ಬಿಜೆಪಿ ಸೋಲಿನತ್ತ ಸಾಗುತ್ತಿದೆ, ಜನದನಿ ವಿಧಾನಸಭೆಯಲ್ಲಿ ಮೊಳಗಲಿದೆ

– ವಸಂತರಾಜ ಎನ್ ಕೆ

 

ಚುನಾವಣಾ ಕದನ ನಿರ್ಣಾಯಕ ಹಂತದಲ್ಲಿದ್ದು, ಪ್ರಚಾರಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಕಾಂಗ್ರೆಸ್, ಬಿಜೆಪಿ ಗಳ ಪ್ರಣಾಳಿಕೆಗಳ ಸಾರಾಂಶ ಹಾಗೂ ಪರಿಣಾಮ, ಈ ವಾರದ ಚುನಾವಣಾ ಪ್ರಚಾರದ ವೈಖರಿ ಮತ್ತು ರಾಜಕೀಯ ವಾಗ್ವಾದಗಳ ಚಿತ್ರಣ, ಚುನಾವಣಾ-ಪೂರ್ವ ಸಮೀಕ್ಷೆಗಳು ಮತ್ತಿತರ ಬೆಳವಣಿಗೆಗಳ ಸ್ಥೂಲ ನೋಟ ಇಲ್ಲಿದೆ.  ಈ ಎಲ್ಲಾ ಅಂಶಗಳು ಎರಡು ಫಲಿತಾಂಶಗಳನ್ನು ಸೂಚಿಸುತ್ತಿವೆ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದೇ ಸೋಲನ್ನು ಅನುಭವಿಸಲಿದೆ.  ಪರ್ಯಾಯ ಪಕ್ಷಗಳ ಕನಿಷ್ಠ ಇಬ್ಬರು (ಸಿಪಿಐ-ಎಂ ನ ಡಾ. ಅನಿಲ್ ಕುಮಾರ್ ಮತ್ತು ಸರ್ವೋದಯದ ದರ್ಶನ್ ಪುಟ್ಟಣ್ಣಯ್ಯ) ಪ್ರತಿನಿಧಿಗಳ ಮೂಲಕ ಮುಂದಿನ ಕರ್ನಾಟಕ ವಿಧಾನಸಭೆಯಲ್ಲಿ ಜನದನಿ ಮತ್ತೆ  ಮೊಳಗಲಿದೆ ಎಂಬ ಭರವಸೆ ಮೂಡುತ್ತಿದೆ.

***********

 

ಚುನಾವಣಾ ಕದನ ನಿರ್ಣಾಯಕ ಹಂತದಲ್ಲಿದ್ದು, ಪ್ರಚಾರಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಕಳೆದ ವಾರ ಬಿಜೆಪಿಯ 98 ಕೇಂದ್ರೀಯ ಸ್ಟಾರ್ ಪ್ರಚಾರಕರು ರಾಜ್ಯಕ್ಕೆ ಬಂದಿಳಿದಿದ್ದಾರೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್  ಶಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ಅವರು ಹಲವಾರು ಸಾರ್ವಜನಿಕ ಸಭೆಗಳು ಮತ್ತು ‘ರೋಡ್‌ಶೋ’ಗಳೊಂದಿಗೆ ರಾಜ್ಯದಾದ್ಯಂತ ಮಿಂಚಿನ ಪ್ರವಾಸ ನಡೆಸುತ್ತಿದ್ದಾರೆ.

‘ರೋಡ್‌ಶೋ’ ಎಂಬುದು ಬಿಜೆಪಿಯು ಆವಿಷ್ಕರಿಸಿ ಆಚರಣೆಗೆ ತಂದಿರುವ ಯಾವುದೇ ರಾಜಕೀಯ ಹೂರಣವಿಲ್ಲದ ಹಾನಿಕಾರಕ ಚುನಾವಣಾ ಪ್ರಚಾರದ ವಿಧಾನವಾಗಿದೆ. ಇದು ಕೇವಲ ಹಣ, ಬಲ ಮತ್ತು ರಾಜಕೀಯ ಶಕ್ತಿಯ ಪ್ರದರ್ಶನವಾಗಿದ್ದು, ಗಂಟೆಗಟ್ಟಲೆ ಸಂಚಾರ ಮತ್ತು ಸಾರ್ವಜನಿಕ ಜೀವನವನ್ನು ಸ್ಥಗಿತಗೊಳಿಸುತ್ತದೆ. ಬಿಜೆಪಿ ರೋಡ್‌ಶೋಗಳ ಒತ್ತಡದಿಂದಾಗಿ  ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಇದನ್ನು  ಅನುಸರಿಸಬೇಕಾಗಿ ಬಂದಿದೆ.  ಭದ್ರತೆಯ ಹೆಸರಿನಲ್ಲಿ, ಬೀದಿ ಬದಿ ಸಭೆಗಳು, ದಿಡೀರ್  ಸಾರ್ವಜನಿಕ ಸಭೆಗಳು, ಮನೆ ಮನೆಗೆ ಪ್ರಚಾರಗಳು, ಇತರ ರಾಜಕೀಯ ಸಂದೇಶ ನೀಡುವ ವಿಧಾನಗಳ ಮೇಲೆ  ಚುನಾವಣಾ ಆಯೋಗ ಸಲ್ಲದ ನಿರ್ಬಂಧಗಳನ್ನು ಹಾಕುತ್ತದೆ. ವೆಚ್ಚವನ್ನು ನಿಯಂತ್ರಿಸುವ ಹೆಸರಿನಲ್ಲಿ ಪೋಸ್ಟರ್‌ಗಳು, ಗೋಡೆ ಬರಹಗಳನ್ನು ನಿಷೇಧಿಸಿದೆ. ಆದರೆ, ‘ರೋಡ್‌ಶೋ’ ನಿಂದ ಸಾರ್ವಜನಿಕರಿಗೆ ಆಗುವ ಅನಾನುಕೂಲತೆಯನ್ನು ತಡೆಯಲು ಆಯೋಗ ಯಾವುದೇ ಕಿರಿಬೆರಳೂ ಎತ್ತಿಲ್ಲ,  ಇದು ಪ್ರತಿಪಕ್ಷದ ಅಭ್ಯರ್ಥಿಗಳನ್ನು ಮತ್ತು ವಿಶೇಷವಾಗಿ ಕಡಿಮೆ ಸಂಪನ್ಮೂಲಗಳನ್ನು ಹೊಂದಿರುವ ಪಕ್ಷಗಳನ್ನು ಪ್ರತಿಕೂಲ ಪರಿಸ್ಥಿತಿಗೆ ತಳ್ಳುತ್ತದೆ.

