ಬೆಂಗಳೂರು: ಖ್ಯಾತ ವಿಜ್ಞಾನ ಬರಹಗಾರ, ಡಿಆರ್ಡಿಒ ಮಾಜಿ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ (59) ಅವರು 10 ದಿನಗಳ ಸಾವು ಬದುಕಿನ ಹೋರಾಟದ ಬಳಿಕ ಇಂದು ಮಧ್ಯಾಹ್ನ 1 ಗಂಟೆಗೆ ನಿಧನರಾಗಿದ್ದಾರೆ. ಹಾಲ್ದೊಡ್ಡೇರಿ ಸುಧೀಂದ್ರ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಮಗಳು ಮೇಘನಾ ಸುಧೀಂದ್ರ ಕೂಡಾ ಲೇಖಕಿಯಾಗಿ ಜನಮನ್ನಣೆ ಗಳಿಸಿದ್ದಾರೆ.
ಕಳೆದ ವಾರದ ಹಿಂದೆ ತೀವ್ರ ಹೃದಯಾಘಾತಕ್ಕೆ ತುತ್ತಾಗಿದ್ದ ಸುಧೀಂದ್ರ ಹಾಲ್ಡೊಡ್ಡೇರಿ ಅವರ ಸ್ಥಿತಿ ಗಂಭೀರವಾಗಿತ್ತು. ಸುಧೀಂದ್ರ ಅವರ ಮಿದುಳು ನಿಷ್ಕ್ರಿಯವಾಗುವ ಸ್ಥಿತಿಯಲ್ಲಿ ಇದ್ದ ಕಾರಣ, ಕೆಲವು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಕೂಡಾ ನೀಡಲಾಗುತ್ತಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾದೆ ಅವರು ನಿಧನರಾಗಿದ್ದಾರೆ.
ಏರೋಸ್ಪೇಸ್ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿರುವ ಸುಧೀಂದ್ರ ಅವರು, ಡಿಆರ್‌ಡಿಒದಲ್ಲಿ ಕಾರ್ಯ ನಿರ್ವಹಿಸಿದ್ದರು. ಎಚ್‌ಎಎಲ್‌ನಲ್ಲಿ ಸುಮಾರು 22 ವರ್ಷಗಳ ಕಾಲ ಅವರು ಸೇವೆ ಸಲ್ಲಿಸಿದ್ದರು. ಎಚ್‌ಎಚಲ್‌ನ ಎಂಜಿನ್ ವಿಭಾಗದಲ್ಲಿ ಸುಮಾರು 13 ವರ್ಷಗಳ ಕಾಲ ಅವರು ಸೇವೆ ಸಲ್ಲಿಸಿದ್ದರು. ಈ ಪೈಕಿ 4 ವರ್ಷಗಳ ಅವಧಿಗೆ ಅವರು ಎಚ್‌ಎಎಲ್‌ನ ಎಲ್‌ಸಿಎ ವಿಭಾಗದಲ್ಲೂ ಸೇವೆ ಸಲ್ಲಿಸಿದ್ದರು. ಈ ವೇಳೆ, ಜಾಗ್ವಾರ್, ಕಿರಣ್ ಹಾಗೂ ಚೀತಾ ವಿಮಾನ ಹಾಗೂ ಸೀ ಕಿಂಗ್ ಹೆಲಿಕಾಪ್ಟರ್‌ಗಳ ಎಂಜಿನ್ ಅಭಿವೃದ್ಧಿಗೆ ಕೊಡುಗೆ ನೀಡಿದ್ದರು.
