ಮಂದಿ ಎಂಇಎಸ್ ಶಾಸಕರು ಆಯ್ಕೆಯಾಗುತ್ತಿದ್ದರು. ಕಳೆದ ಚುನಾವಣೆಯಲ್ಲಿ ಒಬ್ಬ ಎಂಇಎಸ್​ ಶಾಸಕನೂ ಆಯ್ಕೆಯಾಗಿಲ್ಲ. ಇನ್ನು ಕಳೆದ ಬಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್​ 30 ಸ್ಥಾನ ಗೆದ್ದಿತ್ತು. ಈ ಬಾರಿ 58 ವಾಡ್೯ಗಳ ಪೈಕಿ ಕೇವಲ 2 ಮಾತ್ರವೇ ಎಂಇಎಸ್​ ಪಾಲಾಗಿದೆ.

ಗಡಿ, ಭಾಷೆ ವಿಚಾರ ಮುಂದಿಟ್ಟುಕೊಂಡು ಬೆಳಗಾವಿಯಲ್ಲಿ ರಾಜಕೀಯ ಮಾಡುತ್ತಿದ್ದ ಎಂಇಎಸ್​ಗೆ ಈ ಸಲದ ಚುನಾವಣೆ ಭಾರೀ ಮುಖಭಂಗ ತರಿಸಿದೆ. ಮರಾಠಿ ಮತದಾರರು ಎಂಇಎಸ್​ನಿಂದ ದೂರ ಸರಿದಿದ್ದಾರೆ ಎಂಬುದಕ್ಕೆ ಈ ಚುನಾವಣೆಯ ಫಲಿತಾಂಶವೇ ಸಾಕ್ಷಿ. ಮರಾಠಿ ಭಾಷಿಕ ಮತದಾರರನ್ನ ಸೆಳೆಯುವಲ್ಲಿ ಯಶಸ್ವಿಯಾದ ಬಿಜೆಪಿ, ಆ ಪ್ರದೇಶದಲ್ಲಿ ಜಯದ ಕೇಕೆ ಹಾಕಿದೆ.

ಪಾಲಿಕೆಯ 58 ವಾಡ್೯ಗಳಲ್ಲಿ 54 ಸ್ಥಾನಕ್ಕೆ ಬಿಜೆಪಿ ಸ್ಪರ್ಧಿಸಿತ್ತು. ಈ ಪೈಕಿ ಒಟ್ಟು 35 ವಾರ್ಡ್​ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಸ್ಪರ್ಧೆ ಒಡ್ಡಿದ್ದ ಕಾಂಗ್ರೆಸ್ ಪಾಲಿಕೆ ಚುನಾವಣೆಯಲ್ಲಿ ಮತದಾರರು ಕೈ ಹಿಡಿಯಬಹುದೆಂದು ಇಟ್ಟುಕೊಂಡಿದ್ದ ನಿರೀಕ್ಷೆ ಹುಸಿಯಾಗಿದೆ. ಕೇವಲ 10 ವಾರ್ಡ್‍ಗಳಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಾಗಿದೆ. ಪಕ್ಷೇತರರು 10 ಕಡೆ ಗೆಲುವು ಸಾಧಿಸಿದ್ದಾರೆ.

ಕಲಬುರ್ಗಿ ಪಾಲಿಕೆ ಫಲಿತಾಂಶ : ಮಹಾನಗರ ಪಾಲಿಕೆ ಚುನಾವಣೆ ಇಂದು ಪ್ರಕಟಗೊಂಡಿದ್ದು, ಯಾವ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಪಾಲಿಕೆಯ 55 ವಾರ್ಡ್​ಗಲ್ಲಿ ಕಾಂಗ್ರೆಸ್​ 26 ಸ್ಥಾನ ಗೆದ್ದು ಮೊದಲ ಸ್ಥಾನದಲ್ಲಿದೆಯಾದರೂ ಮೇಯರ್​ ಸ್ಥಾನ ಅಲಂಕರಿಸಲು ಇನ್ನೂ ಇಬ್ಬರು ವಿಜೇತರು ಕಾಂಗ್ರೆಸ್​ಗೆ ಮತ ಹಾಕಬೇಕಿದೆ.

ಬಿಜೆಪಿ 23 ವಾರ್ಡ್​ಗಳಲ್ಲಿ ಗೆದ್ದರೆ, ಜೆಡಿಎಸ್ 3 ಹಾಗೂ ಒಬ್ಬರು ಪಕ್ಷೇತರ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.

ಪಾಲಿಕೆ ಮೇಯರ್​ ಗಾದಿಗೇರಲು ಮ್ಯಾಜಿಕ್ ಸಂಖ್ಯೆ 28 ಆಗಬೇಕು. ಈಗ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಆಡಳಿತಾರೂಢ ಬಿಜೆಪಿ ಉತ್ತಮ ಸಾಧನೆ ತೋರಿದೆ. ಬಿಜೆಪಿಯು ಜೆಡಿಎಸ್, ಪಕ್ಷೇತರ ಅಭ್ಯರ್ಥಿಯ ಬೆಂಬಲ ಪಡೆದು ಅಧಿಕಾರಕ್ಕೆ ಬರಲು ಕಸರತ್ತು ಆರಂಭಿಸಿದೆ. ವರಿಷ್ಠರ ಸೂಚನೆಯಂತೆ ಸೇಡಂ ಶಾಸಕ ರಾಜಕುಮಾರ ಪಾಟೀಲ್ ಅಧಿಕಾರ ಚುಕ್ಕಾಣಿಯನ್ನ ಬಿಜೆಪಿಗೆ ದಕ್ಕಿಸಿಕೊಳ್ಳಲೆಂದೇ ತಂತ್ರ ರೂಪಿಸಿದ್ದಾರೆ. ಅಧಿಕಾರಿ ಹಿಡಿಯಲು ಹೆಚ್ಚಿನ ಅವಕಾಶ ಇರುವ ಕಾಂಗ್ರೆಸ್ ಇತರ ಸದಸ್ಯರನ್ನು ತನ್ನತ್ತ ಸೆಳೆಯಲು ಪ್ರಯತ್ನ ನಡೆಸಿದೆ.

Donate Janashakthi Media

Leave a Reply

Your email address will not be published. Required fields are marked *