ಬಿಜೆಪಿ ನಾಯಕಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಚೆ ಅವರು ಬಿಜೆಪಿಯ ಎಲ್ಲ ಘಟಕ‌ಗಳಿಗೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಬೇಗ ಕಳಿಸಲು ಸುತ್ತೋಲೆ ಹೊರಡಿಸಿದ್ದು ವಿವಾದ ಸೃಷ್ಟಿಸಿದೆ.  ಚುನಾವಣಾ ಆಯೋಗಕ್ಕೆ ಈ ಕುರಿತು ಸೂಚಿಸಬೇಕಾಗಿದೆ, ಹಾಗಾಗಿ ಕೂಡಲೇ ಇದನ್ನು ಕಳಿಸುವಂತೆ ಸುತ್ತೋಲೆ ಹೇಳಿದೆ. ಸಚಿವರು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುತ್ತಿದ್ದಾರೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಕಲಬುರ್ಗಿಯ ಬಿಜೆಪಿ ಅಭ್ಯರ್ಥಿ ಮಣಿಕಂಠ ಅವರು ಪಿಸ್ತೂಲ್ ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಚುನಾವಣಾ ರ್ಯಾಲಿಯೊಂದರಲ್ಲಿ ಎಸೆಯಲಾದ ಕಲ್ಲೊಂದು ಕಾಂಗ್ರೆಸ್ ಮುಖಂಡ ಡಾ.ಜಿ. ಪರಮೇಶ್ವರ್ ತಲೆಗೆ ಬಿದ್ದು ಗಾಯಗೊಂಡಿದ್ದಾರೆ.

ಬೆಂಗಳೂರಿನ ಕ್ಷೇತ್ರವೊಂದರಲ್ಲಿ ಪ್ರಸ್ತುತ ಬಿಜೆಪಿ ಶಾಸಕರಿಂದ ಮತದಾರರ ಚೀಟಿಗಳು ವಾಟ್ಸಪ್ ನಲ್ಲಿ ಬಂದಿವೆ. ಅನೇಕ ವಿರೋಧ ಪಕ್ಷದ ಅಭ್ಯರ್ಥಿಗಳು ಮತ್ತು ನಾಗರಿಕ ಗುಂಪುಗಳು ಚುನಾವಣಾ ಆಯೋಗಕ್ಕೆ ದೂರು ನೀಡಿ, ಮತದಾರರ ಫೋನ್ ಸಂಖ್ಯೆಗಳು ಅವರಿಗೆ ಹೇಗೆ ಲಭ್ಯವಾಗಿವೆ ಎಂದು ಪ್ರಶ್ನಿಸಿದ್ದಾರೆ.  ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಲಾಗುತ್ತಿರುವ ನಗದು ಮತ್ತು ಸಾಮಗ್ರಿಗಳ ವಶಪಡಿಸಿಕೊಳ್ಳುವಿಕೆ ಈ ವಾರ 300 ಕೋಟಿ ರೂ.ಗಳನ್ನು ದಾಟಿದೆ. ಇದು ಕಳೆದ ನಾಲ್ಕು ಚುನಾವಣೆಗಳಲ್ಲಿ ಜಪ್ತಿಮಾಡಿದ ಮೊತ್ತಕ್ಕಿಂತ ಹೆಚ್ಚು ಮತ್ತು ಕಳೆದ ಚುನಾವಣೆಯ ಸಂದರ್ಭದಲ್ಲಿ ವಶಪಡಿಸಿಕೊಂಡ ಮೊತ್ತದ ಸರಿಸುಮಾರು 2.5 ಪಟ್ಟು ಇದೆ.

ಈ ವಾರ ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ಬಿಡುಗಡೆಯಾಗಿದೆ. ಕಾಂಗ್ರೆಸ್ ಪ್ರಣಾಳಿಕೆಗೂ ಮುನ್ನವೇ ಐದನೇ ಖಾತರಿ ಘೋಷಿಸಿತ್ತು. ಕಾಂಗ್ರೆಸ್ ‘ಐದು ಖಾತರಿಗಳು’ ಮತ್ತು ನಿರ್ದಿಷ್ಟ ವಿಷಯಗಳ ಮೇಲೆ ಕೇಂದ್ರೀಕರಿಸಿತ್ತು. ಹಾಗಾಗಿ ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸಲು ಮತ್ತು ಗಮನವನ್ನು ಬೇರೆಡೆಗೆ ಸೆಳೆಯಲು ವಿಫಲವಾದ ಬಿಜೆಪಿ ಜನರನ್ನು ಬಾಧಿಸುವ ವಿಷಯಗಳ ಬಗ್ಗೆ ಮಾತಾಡಲೇಬೇಕಾಯಿತು. ಎರಡೂ ಪಕ್ಷಗಳ ಪ್ರಣಾಳಿಕೆಗಳ ಬಿಡುಗಡೆಯೊಂದಿಗೆ ಚುನಾವಣಾ ಭಾಷಣವು ನಿರ್ದಿಷ್ಟ ನೀತಿಗಳು, ಭರವಸೆಗಳು, ಖಾತರಿಗಳ ಮೇಲೆ ಕೇಂದ್ರೀಕರಿಸಿದೆ.  ಚುನಾವಣಾ ಪ್ರಚಾರ ಜನರ ಸಮಸ್ಯೆಗಳ ಮೇಲೆ ಇದ್ದರೂ, ಎರಡೂ ಕಡೆಯಿಂದ ಬೈಗಳಗಳು ಈಗಾಗಲೇ ಮಾಮೂಲಿಗಿಂತ ಹೆಚ್ಚೇ ಇದ್ದವು, ಮಾಧ್ಯಮಗಳಿಂದ ಹಿಗ್ಗಿಸಲ್ಪಟ್ಟು  ವೇಗವಾಗಿ ಬೈಗಳುಗಳ ಸುರಿಮಳೆಯಾಯಿತು. ಎರಡೂ ಪಕ್ಷಗಳು ಆಯೋಗಕ್ಕೆ  ಈ ಬಗ್ಗೆ ದೂರುಗಳು ಮತ್ತು ಪ್ರತಿ-ದೂರುಗಳನ್ನು ಸಲ್ಲಿಸಿದವು.  ಚುನಾವಣಾ ಆಯೋಗ ಎಲ್ಲಾ ಪ್ರಚಾರಕರಿಗೆ ಸಂಯಮ ತೋರುವಂತೆ  ಮತ್ತು ‘ಸಮಸ್ಯೆ ಆಧಾರಿತ ಚರ್ಚೆ’ ನಡೆಸುವಂತೆ ನಿರ್ದೇಶನ ನೀಡಿತು.  ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ದೂರುಗಳ ಮೇಲೆ ಚುನಾವಣಾ ಆಯೋಗವು ಬಿಜೆಪಿ ಅಭ್ಯರ್ಥಿ ಸೋಮಣ್ಣ ವಿರುದ್ಧ (ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುತ್ತಿದ್ದಾರೆ)  ಎಫ್‌ಐಆರ್ ದಾಖಲಿಸುವ ಕ್ರಮವನ್ನು ಮಾತ್ರ ತೆಗೆದುಕೊಂಡಿದೆ. ಜೆಡಿಎಸ್ ಅಭ್ಯರ್ಥಿಯನ್ನು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಸೋಮಣ್ಣ ಆಮಿಷ ಒಡ್ಡಿರುವ ಧ್ವನಿಮುದ್ರಣದೊಂದಿಗೆ ದೂರು ನೀಡಲಾಗಿದೆ ಎಂದು ಹೇಳಲಾಗಿದೆ.

