ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ: ನ.23ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಬೆಂಗಳೂರು: ಕರ್ನಾಟಕ ಗಡಿ ವಿವಾದ ಕುರಿತಂತೆ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆಯು ನಾಳೆ(ನವೆಂಬರ್‌ 23) ನಡೆಯಲಿದೆ. ಮಹಾರಾಷ್ಟ್ರ ಸರ್ಕಾರ 1956ರ ರಾಜ್ಯ ಪುನರ್‌ವಿಂಗಡಣಾ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಇದು ಅಂತಿಮ ವಿಚಾರಣೆಯಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಉನ್ನತ ಮಟ್ಟದ ಸಮಿತಿ ಸಭೆಯನ್ನು ಸಹ ನಡೆಸಿದ್ದಾರೆ. ಮಹಾರಾಷ್ಟ್ರ  ಉನ್ನತ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ ಹಾಗೂ ಅಬಕಾರಿ ಸಚಿವ ಶಂಭುರಾಜೇ ದೇಸಾಯಿ ಈ ಇಬ್ಬರನ್ನೂ ಗಡಿ ಉಸ್ತುವಾರಿ ಸಚಿವರಾಗಿ ನಿಯೋಜಿಸಲಾಗಿದೆ.

ಬೆಳಗಾವಿ, ಬೀದರ, ಭಾಲ್ಕಿ, ಕಾರವಾರ ಸೇರಿದಂತೆ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದು ಮಹಾರಾಷ್ಟ್ರದ ವಾದವಾಗಿದೆ.

2004ರಲ್ಲಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ 18 ವರ್ಷಗಳ ಬಳಿಕ ನಾಳೆ ಸುಪ್ರೀಂಕೋರ್ಟ್‌ನಲ್ಲಿ ಆರಂಭವಾಗಲಿದೆ. ಭಾಷಾವಾರು ಪ್ರಾಂತ್ಯ ರಚನೆಗೆ 1953ರಲ್ಲಿ ರಚಿಸಲಾಗಿದ್ದ ಫಜಲ್‌ಅಲಿ ನೇತೃತ್ವದ ಮೂವರ ಸದಸ್ಯರ ಸಮಿತಿ ಮುಂಬೈ ಪ್ರಾಂತ್ಯದಲ್ಲಿದ್ದ ಬೆಳಗಾವಿ ಸೇರಿದಂತೆ 865 ಹಳ್ಳಿಗಳು ಆಗಿನ ಮೈಸೂರು ರಾಜ್ಯಕ್ಕೆ ಸೇರಿದ್ದವು ಎಂದು ವರದಿ ನೀಡಿತ್ತು. ಇದನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂಕೋರ್ಟ್‌ನ ನಿರ್ದೇಶನದ ಮೇರೆಗೆ ೧೯೬೬ರಲ್ಲಿ ನ್ಯಾಯಮೂರ್ತಿ ಮೆಹರ್‌ಚಂದ್ ಮಹಾಜನ್ ಆಯೋಗವನ್ನು ರಚಿಸಲಾಗಿತ್ತು. ಈ ಆಯೋಗವು ಬೆಳಗಾವಿ ಸೇರಿ 865 ಹಳ್ಳಿಗಳು ಕರ್ನಾಟಕಕ್ಕೆ ಸೇರಿದ್ದು ಎಂದು ವರದಿ ನೀಡಿತ್ತು.

ಗಡಿ ವಿವಾದದ ವಿಚಾರಣೆ ನಾಳೆ ಸುಪ್ರೀಂಕೋರ್ಟ್‌ನಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರಗಳು ಕಾನೂನು ಹೋರಾಟಕ್ಕೆ ಸಂಪೂರ್ಣ ಸಿದ್ಧತೆ ನಡೆಸಿದ್ದು, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉನ್ನತಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಗಡಿ ವಿವಾದದ ಬಗ್ಗೆ ನ್ಯಾಯಾಲಯದಲ್ಲಿ ವಾದ ಮಂಡಿಸಲು ಮಾಜಿ ಅಡ್ವೊಕೇಟ್ ಜನರಲ್ ಮುಕುಲ್ ರೋಹಟಗಿ, ಹಿರಿಯ ವಕೀಲರಾದ ಶ್ಯಾಂ ದಿವಾನ್, ಉದಯಹೊಳ್ಳ, ಮಾರುತಿ ಜಿರಲೆ, ರಘುಪತಿ ಇವರುಗಳ ತಂಡವನ್ನು ರಚಿಸುವ ತೀರ್ಮಾನವನ್ನು ಕೈಗೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *