ಬೆಂಗಳೂರು : ರಾಜ್ಯದ ನೂತನ ಸಿಎಂ ಆಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ನೆನ್ನೆ ದೆಹಲಿಗೆ ತೆರಳಿ ಹೈಕಮಾಂಡ್ನ ಜೊತೆ ಚರ್ಚೆ ನಡೆಸಿದ್ದಾರೆ. ಈಗ ಅವರ ಸಂಪುಟ ಸಹೋದ್ಯೋಗಿಗಳಾಗೋರು ಯಾರು ಇನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ.
ಈ ಮಹತ್ವದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ದೆಹಲಿ ಪ್ರವಾಸ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ನೆನ್ನೆ ದೆಹಲಿ ಪ್ರಯಾಣ ಮಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ಮೋದಿ, ಅಮಿತ್ ಶಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಹಲವರ ಭೇಟಿ ಮಾಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ಹಾಗೂ ಸಚಿವರ ಲಿಸ್ಟ್ ತಲುಪಿಸಿ ಸಂಪುಟ ರಚನೆಗೆ ಒಪ್ಪಿಗೆಯನ್ನ ಕೇಳಿದ್ದಾರೆ.
ಇನ್ನೊಂದು ವಾರದಲ್ಲಿ ಬೊಮ್ಮಾಯಿ ಸಂಪುಟ ರಚನೆ ಫಿಕ್ಸ್ ಆಗುತ್ತಾ.? ಮೂಲ ಬಿಜೆಪಿಗರಿಗೆ ಎಷ್ಟು ಮಣೆ ಹಾಕ್ತಾರೆ? ವಲಸಿಗರಿಗೆ ಎಷ್ಟು ಸ್ಥಾನ ? ಸಂಪುಟ ರಚನೆಗೆ ವರಿಷ್ಠರ ಗ್ರೀನ್ ಸಿಗ್ನಲ್ ಕೊಡ್ತಾರಾ..? ಎಂಬ ಪ್ರಶ್ನೆಗಳು ಈಗ ಎದ್ದಿವೆ.
ಇನ್ನು ಬಸವರಾಜ ಬೊಮ್ಮಾಯಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಹಿರಿಯ ನಾಯಕರು ಸಂಪುಟಕ್ಕೆ ಸೇರೋಲ್ಲಾ ಅಂತ ಹಠ ಹಿಡಿದಿರೋದು ಒಂದು ಕಡೆ ಆದ್ರೆ ಸಚಿವ ಆಕಾಂಕ್ಷಿಗಳ ಪರ ಅವರ ಸಮುದಾಯದ ಸ್ವಾಮೀಜಿಗಳು ಕೂಡ ಬ್ಯಾಟಿಂಗ್ ಮಾಡಲು ಶುರು ಮಾಡಿದ್ದಾರೆ. ಮಂತ್ರಿ ಸ್ಥಾನಕ್ಕಾಗಿ ಮಾಜಿ ಸಚಿವರು, ಶಾಸಕರು ಬೊಮ್ಮಾಯಿ ಹಿಂದೆ ಬಿದ್ದರುವುದು ಸಿಕ್ಕಾಪಟ್ಟೆ ಟೆನ್ಷನ್ ಆರಂಭ ಮಾಡಿದೆ. ರಾಜ್ಯದಲ್ಲಿ ಸಿಎಂ ಆಯ್ಕೆ ಸುಲಭವಾದಷ್ಟು ಸಂಪುಟ ರಚನೆ ಅಸಾಧ್ಯ ಅಂತಾ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.