‘ನಿಮ್ಮದು ಬಿಟ್ಟಿ, ನಮ್ಮದು ಸಬಲೀಕರಣ’

ಕಳೆದ ವಾರ ನಾವು ಜೆಡಿ (ಎಸ್) ಮತ್ತು ಸಿಪಿಐ (ಎಂ) ಪ್ರಣಾಳಿಕೆಗಳ ಪ್ರಮುಖ ಅಂಶಗಳನ್ನು ನೋಡಿದ್ದೇವೆ. ಸಾಮೂಹಿಕ ಸಂಘಟನೆಗಳು, ಜನಾಂದೋಲನಗಳು ಮತ್ತು ಕಾರ್ಯಕರ್ತರ ಗುಂಪುಗಳು ಹೊರಡಿಸಿದ ‘ಜನರ ಪ್ರಣಾಳಿಕೆ ಗಳನ್ನೂ ನಾವು ನೋಡಿದ್ದೇವೆ.

ಮೇ ದಿನದಂದು ಬಿಡುಗಡೆ ಮಾಡಿದ ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿ, ತನ್ನ ಹಿಂದುತ್ವದ ಅಜೆಂಡಾವನ್ನು ಪ್ರಮುಖವಾಗಿ ಎತ್ತಿ ತೋರಿಸಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದಾಗಿ ಭರವಸೆ, ಎಲ್ಲಾ ಅಕ್ರಮ ವಲಸಿಗರನ್ನು ತ್ವರಿತವಾಗಿ ಗಡೀಪಾರು ಮಾಡುವುದನ್ನು ಖಾತ್ರಿಪಡಿಸಲು ಕರ್ನಾಟಕದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ ಮತ್ತು, ರಾಜ್ಯ ಪೊಲೀಸ್ ನಲ್ಲಿ ಕೆ-ಸ್ವಿಫ್ಟ್‌, “ಕರ್ನಾಟಕ – ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆಯ ವಿರುದ್ಧದ ರಾಜ್ಯ ಘಟಕ” ವಿಶೇಷ ವಿಭಾಗವನ್ನು ರಚಿಸುವುದು – ಈ ಅಂಶಗಳು ಪ್ರಣಾಳಿಕೆಯಲ್ಲಿವೆ.

ಕಾಂಗ್ರೆಸ್‌ನ ‘ಗ್ಯಾರಂಟಿ’ಗಳನ್ನು ‘ಗ್ಯಾರಂಟಿ ಅವಧಿ ಮೀರಿದ ಪಕ್ಷದ ಗ್ಯಾರಂಟಿಗಳು’ ಎಂದು ಅಪಹಾಸ್ಯ ಮಾಡಿದ ನಂತರ ಮತ್ತು ಸಾಮಾನ್ಯವಾಗಿ ‘ಬಿಟ್ಟಿ’ಕೊಡುಗೆಗಳನ್ನು ಅಣಕಿಸಿದ ನಂತರ, ಬಿಜೆಪಿ ಗೆ ತನ್ನ ಪ್ರಣಾಳಿಕೆಯಲ್ಲಿ ಕೆಲವು ‘ಬಿಟ್ಟಿ’ ಗಳನ್ನು ಸೇರಿಸಲೇಬೇಕಾಗಿ ಬಂದಿದೆ. ತನ್ನದೇ ಶೈಲಿಯ ಅಸ್ಪಷ್ಟವಾದ ‘ಬಜೆಟ್ ಘೋಷಣೆ’ಗಳಿಂದ (‘ನಿರ್ದಿಷ್ಟ  ಅಭಿವೃದ್ಧಿ/ಯೋಜನೆಗೆ ಇಷ್ಟು 100 ಅಥವಾ 1000 ಕೋಟಿಗಳನ್ನು ಮೀಸಲಿಟ್ಟಿದೆ’) ಕಾಂಗ್ರೆಸ್ ಪ್ರಚಾರವನ್ನು ಎದುರಿಸಲು ಸಾಧ್ಯವಾಗುವುದಿಲ್ಲ ಎಂದು ಅದು ಅರಿತುಕೊಂಡಿದೆ.

ಬಿಜೆಪಿ ತನ್ನದೇ ಆದ ‘ಬಿಟ್ಟಿ’ ಕೊಡುಗೆಗಳನ್ನು ಘೋಷಿಸಿತು – BPL ಕುಟುಂಬಗಳಿಗೆ ವಾರ್ಷಿಕವಾಗಿ ಮೂರು ಉಚಿತ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಮೂರು ಹಬ್ಬಗಳ ಸಮಯದಲ್ಲಿ; ಕಾರ್ಪೊರೇಶನ್‌ಗಳ ಪ್ರತಿ ವಾರ್ಡ್‌ಗಳಲ್ಲಿ ಅಟಲ್ ಆಹಾರ ಕೇಂದ್ರವನ್ನು ಸ್ಥಾಪನೆ (ಕಾಂಗ್ರೆಸ್‌ನ ಇಂದಿರಾ ಕ್ಯಾಂಟೀನ್‌ನಂತೆ): ಬಿಪಿಎಲ್ ಕುಟುಂಬಗಳಿಗೆ ದಿನಕ್ಕೆ ಅರ್ಧ ಲೀಟರ್ ಉಚಿತ ನಂದಿನಿ ಹಾಲನ್ನು ನೀಡುವುದರ ಜೊತೆಗೆ ಸಾಮಾನ್ಯ ಪಡಿತರ ಕಿಟ್‌ಗಳೊಂದಿಗೆ ತಿಂಗಳಿಗೆ ಐದು ಕೆಜಿ ರಾಗಿ; ವಿಧವಾ ಪಿಂಚಣಿ 800 ರೂ.ನಿಂದ 2,000 ರೂ.ಗೆ ಹೆಚ್ಚಳ; ಕಾರ್ಪೊರೇಶನ್‌ ಗಳ ಪ್ರತಿ ವಾರ್ಡ್‌ನಲ್ಲಿ ‘ನಮ್ಮ ಕ್ಲಿನಿಕ್’ಗಳು (ಕಳೆದ 2 ಬಜೆಟ್‌ಗಳಲ್ಲಿ ಘೋಷಿಸಲಾಗಿದೆ, ಇದುವರೆಗೆ ಯಾವುದೇ ಪ್ರಗತಿ ಸಾಧಿಸಿಲ್ಲ); ಎಲ್ಲಾ ಹಿರಿಯ ನಾಗರಿಕರಿಗೆ ಉಚಿತ ವಾರ್ಷಿಕ ಪ್ರಮುಖ ಆರೋಗ್ಯ ತಪಾಸಣೆ.

