ಜನಮತ 2023 : ಸ್ಪಷ್ಟ ಬಹುಮತದತ್ತ ಕಾಂಗ್ರೆಸ್

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆ ಮತ ಎಣಿಕೆ ಬಿರುಸಿನಿಂದ ಸಾಗುತ್ತಿದ್ದು, ಕಾಂಗ್ರೆಸ್ ಸ್ಪಷ್ಟ ಮುನ್ನಡೆ ಪಡೆದುಕೊಂಡಿದೆ. ಈ ನಡುವಲ್ಲೇ ಕೈ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಪ್ರಸ್ತುತ ಕಾಂಗ್ರೆಸ್‌ 123 ಸ್ಥಾನಗಳೊಂದಿಗೆ ಲೀಡಿಂಗ್ ಕಾಯ್ದುಕೊಂಡಿದ್ದರೇ, ಬಿಜೆಪಿ 71 ಜೆಡಿಎಸ್ 26 ಹಾಗೂ 6 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಈ ಮೂಲಕ ಬಹುತೇಕ ಕಾಂಗ್ರೆಸ್ ಗೆಲುವು ಖಚತವಾಗಿದೆ ಎಂದೇ ಹೇಳಬಹುದು. ಈಗ ಕಾಂಗ್ರೆಸ್ ನಾಯಕರು ತಮ್ಮ ಗೆದ್ದ ಶಾಸಕರ ಭದ್ರತೆಗೆ ಸಜ್ಜಾಗಿದ್ದಾರೆ.

ಚುನಾವಣಾ ಫಲಿತಾಂಶದ ಸದ್ಯದ ಟ್ರೆಂಡ್ ಪ್ರಕಾರ ಕಾಂಗ್ರೆಸ್ 131 ಸ್ಥಾನಗಳಲ್ಲಿ ಮುಂದಿದ್ದರೆ, ಬಿಜೆಪಿ 66  ಮತ್ತು ಜೆಡಿಎಸ್ 21 ಹಾಗೂ ಇತರರು 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಸ್ಪಷ್ಟಬಹುಮತದತ್ತ ಕಾಂಗ್ರೆಸ್ ದಾಪುಗಾಲು ಇಟ್ಟಿದ್ದು, ಸರ್ಕಾರ ರಚನೆ ಮಾಡುವುದು ಬಹುತೇಕ ಫಿಕ್ಸ್ ಆಗಿದೆ. ಬಿಜೆಪಿ ಸರ್ಕಾರದ ಘಟಾನುಘಟಿ ನಾಯಕರು ಹಿನ್ನಡೆ ಸನುಭವಿಸಿದ್ದಾರೆ.

ಕಾಂಗ್ರೆಸ್ ಕಚೇರಿ ಮುಂದೆ ಕಾರ್ಯಕರ್ತರ ಸಂಭ್ರಮಾಚರಣೆ : ಕಾಂಗ್ರೆಸ್‌ ಸರ್ಕಾರವನ್ನು ರಚಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಹೀಗಾಗಿ ಕಾಂಗ್ರೆಸ್​ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಕೆಪಿಸಿಸಿ ಕಚೇರಿಯ ಮುಂದೆ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಕುಣಿದು ಕುಪ್ಪಳಿಸಿ ಸಂಭ್ರಮಚಾರಣೆಯನ್ನು ಶುರು ಮಾಡಿದ್ದಾರೆ. ಅಲ್ಲದೇ ಚುನಾವಣಾ ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿರುವ ಕಾಂಗ್ರೆಸ್​ ನಾಯಕರ ಮುಖದಲ್ಲಿ ಮಂದಹಾಸ ಮೂಡಿದ್ದು, ಕಾರ್ಯಕರ್ತರತ್ತ ಕೈ ಬೀಸುತ್ತಿದ್ದಾರೆ.

ಅರಳದ ಕಮಲ : ರಾಜ್ಯದಲ್ಲಿ ಅಧಿಕಾರದ ಅಮಲಿನಲ್ಲಿದ್ದ ಬಿಜೆಪಿಗೆ ಮತದಾನ ಪ್ರಭುಗಳು ಬಿಗ್ ಶಾಕ್ ಕೊಟ್ಟಿದ್ದಾರೆ. ಹೌದು.. ರಾಜ್ಯ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಸೇರಿದಂತೆ ಸಾಲು ಸಾಲು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದವು. ಆದರೆ ಇವುಗಳನ್ನೆಲ್ಲಾ ಮರೆಮಾಚಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವನ್ನು ಭ್ರಷ್ಟ ಪಕ್ಷ ಎಂದು ಬಿಂಬಿಸಲು ಹೊರಟಿದ್ದರು.  ಆದರೆ ಬುದ್ದಿವಂತ ಕನ್ನಡಿಗರು ಅಸಲಿಯಾವುದು ನಕಲಿ ಯಾವುದು ಎಂದು ಅರ್ಥ ಮಾಡಿಕೊಂಡಿದ್ದರು. ಹೀಗಾಗಿ ಕಾಂಗ್ರೆಸ್‌ಗೆ ಮತ ಹಾಕಿ ಬಿಜೆಪಿಯನ್ನು ಮಕಾಡೆ ಮಲಗಿಸಿದ್ದಾರೆ.

3ನೇ ಸ್ಥಾನಕ್ಕೆ ಕುಸಿದ ಜೆಡಿಎಸ್: ಈ ಬಾರಿ ಜೆಡಿಎಸ್ 25 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಕಳೆದ ಬಾರಿಗಿಂತ ಈ ಬಾರಿ ಜೆಡಿಎಸ್ 12 ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದೆ. ಆ ಮೂಲಕ ಜೆಡಿಎಸ್ ನ ಕಿಂಗ್ ಮೇಕರ್ ಕನಸು ಭಗ್ನಗೊಂಡಿದ್ದು, ಮೂರನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಳ್ಳುವಂತಾಗಿದೆ.

ಜಡಿಎಸ್‌ 2018 ರಲ್ಲಿ 37 ಸ್ಥಾನಗಳನ್ನು ಗೆದ್ದಿತು ಮತ್ತು ಶೇಕಡಾ 20 ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿತ್ತು. ಆದರೆ ಈ ಬಾರಿ ಇದಕ್ಕೆ ವ್ಯತಿರಿಕ್ತವಾಗಿ, ಪಕ್ಷವು ಪ್ರಸ್ತುತ 25 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ ಮತ್ತು ಅದರ ಮತಗಳ ಪ್ರಮಾಣ ಕೂಡ ಶೇ.13ಕ್ಕೆ ಕುಸಿತವಾಗಿದೆ.

 

 

Donate Janashakthi Media

Leave a Reply

Your email address will not be published. Required fields are marked *