ಇನ್ನೂ ಬೊಮ್ಮಯಿ ಸಂಪುಟ ಸೇರಲ್ಲ ಅಂತ ಜಗದೀಶ್ ಶೆಟ್ಟರ್ ಹೇಳಿಕೆ ಈಗ ಪಕ್ಷದಲ್ಲಿ ಭಾರಿ ಚರ್ಚೆ ಆಗುತ್ತಿದೆ. ಉಮೇಶ್ ಕತ್ತಿ , ಅಶೋಕ್ , ಅರವಿಂದ್ ಬೆಲ್ಲದ್, ಸಿಪಿ ಯೋಗೇಶ್ವರ್, ದೆಹಲಿಗೆ ಹೋಗಿ ಹೈ ಕಮಾಂಡ್ ಮಟ್ಟದಲ್ಲಿ ಲಾಬಿ ಶುರು ಮಾಡಿದ್ದಾರೆ.. ಈ ಮಧ್ಯ ಬಿಜೆಪಿಯ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಈಶ್ವರಪ್ಪ ಮಾತ್ರ ಶೆಟ್ಟರ ರೀತಿ ನಾನು ನಿರ್ಧಾರ ಮಾಡೋಲ್ಲಾ ಹೈಕಮಾಂಡ್ ನಾಯಕರು ಹೇಳಿದಂತೆ ಕೇಳ್ತಿನಿ ಯಾವ ಸ್ಥಾನ ಕೊಟ್ರು ನಿಭಾಯಿಸ್ತಿನಿ ಅಂತಾ ಸಚಿವ ಸ್ಥಾನದ ಆಕಾಂಕ್ಷಿ ರೇಸ್ ನಲ್ಲಿ ನಾನು ಇದ್ದಿನಿ ಅಂತ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.
ಹಿರಿಯ ನಾಯಕರಿಗೆ ಹಾಗೂ ಹಿಂದೆ ಸಚಿವರಾಗಿದ್ದವರನ್ನು ಕ್ಯಾಬಿನೆಟ್ ನಿಂದ ಕೈಬಿಡಲಾಗುತ್ತೆ ಎಂದು ಚರ್ಚೆಯಾಗುತ್ತಿದ್ದು, ಹಿರಿಯ ಶಾಸಕರನ್ನು ಬಿಟ್ಟು ಹೊಸಬರಿಗೆ ಅವಕಾಶ ಕೊಡ್ಬೇಕು ಅಂತ ಹೈ ಕಮಾಂಡ್ ನಾಯಕರು ನಿರ್ಧಾರ ಮಾಡಿದ್ದಾರೆ ಎಂಬ ವಿಚಾರಗಳು ಬಿಜೆಪಿಯಲ್ಲಿ ಓಡಾಡುತ್ತಿವೆ.
ಸಚಿವರಾಗಲು ಈಗಾಗಲೇ ಲಾಬಿ ಶುರುವಾಗಿದ್ದು ರೇಣುಕಾಚಾರ್ಯ , ಸೋಮಶೇಖರ್ ರೆಡ್ಡಿ , ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಸುನೀಲ್ ಕುಮಾರ್ ಮತ್ತು ಶಿವಮೊಗ್ಗದ ಜಿಲ್ಲೆಯ ಅರಗ ಜ್ಞಾನೇಂದ್ರ ,ರಾಮದಾಸ್ , ತಿಪ್ಪಾರೆಡಿ ಸೇರಿದಂತೆ ಹಲವು ನಾಯಕರು ಸಿಎಂ ಮತ್ತು ಪಕ್ಷದ ಹಿರಿಯರನ್ನು ಭೇಟಿ ಮಾಡಿ ಸಮಾಲೋಚನೆ ಮಾಡ್ತಿದ್ದಾರೆ ಎಂದು ಹೇಳಲಾಗ್ತಿದೆ. ಮತ್ತೊಂದು ಕಡೆ ವಲಸಿಗರು ನಮ್ಮ ಎಲ್ಲರಿಗೂ ಸಂಪುಟದಲ್ಲಿ ಸ್ಥಾನ ಸಿಗಲಿದೆ ಅಂತ ಭರವಸೆ ಇಟ್ಟುಕೊಂಡಿದ್ದಾರೆ.
ಒಟ್ಟಿನಲ್ಲಿ ಸಚಿವ ಸಂಪುಟ ರಚನೆ , ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ತೀವ್ರ ಕಗ್ಗಂಟಾಗುವ ಸಾಧ್ಯತೆ ಇದ್ದು, ಹೇಗೆ ನಿವಾರಣೆಯಾಗಬಹುದು ಕಾದು ನೋಡಬೇಕಿದೆ.