ಈ ‘ಬಿಟ್ಟಿ’ಗಳ ಕುರಿತಾಗಿ ಪ್ರಶ್ನೆಗಳನ್ನು ಎದುರಿಸಿದ ಬಿಜೆಪಿ ಅಧ್ಯಕ್ಷರು, ‘ಕಾಂಗ್ರೆಸ್‌ನ ಖಾತರಿಗಳು ‘ಬಿಟ್ಟಿ’, ಬಿಜೆಪಿಯವು ಅಂತರರಾಷ್ಟ್ರೀಯ ಪರಿಸ್ಥಿತಿಯಿಂದ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ಎದುರಿಸಲು, ಜನರನ್ನು ಸಬಲಗೊಳಿಸುವ ಕ್ರಮಗಳು’ ಎಂದು ಸಮರ್ಥಿಸಿಕೊಳ್ಳುತ್ತಾರೆ!

ಬಿಜೆಪಿ ಪ್ರಣಾಳಿಕೆಯ ಇತರ ಪ್ರಮುಖ ಅಂಶಗಳು – 10 ಲಕ್ಷ ಉತ್ಪಾದನಾ ಉದ್ಯೋಗಗಳು ಮತ್ತು ರಾಜ್ಯವನ್ನು ವಿದ್ಯುತ್ ವಾಹನ ಕೇಂದ್ರವನ್ನಾಗಿ ಮಾಡುವ ಭರವಸೆಯನ್ನು ಒಳಗೊಂಡಿವೆ. ಕಳೆದ ಬಜೆಟ್‌ನ ಇತರ ಸಾಮಾನ್ಯ ಘೋಷಣೆಗಳನ್ನು ಸಹ ಸೇರಿಸಲಾಗಿದೆ.

‘ಬಿಟ್ಟಿ’ಗಳ ಸ್ಪರ್ಧೆಯಲ್ಲಿ ಕಾಂಗ್ರೆಸ್ ಮುಂದೆ

ಮರುದಿನ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು, ಅದರ ನಾಲ್ಕು ‘ಖಾತರಿ’ಗಳನ್ನು ಪುನರುಚ್ಚರಿಸಿತು – ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್; ಪ್ರತಿ ಮಹಿಳಾ ಕುಟುಂಬದ ಮುಖ್ಯಸ್ಥರಿಗೆ ರೂ 2,000; ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಕ್ಕೆ 10 ಕೆಜಿ ಅಕ್ಕಿ ಅಥವಾ ಧಾನ್ಯಗಳ ಆಯ್ಕೆ; ಮತ್ತು ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷಗಳವರೆಗೆ 3,000 ರೂ. ಮತ್ತು ನಿರುದ್ಯೋಗಿ ಡಿಪ್ಲೋಮಾದಾರರಿಗೆ ಎರಡು ವರ್ಷಗಳವರೆಗೆ 1,500 ರೂ.  ಈ ವಾರ ಘೋಷಿಸಿದ ಐದನೇ ‘ಗ್ಯಾರಂಟಿ’ ಸಾಮಾನ್ಯ BMTC/KSRTC ಬಸ್‌ಗಳಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ.

ಇದರ ಜೊತೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಮುಖ ನೀತಿ ಘೋಷಣೆಗಳನ್ನು ಸೇರಿಸಿದೆ. ಒಂದು ವರ್ಷದೊಳಗೆ ಎಲ್ಲ ‘ಜನವಿರೋಧಿ’  ಕಾನೂನುಗಳನ್ನು ಹಿಂಪಡೆಯುವುದಾಗಿ ಭರವಸೆ ನೀಡಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು 8 ರಿಂದ 12 ಗಂಟೆಗಳವರೆಗೆ ಹೆಚ್ಚಿಸುವ ಕಾರ್ಖಾನೆಗಳ ಕಾಯಿದೆಗೆ ಮಾಡಿದ ತಿದ್ದುಪಡಿಗಳನ್ನು ಹಿಂಪಡೆಯಲು ಪ್ರಣಾಳಿಕೆಯು ಬದ್ಧವಾಗಿದೆ. ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳನ್ನು ರದ್ದುಪಡಿಸುವುದಾಗಿ ಮತ್ತು ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕಗಳಿಗೆ ಬಿಜೆಪಿ ಮಾಡಿದ ಬದಲಾವಣೆಗಳನ್ನು ಹಿಂಪಡೆಯಲು, ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡದೆ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಪಣ ತೊಟ್ಟಿದೆ.

ಕಾಂಗ್ರೆಸ್ ಪ್ರಣಾಳಿಕೆ ಎಲ್ಲ ಜನವಿಭಾಗಗಳಿಗೆ ನ್ಯಾಯಯುತ ಮೀಸಲಾತಿ ಒದಗಿಸುವ ಸವಾಲನ್ನು ಒಟ್ಟು ಮೀಸಲಾತಿಯ ಮಿತಿಯನ್ನು 75% ಕ್ಕೆ ಏರಿಸಿ ಅದನ್ನು 9ನೇಯ ಶೆಡ್ಯೂಲಿಗೆ ಸೇರಿಸುವ ವಾಗ್ದಾನ ಮಾಡಿದೆ. ಮುಸ್ಲಿಂ ಮೀಸಲಾತಿ ರದ್ದತಿ ಸೇರಿದಂತೆ ಬಿಜೆಪಿ ತಂದ ಮೀಸಲಾತಿ ವ್ಯವಸ್ಥೆಯಲ್ಲಿನ ಬದಲಾವಣೆಗಳನ್ನು ವಾಪಸು ತೆಗೆದುಕೊಳ್ಳುವುದು ಇದರಲ್ಲಿ ಸೇರಿರುತ್ತದೆ.

