ಬೆಂಗಳೂರು : ಕೊರೊನಾ ಲಸಿಕೆ ಖರೀದಿಸಲು ಕಾಂಗ್ರೆಸ್ ಶಾಸಕರು ಹಾಗೂ ಸಂಸದರು ತಮ್ಮ ಕ್ಷೇತ್ರದ ಅಭಿವೃದ್ಧಿ ನಿಧಿಯಿಂದ ತಲಾ 1 ಕೋಟಿ ರೂ.ನಂತೆ 100 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ನಿಧಿಗೆ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ 2 ಕೋಟಿ ರೂ., ಸಂಸದರು ಹಾಗೂ ರಾಜ್ಯಸಭಾ ಸದಸ್ಯರಿಗೆ ತಲಾ 5 ಕೋಟಿ ರೂ. ನೀಡಲಾಗುತ್ತಿದೆ. ಇದರಲ್ಲಿ ಒಂದು ಕೋಟಿ ರೂ.ವನ್ನು ಕಾಂಗ್ರೆಸ್ ಶಾಸಕರು, ಸಂಸದರು ದೇಣಿಗೆಯಾಗಿ ರಾಜ್ಯ ಸರಕಾರಕ್ಕೆ ನೀಡಲು ತೀರ್ಮಾನಿಸಲಾಗಿದೆ ಎಂದರು.
ರಾಜ್ಯದ ಪ್ರತಿಯೊಬ್ಬರಿಗೆ ಕೊರೊನಾ ಲಸಿಕೆ ದೊರೆಯುವಂತಾಗಬೇಕು ಎಂಬುದು ನಮ್ಮ ಬಯಕೆ. ಆದ್ದರಿಂದ ಕಾಂಗ್ರೆಸ್ ನಲ್ಲಿ 99 ಶಾಸಕರು ಇದ್ದಾರೆ. ಸಂಸದರು ಹಾಗೂ ರಾಜ್ಯಸಭಾ ಸದಸ್ಯರ ಮೊತ್ತವನ್ನೂ ಸೇರಿಸಿ 100 ಕೋಟಿ ರೂ. ನೀಡಲಾಗುವುದು ಎಂದು ಅವರು ಹೇಳಿದರು.
100 ಕೋಟಿ ರೂ. ಮೊತ್ತವನ್ನು ಹೇಗೆ ಯಾರಿಗೆ ನೀಡಬೇಕು. ಲಸಿಕೆ ಖರೀದಿಗೆ ಹೇಗೆ ಬಳಸಬೇಕು ಎಂಬುದನ್ನು ನಾವು ಚಿಂತನೆ ನಡೆಸಿ ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.