ಎತ್ತರದ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಹೆಲಿಕಾಪ್ಟರ್‌ಗಳ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಾಯುಪಡೆ ರಚಿಸಿದ್ದ ತಾಂತ್ರಿಕ ಸಮಿತಿಗೆ ಅವರು ಸದಸ್ಯರಾಗಿದ್ದರು. ಡಿಆರ್‌ಡಿಒದ ಗ್ಯಾಸ್ ಟರ್ಬೈನ್ ರಿಸರ್ಚ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಅವರು ಕಾವೇರಿ ಎಂಬ ಎಂಜಿನ್ ಅಭಿವದ್ಧಿಪಡಿಸಿದ್ದರು. ಕರ್ನಾಟಕ ಸರ್ಕಾರದಿಂದ ‘ಅತ್ಯುತ್ತಮ ವಿಜ್ಞಾನ ಸಂವಹನಕಾರ’ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದರು.
ಜೈನ್ ಹಾಗೂ ಅಲೆಯನ್ಸ್ ವಿವಿಗಳಲ್ಲಿ ಏರೋಸ್ಪೇಸ್ ಎಂಜಿನಿಯರ್ ವಿಭಾಗದ ಪ್ರಾಧ್ಯಾಪಕರಾಗಿಯೂ ಸುಧೀಂದ್ರ ಹಾಲ್ಡೊಡ್ಡೇರಿ ಸೇವೆ ಸಲ್ಲಿಸಿದ್ದರು. ತಮ್ಮ ವಿಶ್ರಾಂತ ಜೀವನವನ್ನು ಅವರು ಕನ್ನಡದ ವಿಜ್ಞಾನಾಸಕ್ತರಿಗೆ ಮಾಹಿತಿ ನೀಡುವ ಕೆಲಸಕ್ಕೆ ಮುಡುಪಾಗಿ ಇಟ್ಟಿದ್ದರು. ಅತ್ಯಂತ ಕ್ಲಿಷ್ಟಕರವಾದ ವಿಜ್ಞಾನದ ವಿಷಯ ವಸ್ತುಗಳನ್ನು ಕನ್ನಡದ ಓದುಗರಿಗೆ ತಲುಪಿಸುವ ಅಪರೂಪದ ಕಾರ್ಯವನ್ನು ಅವರು ಮಾಡುತ್ತಿದ್ದರು. ಅನೇಕ ಪತ್ವಿರಿಕೆಗಳಿಗೆ ವಿಜ್ಞಾನ ವಿಷಯದ ಅಂಕಣಕಾರರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು.
ಸುಧೀಂದ್ರ ಹಾಲ್ಡೊಡ್ಡೇರಿ ನಿಧನದಿಂದ ವಿಜ್ಞಾನವನ್ನು ಸಾಮಾನ್ಯರಿಗೆ ತಲುಪಿಸುವ ಕೊಂಡಿಯೊಂದು ಕಳಚಿದಂತಾಗಿದೆ. ಕನ್ನಡದ ಮಟ್ಟಿಗೆ ವಿಜ್ಞಾನವನ್ನು ನಮಗೆ ಅರ್ಥವಾಗುವ ಭಾಷೆಯಲ್ಲಿ ವಿವರಿಸುವ ಲೇಖಕರು ತುಂಬಾನೇ ಕಡಿಮೆ. ಹೀಗಾಗಿ, ಸುಧೀಂದ್ರ ಅವರ ನಿಧನದಿಂದ ಕನ್ನಡದ ವಿಜ್ಞಾನ ಸಾಹಿತ್ಯ ಲೋಕ ಬಡವಾಗಿದೆ. ಅನೇಕ ಗಣ್ಯರು ಇವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ದೇಹದಾನಕ್ಕೆ ನಿರ್ಧಾರ: ಸುಧೀಂದ್ರ ಹಾಲ್ಡೊಡ್ಡೇರಿ ಅವರ ದೇಹದಾನಕ್ಕೆ ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಮೆಡಿಕಲ್ ಕಾಲೇಜಿಗೆ ಅಂಗಾಂಗ ದಾನ ಮಾಡಲು ನಿರ್ಧರಿಸಲಾಗಿದೆ ಎಂದು ಸುಧೀಂದ್ರ ಅವರ ಮಗಳು ಮೇಘನಾ ಸುಧೀಂದ್ರ ತಿಳಿಸಿದ್ದಾರೆ.