ಕಾಂಗ್ರೆಸ್ ಪ್ರಣಾಳಿಕೆಯು ಬಜರಂಗದಳ, ಪಿಎಫ್‌ಐ ಅಥವಾ ಇತರರು ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಸಮುದಾಯಗಳ ನಡುವೆ ದ್ವೇಷ ಅಥವಾ ದ್ವೇಷವನ್ನು ಉತ್ತೇಜಿಸುವ, ಜಾತಿ ಅಥವಾ ಧರ್ಮದ ಆಧಾರದ ಮೇಲೆ ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ದೃಢವಾದ ಮತ್ತು ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳುವ ಸಂಕಲ್ಪವನ್ನು ಒಳಗೊಂಡಿದೆ. ಅಂತಹ ಯಾವುದೇ ಸಂಸ್ಥೆಗಳ ಮೇಲೆ ನಿಷೇಧ ಹೇರುವುದು ಸೇರಿದಂತೆ ಕಾನೂನಿನ ಪ್ರಕಾರ ನಿರ್ಣಾಯಕ ಕ್ರಮ ಕೈಗೊಳ್ಳಲು ಪ್ರಣಾಳಿಕೆ ಬದ್ಧವಾಗಿದೆ. ಪ್ರಣಾಳಿಕೆಯ ಈ ಅಂಶವನ್ನು ಬಳಸಿಕೊಂಡು ಬಿಜೆಪಿ ರಾಜಕೀಯ ಚರ್ಚೆಯ ದಿಕ್ಕನ್ನು ಬದಲಾಯಿಸಲು ಪ್ರಯತ್ನ ನಡೆಸಿದೆ.

ಸ್ಕೀಂ ಕಾರ್ಮಿಕರು – ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು ತಿಂಗಳಿಗೆ 15,000 ರೂ.ಗೆ, ಆಶಾ ಕಾರ್ಯಕರ್ತೆಯರಿಗೆ 8,000 ರೂ. ಗೆ, ಬಿಸಿಯೂಟದ ಕೆಲಸಗಾರರಿಗೆ ರೂ. 5000. ಗಳಿಗೆ ಹೆಚ್ಚಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಪ್ರಣಾಳಿಕೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 3 ಲಕ್ಷ ರೂಪಾಯಿ ನಿವೃತ್ತಿ ಸೌಲಭ್ಯವನ್ನು ನೀಡುವುದಾಗಿ ಸಹ ಭರವಸೆ ನೀಡಲಾಗಿದೆ. 2006 ರ ನಂತರ ಸೇರ್ಪಡೆಗೊಂಡ ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಲು ಪ್ರಣಾಳಿಕೆ ಬದ್ಧವಾಗಿದೆ.

ಮನೆ ಮಾಲೀಕರ ಹಕ್ಕುಗಳನ್ನು ರಕ್ಷಿಸಲು ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯಿದೆ, 1972 ಅನ್ನು ತಿದ್ದುಪಡಿ ಮಾಡಲು; ಹೈನುಗಾರಿಗೆ ಒಂದು ಲೀಟರ್ ಹಾಲಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು 5 ರಿಂದ 7 ರೂ ಹೆಚ್ಚಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪ್ರಣಾಳಿಕೆಯಲ್ಲಿ ಬದ್ಧವಾಗಿವೆ.

ಎರಡೂ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ (ಮಟ್ಟದಲ್ಲಿ ವ್ಯತ್ಯಾಸವಿದ್ದರೂ) ಜನರಿಗೆ ಕೆಲವು ತಕ್ಷಣದ ಪರಿಹಾರವನ್ನು ನೀಡಲು ನಿರ್ದಿಷ್ಟ ಭರವಸೆಗಳನ್ನು ನೀಡುತ್ತವೆ. ಆದರೆ, ಜನರ ಸಂಕಷ್ಟಗಳಿಗೆ ಮೂಲ ಕಾರಣವಾದ ನವ-ಉದಾರವಾದಿ ಆರ್ಥಿಕ ಕಾರ್ಯಸೂಚಿಗಳು ರೂಪಿಸುವ ನೀತಿಗಳ ಬಗ್ಗೆ ತಿಳಿಸುವುದಿಲ್ಲ ಎಂದು ಗಮನಿಸಬೇಕು. ಅದನ್ನು ಈ ಪಕ್ಷಗಳಿಂದ ನಿರೀಕ್ಷಿಸಲೂ ಸಾಧ್ಯವಿಲ್ಲ. ಆದರೆ ಎಡ-ಪ್ರಜಾತಾಂತ್ರಿಕ ಶಕ್ತಿಗಳು ತಾವು ಸ್ಪರ್ಧಿಸಿರುವ ಕಡೆಗಳಲ್ಲಿ ರಾಜಕೀಯ ಚರ್ಚೆಯಲ್ಲಿ ಈ ಅಂಶವನ್ನು ತರಲು ಪ್ರಯತ್ನಿಸಿವೆ.

ಇದನ್ನೂ ಓದಿಜನಮತ2023 : ಕರ್ನಾಟಕದಲ್ಲಿ ಬಿಜೆಪಿ ಒಮ್ಮೆಯೂ ಗೆಲ್ಲದ 53 ಕ್ಷೇತ್ರಗಳು!

 

