ಜನಮತ 2023: ಮತದಾನ ಆರಂಭ, ಉತ್ಸಾಹದಿಂದ ಮತಗಟ್ಟೆಗಳತ್ತ ಆಗಮಿಸುತ್ತಿರುವ ಜನ

ಬೆಂಗಳೂರು : ತೀವ್ರ ಕುತೂಹಲ ಕೆಲಕೆರಳಿಸಿರುವ ರಾಜ್ಯದ ವಿಧಾನಸಭೆ ಚುನಾವಣೆ ಆರಂಭಗೊಂಡಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಅನೇಕ ಕಡೆಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಮತಹಕ್ಕು ಚಲಾಯಿಸುತ್ತಿದ್ದಾರೆ.

ಬೆಳಿಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಮತದಾನದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಂಜಾಗ್ರತಾ ಕ್ರಮವಾಗಿ ಆಂಬುಲೆನ್ಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳಲಾಗಿದೆ.

ಮತಗಟ್ಟೆಯ ಸುತ್ತಮುತ್ತ ಅಗತ್ಯ ಪೊಲೀಸ್ ಸಿಬ್ಬಂದಿ ಹಾಗೂ ಅರೆಸೇನಾ ಯೋಧರ ಪಡೆಗಳನ್ನು ನಿಯೋಜಿಸಲಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಸುಗಮ ಮತದಾನಕ್ಕೆ ಅನುಕೂಲವಾಗುವಂತೆ 58 ಸಾವಿರದ 545 ಮತಗಟ್ಟೆಗಳನ್ನು ರಾಜ್ಯಾದ್ಯಂತ ತೆರೆಯಲಾಗಿದೆ.

ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು 2 ಲಕ್ಷ 56 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇದರ ಜೊತೆಗೆ ಹೋಮ್ ಗಾರ್ಡ್ಸ್, ಅರಸೇನಾಪಡೆಗಳು ಹಾಗೂ 650 ಸಿಎಪಿಎಫ್ ಕಂಪನಿ,101 ಸಿಆರ್‌ಪಿಎಫ್ ಬೆಟಾಲಿಯನ್, 108 ಬಿಎಸ್‌ಎಫ್ ಪಡೆಗಳು, 75 ಸಿಐಎಸ್‌ಎಫ್ ತುಕಡಿ, 70 ಐಟಿಬಿಪಿ ಪೊಲೀಸ್ ಪಡೆ, 35 ಆರ್‌ಎಎಫ್ ತಂಡ ಮತ್ತು 186 ಎಸ್‌ಎಪಿ ಕಂಪನಿಗಳನ್ನು ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ತಾಂತ್ರಿಕ ದೋಷ: ತಡವಾಗಿ ಆರಂಭವಾದ ಮತದಾನ; ಮತದಾನ ಪ್ರಕ್ರಿಯೆ ವೇಳೆ ಮತದಾನ ಯಂತ್ರದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲವಡೆ ತಡವಾಗಿ ಮತದಾನ ಆರಂಭವಾಯಿತು. ಕೊಪ್ಪಳ, ರಾಯಚೂರು, ಬೆಳಗಾವಿ ಹಾಗೂ ಬೆಂಗಳೂರಿನ ಮಹದೇವಪುರದಲ್ಲಿ ತಾಂತ್ರಿಕ ದೋಷದಿಂದಾಗಿ ಅರ್ಧಗಂಟೆ ತಡವಾಗಿ ಮತದಾನ ಆರಂಭವಾದ ಬಗ್ಗೆ ವರದಿಯಾಗಿದೆ.

ಚುನಾವಣಾ ಅಖಾಡಕ್ಕಿಳಿದಿರುವ 2615 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರ ಪ್ರಭುಗಳು ಬರೆಯಲಿದ್ದಾರೆ. ಸಂಜೆ 6 ಗಂಟೆಯವರೆಗೆ ಮತದಾರರು ತಮ್ಮ ಹಕ್ಕು ಚಲಾಯಿಸಬಹುದಾದರು, ಸಂಜೆಯವರೆಗೂ ಸಮಯ ಇದೆಯಲ್ಲ ಎಂಬ ಉದಾಸೀನ ಬೇಡ. ಕಾರಣ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಮಧ್ಯಾಹ್ನದೊಳಗೆ ಮತದಾನ ಮಾಡುವುದು ಉತ್ತಮ. ಮತ ಹಾಕಿದವರ ಎಡಗೈ ತೋರು ಬೆರಳಿಗೆ ಶಾಯಿ ಹಾಕಲಾಗುತ್ತಿದೆ.

ವೈಯಕ್ತಿಕ ಸುರಕ್ಷತೆ, ಅಭಿವೃದ್ಧಿ, ನಾಡು ಹಾಗೂ ದೇಶದ ಅಭಿವೃದ್ಧಿ ಜತೆಗೆ ಮುಂದಿನ ಐದು ವರ್ಷಗಳ ಭವಿಷ್ಯವನ್ನು ಒಂದು ಮತ ತೀರ್ಮಾನಿಸಲಿದೆ. ರಾಜಕೀಯ ಪಕ್ಷಗಳು, ವಿಧಾನಸಭೆ ಪ್ರವೇಶಿಸಲು ಬಯಸಿದ ಅಭ್ಯರ್ಥಿಗಳು ತಮ್ಮ ಪ್ರಣಾಳಿಕೆಯನ್ನು ಜನರ ಮುಂದಿಟ್ಟಿದ್ದಾರೆ. ಪ್ರತಿ ಯೊಬ್ಬಮತದಾರ ತನಗೆ ಸೂಕ್ತವಾದುದ್ದನ್ನು ಅಯ್ಕೆ ಮಾಡಿಕೊಳ್ಳುವ ಅವಕಾಶವಿದೆ.

 

Donate Janashakthi Media

Leave a Reply

Your email address will not be published. Required fields are marked *