ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಗೆಗಳು ಕೊರತೆ ಇರುವಾಗ ಈಗಾಗಲೇ ಮೊಲದನೇ ಡೋಸ್ ಪಡೆದುಕೊಂಡಿರುವ ಜನರಿಗೆ ಅದು ಹೇಗೆ ಎರಡನೇ ಡೋಸ್ ನೀಡುತ್ತೀರಿ ಎಂದು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿದೆ.
ಕೋವಿಡ್ ನಿರ್ವಹಣೆ ಕುರಿತು ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೊಂಡಿರುವ ಕರ್ನಾಟಕ ಹೈಕೋರ್ಟ್ ಇಂದು ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ ಅವರಿದ್ದ ನ್ಯಾಯಪೀಠವು ಕೇವಲ 9 ಲಕ್ಷ ಡೋಸ್ ಮಾತ್ರ ಲಭ್ಯವಿದೆ. 16 ಲಕ್ಷ ಜನರಿಗೆ ತಕ್ಷಣವೇ ಎರಡನೇ ಡೋಸ್ ಕೊಡಬೇಕಾಗಿದೆ. 18-44 ವಯಸ್ಸಿನವರ ವಿಚಾರ ಬಿಡಿ. ಎರಡನೇ ಡೋಸ್ ನೀಡಲು ಬೇಕಾಗುವ ಲಸಿಕೆಗಳೇ ಲಭ್ಯವಿಲ್ಲವಲ್ಲ. ಸರಕಾರ ಹೇಗೆ ಎರಡನೇ ಡೋಸ್ ನೀಡುತ್ತದೆ. ಈಗಾಗಲೇ ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಪಡೆಯದಿದ್ದರೆ ಉಂಟಾಗುವ ಗಂಭೀರ ಆರೋಗ್ಯ ಪರಿಣಾಮ ಕುರಿತಾಗಿ ನ್ಯಾಯಾಲಯ ಸರಕಾರವನ್ನು ಪ್ರಶ್ನೆ ಮಾಡಿತು.
ಇದನ್ನು ಓದಿ: ಜಿಂದಾಲ್ ಕೋವಿಡ್ ರೋಗಿಗಳ ಬೆಡ್‌ಗಳ ವಿಚಾರದಲ್ಲಿ ಜನರು ಮತ್ತು ಸಚಿವ ಆನಂದ್‌ಸಿಂಗ್ ಕಿತ್ತಾಟ
ಪ್ರಸಕ್ತ ರಾಜ್ಯದಲ್ಲಿ 65 ಲಕ್ಷ ಮಂದಿಗೆ ಎರಡನೇ ಡೋಸ್ ಲಸಿಕೆ ಹಾಕಬೇಕಾಗಿದೆ. ಆದರೆ, ಇರುವುದು ಕೇವಲ 7,73,637 ಡೋಸ್‌ಗಳು ಮಾತ್ರ. ರಾಜ್ಯ ಸರಕಾರ ಮೇ 3ರಂದು ಒಂದು ಕೋಟಿ ಲಸಿಕೆಗೆ ಬೇಡಿಕೆ ಇಟ್ಟಿದೆ. ಆದರೂ ಏನೂ ಆಗಿಲ್ಲ. ಪರಿಸ್ಥಿತಿ ಮತ್ತಷ್ಟು ಗಂಭೀರವಾಗಬಹುದು ಎಂದು ನ್ಯಾಯಾಲಯ ತಿಳಿಸಿದೆ.
ಮೊದಲ ಡೋಸ್ ಪಡೆದು ಕೊಂಡು ನಾಲ್ಕು ವಾರ ಪೂರ್ಣಗೊಂಡಿರುವವವರಿಗೆ ನೀಡಲು 26 ಲಕ್ಷ ಲಸಿಕೆಯ ವಯಲ್‌ಗಳು ಬೇಕಾಗಿವೆ. ಇದು ನಿಜಕ್ಕೂ ಆತಂಕವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತು.
ಇದನ್ನು ಓದಿ: ಆರೋಗ್ಯ ಬಿಕ್ಕಟ್ಟಿನ ನಡುವೆ ಲಸಿಕೆ ಬೆಲೆಯಲ್ಲೂ ಹಗರಣ!
ಸರಕಾರದ ಪರವಾಗಿ ಹಾಜರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರಿಗೆ ನ್ಯಾಯಾಲಯ ತಕ್ಷಣ ಏನಾದರೂ ಮಾಡಿ ಇಲ್ಲವಾದಲ್ಲಿ ಲಸಿಕಾ ಅಭಿಯಾನವೇ ಕುಸಿಯಲಿದೆ. ಮುಂಬರುವ ಗಂಭೀರ ಪರಿಸ್ಥಿತಿ ಎದುರಿಸಲು ಲಸಿಕೆಯೇ ಏಕೈಕ ಪರಿಹಾರವಾಗಿದೆ ಅದನ್ನು ನೀಡುವುದು ಸರಕಾರದ ಹೊಣೆ. ಯಾರೂ ಅದನ್ನು ಅಂಗಡಿಗಳಿಂದ ಖರೀದಿಸಲಾಗದುʼʼ ಎಂದು ಎಚ್ಚರಿಸಿದರು.
ರಾಜ್ಯ ಸರಕಾರವು 13 ಲಕ್ಷಕ್ಕೂ ಹೆಚ್ಚಿನ ಡೋಸ್‌ಗಳನ್ನು ಕೇಂದ್ರದಿಂದ ತರಿಸಿಕೊಳ್ಳದಿದ್ದರೆ 18-44 ವಯೋಮಾನದವರಿಗೆ ಹೇಗೆ ಲಸಿಕೆ ನೀಡುತ್ತೀರಾ? ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಸ್ಪಷ್ಟೀಕರಣ ನೀಡಬೇಕೆಂದು ನ್ಯಾಯಾಲಯ ತಿಳಿಸಿದೆ.
45 ವರ್ಷ ಮೇಲ್ಪಟ್ಟ ಮಂದಿಗೆ ರಾಜ್ಯ ಸರಕಾರ ಹೇಗೆ ಲಸಿಕೆ ನೀಡುತ್ತದೆ ಎಂಬ ಬಗ್ಗೆ ಅಧಿಕೃತವಾಗಿ ಮಾರ್ಗಸೂಚಿ ಸಲ್ಲಿಸಬೇಕೆಂದು ನ್ಯಾಯಾಲಯ ರಾಜ್ಯ ಸರಕಾರಕ್ಕೆ ತಿಳಿಸಿದೆ.