ರಾಜಕೀಯ ವಾಗ್ವಾದದ ದಿಕ್ಕು  ಬದಲಾಯಿಸಲು ಬಿಜೆಪಿ ಪ್ರಯತ್ನ

ವಾರದ ಬಹುಪಾಲು, ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ‘ಖಾತರಿ’ಗಳಿಗೆ ಅಂಟಿಕೊಂಡರು ಮತ್ತು ಬಿಜೆಪಿಯ ಕಾರ್ಯವೈಖರಿ, ಆಡಳಿತ-ವಿರೋಧಿ ಅಲೆಗೆ ಕಾರಣವಾದ (ನಿರುದ್ಯೋಗ, ಬೆಲೆಏರಿಕೆ, ಭ್ರಷ್ಟಾಚಾರ, ಕೋಮು ಹಿಂಸಾಚಾರ ಇತ್ಯಾದಿ) ವಿಷಯಗಳ ಮೇಲೆ ದಾಳಿ ನಡೆಸಿದರು. ಬಿಜೆಪಿ ನಾಯಕರು ಕಾಂಗ್ರೆಸ್ ನ ‘ಪರಿವಾರವಾದ’ ಮತ್ತು ಭ್ರಷ್ಟಾಚಾರದ ವಿರುದ್ಧ, ಮೋದಿ ಮತ್ತು ಡಬಲ್ ಇಂಜಿನ್ ಸರ್ಕಾರ ಎಂಬ ತಮ್ಮ ಮಂತ್ರಕ್ಕೆ ಅಂಟಿಕೊಂಡಿದ್ದರು.. ಕಾಂಗ್ರೆಸ್ ಲಿಂಗಾಯತ ವಿರೋಧಿ ಎಂದು ಬಿಜೆಪಿ ಆರೋಪಿಸಲು ಪ್ರಯತ್ನಿಸಿತು ಮತ್ತು ಆರ್‌ಎಸ್‌ಎಸ್ ಸಿದ್ಧಾಂತವು ಬಸವ ತತ್ವ ವಿರೋಧಿ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ. ಈ ದಿಕ್ಕಿನಲ್ಲಿ ರಾಜಕೀಯ ಸಂವಾದ ನಡೆಯುತ್ತಿರುವಾಗಲೇ ಎರಡೂ ಕಡೆಯಿಂದ ‘ಬೈಗುಳಗಳ ಸುರಿಮಳೆ’ ಆರಂಭವಾಯಿತು.. ಮಲ್ಲಿಕಾರ್ಜುನ ಖರ್ಗೆ ಬಿಜೆಪಿಯನ್ನು ‘ವಿಷಪೂರಿತ ಹಾವು’ಎಂದು ಕರೆದಿದ್ದು, ಇದು ಪ್ರಧಾನಿ ಮೋದಿಯವರ ಮೇಲಿನ ವೈಯಕ್ತಿಕ ದಾಳಿ ಎಂದು ಸ್ವತಃ ಪ್ರಧಾನಿ ಮತ್ತು ಇತರ ಬಿಜೆಪಿ ನಾಯಕರು ಹೇಳಿದ್ದಾರೆ. ಬಿಜೆಪಿ ನಾಯಕರೊಬ್ಬರು ಪ್ರಿಯಾಂಕಾ ವಾದ್ರಾ ಅವರನ್ನು ‘ವಿಷ ಕನ್ಯಾ’  ಎಂದು ಕರೆದರು ಮತ್ತು ‘ಯಾರಾದರೂ ಹಿಂದೂ ಧರ್ಮವನ್ನು ಟೀಕಿಸಿದರೆ ದಮ್..ಡಂ’ ಎಂದು ಗುಡುಗಿದರು.  ‘ಕಾಂಗ್ರೆಸ್ ಗೆದ್ದರೆ ಕೋಮುಗಲಭೆಯಾಗುತ್ತದೆ’ ಎಂದು ಕೇಂದ್ರದ ಗೃಹ ಸಚಿವ ಅಮಿತ್ ಶಾ ಹೇಳಿದರು. ಮಾಯಾಂಕ್ ಖರ್ಗೆ ಅವರು ಮೋದಿಯನ್ನು ‘ನಾಲಾಯಕ್ ಬೇಟಾ’ ಎಂದು ಕರೆದಿದ್ದಾರೆ. ಪ್ರಧಾನಿ ಮೋದಿ ತಾವು ‘91 ಬಾರಿ ಬೈಗುಳ ಸಿಕ್ಕಿದೆ’ ಎಂದು  ಭಾವನಾತ್ಮಕ ‘ಬಲಿಪಶು’ಕಾರ್ಡ್ ಆಡಲು ಆರಂಭಿಸಿದರು. ‘ಕಾಂಗ್ರೆಸ್ ಆಡಳಿತ ಭ್ರಷ್ಟಾಚಾರ ಕಾಲ ಮತ್ತು ಬಿಜೆಪಿ ಆಡಳಿತ ಅಮೃತ ಕಾಲ’ಎಂದು ಪ್ರಧಾನಿ ಮೋದಿ ಘೋಷಿಸಿದರು, ಬಿಜೆಪಿ ಆಡಳಿತ ‘ಬಿಜೆಪಿ ಶಾಸಕರಿಗೆ ಅಮೃತ ಕಾಲ ಮತ್ತು ಜನರಿಗೆ ವಿಷಕಾಲ’ ಎಂದು ಕಾಂಗ್ರೆಸ್ ನಾಯಕರೊಬ್ಬರು ಪ್ರತಿದಾಳಿ ಮಾಡಿದರು. ಮೋದಿ ಮತ್ತು  ಶಾ ಇಬ್ಬರೂ ಈ ವಾರ ಜೆಡಿ (ಎಸ್) ವಿರುದ್ಧ ವಾಗ್ದಾಳಿ ಆರಂಭಿಸಿದರು, ‘ಜೆಡಿ (ಎಸ್) ಗೆ ಮತ ನೀಡಿದರೆ ಕಾಂಗ್ರೆಸ್‌ಗೆ ಮತ’ ನೀಡಿದಂತೆ, ಜೆಡಿ(ಎಸ್) ಕಾಂಗ್ರೆಸ್ ನ ಬಿ ಟೀಂ ಎಂದು ಹೇಳಿದರು.  ಕಾಂಗ್ರೆಸ್ ನಾಯಕರು ಜೆಡಿ(ಎಸ್) ಬಿಜೆಪಿಯ ಬಿ ಟೀಂ ಎಂದು ಹೇಳಿದರು.  ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ‘ನಾವು ಕನ್ನಡಿಗರ ಬಿ ಟೀಂ’ಎಂದು ಕಾಂಗ್ರೆಸ್ ಮತ್ತು ಬಿಜೆಪಿಯ ಆರೋಪಗಳಿಗೆ ಉತ್ತರಿಸಿದರು. ಸರ್ಕಾರದ ಕ್ರಮಗಳನ್ನು ವಿರೋಧಿಸುವ ಮತ್ತು ಅಡ್ಡಿಪಡಿಸುವ ಎಲ್ಲರಿಗೂ ಬುಲ್ ಡೋಜರ್‌ಗಳ ‘ಯುಪಿ ಮಾದರಿ’ಯ ‘ಯೋಗಿ ರಾಜ್‌’ ತರುವುದಾಗಿ ಅನೇಕ ಬಿಜೆಪಿ ನಾಯಕರು ಬೆದರಿಸಿದರು. ಕುತೂಹಲಕಾರಿ ವಿಷಯವೆಂದರೆ, ‘ಗುಜರಾತ್ ಮಾದರಿ’ ಇದುವರೆಗಿನ ಬಿಜೆಪಿ ಪ್ರಚಾರದಲ್ಲಿ ಮಾಯವಾಗಿರುವುದು ಎದ್ದು ಕಾಣುತ್ತಿದೆ.

‘ಬೈಗುಳಗಳ ಸುರಿಮಳೆ’ಗೆ ಮುಖ್ಯ ಕಾರಣ, ಎರಡೂ ಪಕ್ಷಗಳ ನಾಯಕರು ಸಂಪೂರ್ಣ ಬಹುಮತವನ್ನು ತಲುಪಲು ‘ಅಲೆ’ ಸೃಷ್ಟಿಸಲು ಪ್ರಯತ್ನಿಸುತ್ತಿರುವುದು. ಇಬ್ಬರೂ ದಕ್ಷಿಣ ಕರ್ನಾಟಕದ ಮೇಲೆ ಕಣ್ಣಿಟ್ಟಿದ್ದಾರೆ ಮತ್ತು ಆ ಪ್ರದೇಶದಲ್ಲಿ ವಿಸ್ತರಿಸಲು ಜೆಡಿ (ಎಸ್) ಮೇಲೆ ದಾಳಿ ನಡೆಸುತ್ತಿದ್ದಾರೆ. ಆದಿಚುಂಚನಗಿರಿಯ ಒಕ್ಕಲಿಗ ಮಠದ ಶ್ರೀಗಳನ್ನು ಭೇಟಿ ಮಾಡಲು ಬಿಜೆಪಿ ವಿಶೇಷವಾಗಿ ಯೋಗಿಯನ್ನು ಕರೆತಂದಿದೆ, ಏಕೆಂದರೆ ಇಬ್ಬರೂ ನಾಥಪಂಥಕ್ಕೆ ಸೇರಿದವರು.

ಪ್ರಣಾಳಿಕೆಗಳ ಬಿಡುಗಡೆಯೊಂದಿಗೆ ರಾಜಕೀಯ=ಆರ್ಥಿಕ ವಿಷಯಗಳ ಮೇಲೆ ವಾಗ್ವಾದವನ್ನು ನಿರೀಕ್ಷಿಸಲಾಗಿತ್ತು.  ಅದು ‘ಬಿಟ್ಟಿ’ಗಳ ಓಟಕ್ಕೆ ಬದಲಾಗಿದೆ. ‘ಕಾಂಗ್ರೆಸ್ ಯಾವತ್ತೂ ತನ್ನ ಭರವಸೆಗಳನ್ನು ಈಡೇರಿಸುವುದಿಲ್ಲ’ ಮತ್ತು  ‘ನಮ್ಮದು ಸಬಲೀಕರಣ, ಅವರದು ಬಿಟ್ಟಿ’ ಎಂಬ ನಿಲುವನ್ನು ಬಿಜೆಪಿ ಪ್ರತಿಪಾದಿಸುತ್ತಿದೆ. ಕಾಂಗ್ರೆಸ್ ‘ಗ್ಯಾರಂಟಿ’ಗಳ ಪರಿಣಾಮವನ್ನು ಎದುರಿಸಲು ಬಿಜೆಪಿಗೆ ಸಹ ‘ಗ್ಯಾರಂಟಿ’ ನೀಡುವ ಒತ್ತಡಕ್ಕೆ ಸಿಲುಕಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ತೀವ್ರ ಸಂಕಟದಲ್ಲಿರುವ ಜನರಿಗೆ ಪರಿಹಾರ ಒದಗಿಸುವ ಕ್ರಮಗಳನ್ನು ‘ಬಿಟ್ಟಿ ಎಂದು ಜರೆಯುವ ಬಿಜೆಪಿಯ ಪ್ರಚಾರಕ್ಕೆ ಕಾಂಗ್ರೆಸ್ ನಿಂದ ಮಾತ್ರವಲ್ಲ, ಇತರ ವಿರೋಧ ಪಕ್ಷಗಳು, ಜನಪರ ಸಂಘಟನೆಗಳು ಚಳುವಳಿಗಳು, ಜನಪರ ಪರಿಣತರಿಂದಲೂ ತೀವ್ರ  ಆಕ್ರೋಶ, ವಿರೋಧ ವ್ಯಕ್ತವಾಗಿದೆ. ‘ನಿಮ್ಮದು ಬಿಟ್ಟಿ, ನಮ್ಮದು ಸಬಲೀಕರಣ’ಎಂಬ ಬಿಜೆಪಿಯ ವಿರೋಧಾಭಾಸದ ನಿಲುವು ಸಹ ತೀವ್ರ ಟೀಕೆಗೆ ಒಳಗಾಗಿದೆ.

ಈ ಸಾಮಾನ್ಯ ಆಕ್ರೋಶ, ಟೀಕೆ ಹಾಗೂ ‘ಬಿಟ್ಟಿ’ಗಳ ಸ್ಪರ್ಧೇಯಲ್ಲಿ ಕಾಂಗ್ರೆಸ್ ಕೈಮೇಲಾಗುತ್ತಿದೆ ಎಂದು ಅರಿತ  ಬಿಜೆಪಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಭಜರಂಗದಳದ ನಿಷೇಧದ ವಿಷಯವನ್ನು ಕೈಗೆತ್ತಿಕೊಂಡು, ‘ಹಿಂದೂ ವಿರೋಧಿ ಕಾಂಗ್ರೆಸ್’ ಎಂಬ ಭಾವನಾತ್ಮಕ ಪ್ರಚಾರಕ್ಕೆ ಇಳಿದಿದೆ.  ‘ಮೊದಲು ರಾಮನನ್ನು ಬೀಗ ಹಾಕಿದ್ದೀರಿ, ಈಗ ಬಜರಂಗ ಬಲಿಗೆ ಬೀಗ  ಹಾಕುತ್ತೀರಾ?’ ಎಂಬ ಆರೋಪದ ಮೂಲಕ ಸ್ವತಃ ಪ್ರಧಾನಿ ಮೋದಿಯೇ ಈ ಅಭಿಯಾನದ ನೇತೃತ್ವ ವಹಿಸಿದ್ದಾರೆ.  ‘ಜೈ ಭಜರಂಗಬಲಿ’ ಎಂದು ಬಿಜೆಪಿ ಬಟನ್ ಒತ್ತಿ ಎಂದು ಸಾರ್ವಜನಿಕ ಸಭೆಯಲ್ಲೇ ಹೇಳಿದರು. ಸಹಜವಾಗಿಯೇ ಉಳಿದವರು ಉತ್ಸಾಹದಿಂದ ಇದನ್ನೇ ಅನುಸರಿಸಿದ್ದಾರೆ. ಭಜರಂಗದಳ ರಾಜ್ಯದ ಎಲ್ಲ ಕಡೆ ಪ್ರತಿಭಟನೆ, ‘ಹನುಮಾನ್ ಚಾಲೀಸ’ ಪಠಣ ಗಳನ್ನು ಸಂಘಟಿಸಿ ‘ಬಿಜೆಪಿ-ಪರ ಹವಾ’ ಎಬ್ಬಿಸಲು ಪ್ರಯತ್ನಿಸುತ್ತಿದೆ.

ಬಿಜೆಪಿ ಚುನಾವಣಾ ಪ್ರಚಾರವನ್ನು ಮತ್ತೆ ಭಾವನಾತ್ಮಕಗೊಳಿಸಲು, ‘ಭಜರಂಗ ಬಲಿಗೆ ಬೀಗ ಹಾಕುತ್ತಿದ್ದಾರೆ’ ಎಂಬ ಏಕಮಾತ್ರ ಘೋಷಣೆಗೆ ಇಳಿಸಲು ಮತ್ತು ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ.  ಕಾಂಗ್ರೆಸ್ ಹನುಮ ಬೇರೆ, ಭಜರಂಗ ದಳ ಬೇರೆ, ದ್ವೇ಼ಷ ಹಬ್ಬಿಸುವ ಸಂವಿಧಾನ ಕಾನೂನು ಉಲ್ಳಂಘಿಸಿದ ಯಾರ ಮೇಲಾದರೂ ಕ್ರಮ ಕೈಗೊಳ್ಳುವುದು ಸುಪ್ರೀಂ ಕೋರ್ಟಿನ ನಿರ್ದೇಶನ ಎಂದು ಈ ಅಪಪ್ರಚಾರಕ್ಕೆ ಉತ್ತರಿಸಲು ಪ್ರಯತ್ನಿಸುತ್ತಿದೆ. ಜನರು ಯಾವ ಪ್ರಚಾರಕ್ಕೆ ಎಷ್ಟು ಸ್ಪಂದಿಸುತ್ತಾರೆ ಎಂಬುದರ ಮೇಲೆ ಅಂತಿಮ ಫಲಿತಾಂಶ ಅವಲಂಬಿತವಾಗಿರುತ್ತದೆ. ಆದಾಗ್ಯೂ ‘ಭಜರಂಗದಳ ನಿಷೇಧ’ ವಿವಾದಕ್ಕೆ ಇದುವರೆಗಿನ ಬಿಜೆಪಿ-ವಿರೋಧೀ ಟ್ರೆಂಡ್ ಅನ್ನು ರಿವರ್ಸ್ ಮಾಡುವ ಸಾಧ್ಯತೆಯಿದ್ದಂತೆ ಕಾಣುತ್ತಿಲ್ಲ.

ಚುನಾವಣಾ-ಪೂರ್ವ ಸಮೀಕ್ಷೆಗಳು

ಕಳೆದ ಕೆಲವು ದಿನಗಳಿಂದ ಅನೇಕ ಮಾಧ್ಯಮಗಳು ಮತ್ತು ಸಮೀಕ್ಷಾ ಏಜೆನ್ಸಿಗಳು ಮತದಾನದ ಪ್ರವೃತ್ತಿಗಳು ಮತ್ತು ಚುನಾವಣಾ ವಿಷಯಗಳ ಕುರಿತು ಅಭಿಪ್ರಾಯ ಸಂಗ್ರಹಗಳನ್ನು ಬಿಡುಗಡೆ ಮಾಡಿವೆ.  8 ಏಜೆನ್ಸಿಗಳು ಮಾಡಿದ ಮತದಾನದ ಪ್ರವೃತ್ತಿಗಳ ಮೇಲಿನ ಅಭಿಪ್ರಾಯ ಸಂಗ್ರಹಗಳಲ್ಲಿ 3 (ಸ್ಮಾಲ್ ಬಾಕ್ಸ್ ಇಂಡಿಯಾ, ಈ-ದಿನ, ಟಿವಿ9-ಸಿ-ವೋಟರ್) ಕಾಂಗ್ರೆಸ್ ಸ್ಪಷ್ಟ/ಸಮೀಪ ಬಹುಮತ ಗಳಿಸುವ ಮುನ್ಸೂಚನೆ ನೀಡಿವೆ. ಒಂದು ಸಮೀಕ್ಷೆ (ಪಬ್ಲಿಕ್ ಟಿವಿ) ಬಿಜೆಪಿ ಕಾಂಗ್ರೆಸ್ ಗಿಂತ ಮುನ್ನಡೆ ಸಾಧಿಸುತ್ತದೆ, ಆದರೆ ಬಹುಮತವಲ್ಲ ಎಂದು ಹೇಳಿದೆ. ಎರಡನೇ ಸಮೀಕ್ಷೆ, (ಜೀ ನ್ಯೂಸ್-ಮ್ಯಾಟ್ರಿಜ್, ಏಷ್ಯಾನೆಟ್ ಸುವರ್ಣ ನ್ಯೂಸ್ ಜನ್ ಕಿ ಬಾತ್) ಕಾಂಗ್ರೆಸ್‌ ಬಿಜೆಪಿ ಗಿಂತ ಮುನ್ನಡೆ ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ. ಮತ್ತು ಎರಡು ಸಮೀಕ್ಷೆಗಳು ( ಸೌತ್ ಫಸ್ಟ್-ಪೀಪಲ್ಸ್ ಪಲ್ಸ್, ವಿಸ್ತಾರ ನ್ಯೂಸ್) ಯಾವುದಕ್ಕೂ ಬಹುಮತವಿಲ್ಲದ ಸಮಬಲದ ಬಗ್ಗೆ ಭವಿಷ್ಯ ನುಡಿದಿವೆ. ಚುನಾವಣಾ ವಿಷಯಗಳ ಕುರಿತು ಸಿಎಸ್ಡಿಎಸ್-ಲೋಕನೀತಿ ನಡೆಸಿದ ಸಮೀಕ್ಷೆಯಲ್ಲಿ ಪ್ರಬಲವಾದ ಆಡಳಿತ ವಿರೋಧಿ ಅಲೆಯಿಂದಾಗಿ ಬಿಜೆಪಿಗೆ ಗಮನಾರ್ಹವಾದ ಬೆಂಬಲ ನಷ್ಟವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದೆ.

ಮೇಲಿನ ಎಲ್ಲಾ ಅಂಶಗಳು ಎರಡು ಫಲಿತಾಂಶಗಳನ್ನು ಸೂಚಿಸುತ್ತಿವೆ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದೇ ಸೋಲನ್ನು ಅನುಭವಿಸಲಿದೆ.  ಪರ್ಯಾಯ ಪಕ್ಷಗಳು ಸ್ಪರ್ಧೆ ಮಾಡಿರುವ ಕ್ಷೇತ್ರದ ಸಮೀಕ್ಷೆ ನಡೆಸಿದಾಗ, ಬಾಗೇಪಲ್ಲಿಯಿಂದ ಸಿಪಿಐ(ಎಂ)ನ ಡಾ.ಅನಿಲ್‌ಕುಮಾರ್ ಮತ್ತು ಮೇಲುಕೋಟೆಯಿಂದ ಸರ್ವೋದಯದ ದರ್ಶನ್ ಪುಟ್ಟಣ್ಣಯ್ಯ ಎಂಬ ಕನಿಷ್ಠ ಇಬ್ಬರು ಪ್ರತಿನಿಧಿಗಳ ಮೂಲಕ ಮುಂದಿನ ಕರ್ನಾಟಕ ವಿಧಾನಸಭೆಯಲ್ಲಿ ಜನದನಿ ಮತ್ತೆ ಮೊಳಗಲಿದೆ ಎಂಬ ಭರವಸೆ ಮೂಡುತ್ತಿದೆ.

Donate Janashakthi Media

Leave a Reply

Your email address will not be published. Required fields are marked *