ಸಾರಿಗೆ ಮುಷ್ಕರ: ಎರಡನೇ ದಿನವೂ ಸಾರ್ವಜನಿಕ ಸಾರಿಗೆ ಸ್ತಬ್ದ

ಸಾರಿಗೆ ಇಲಾಖೆಯಿಂದ ತರಬೇತಿ ನಿರತ ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ.

ಬೆಂಗಳೂರು: 6ನೇ ವೇತನ ಆಯೋಗದಂತೆ ಸಂಬಳ ನೀಡಬೇಕೆಂದು ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.

ಸರ್ಕಾರ ಹಾಗೂ ಸಾರಿಗೆ ನಿಗಮಗಳ ಎಚ್ಚರಿಕೆಗೆ ಜಗ್ಗದ ಸಾರಿಗೆ ಸಿಬ್ಬಂದಿ ಇಂದು ಕೂಡ ಕೆಎಸ್​​ಆರ್​ಟಿಸಿ- ಬಿಎಂಟಿಸಿ ಬಸ್​​ಗಳನ್ನ ರಸ್ತೆಗಿಳಿಸಿಲ್ಲ. ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ. ಇಂದು ಕೂಡ ಬಸ್ ಸಿಗದೆ ಪ್ರಯಾಣಿಕರ ಪರದಾಟ ಮುಂದುವರೆದಿದೆ.

ಸಾರಿಗೆ ನೌಕರರ ಮುಷ್ಕರಕ್ಕೆ ಸೊಪ್ಪುಹಾಕದೇ ಇರಲು ಬಿಎಂಟಿಸಿ ನಿರ್ಧರಿಸಿದೆ. ಮುಷ್ಕರದ ನಡುವೆಯೂ ಇಂದಿನಿಂದ ಬಿಎಂಟಿಸಿ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧಾರ ಮಾಡಲಾಗಿದ್ದು, ತರಬೇತಿ ನಿರತ ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ. ತರಬೇತಿ ನಿರತ ಚಾಲಕ, ಕಂಡಕ್ಟರ್, ಮೆಕ್ಯಾನಿಕ್‌ಗಳಿಗೆ ಇಂದು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿರುವ ಬಿಎಂಟಿಸಿ, ಗೈರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಚಾಲಕ, ಕಂಡಕ್ಟರ್, ಮೆಕ್ಯಾನಿಕ್​​ಗಳು ಸೇರಿದಂತೆ ಬಿಎಂಟಿಸಿಯಲ್ಲಿರೋ 3000 ಟ್ರೈನಿಗಳಿಗೆ ನೋಟಿಸ್ ನೀಡಲಾಗಿದೆ. ನೌಕರರ ಮುಷ್ಕರಕ್ಕೆ ಸೊಪ್ಪು ಹಾಕದ ಬಿಎಂಟಿಸಿ, ತರಬೇತಿ ಸಿಬ್ಬಂದಿಯನ್ನ ಬಳಸಿಕೊಂಡು ಬಸ್​​ಗಳನ್ನ ರಸ್ತೆಗೆ ಇಳಿಸೋದಕ್ಕೆ ನಿರ್ಧರಿಸಿದೆ ಅಂತ ಹೇಳಲಾಗುತ್ತಿದೆ.

ಇನ್ನೂ ರಾಜ್ಯದಲ್ಲಿ ಚಿತ್ರದುರ್ಗ, ರಾಮನಗರ, ಮೈಸೂರು, ರಾಯಚೂರು, ಕೊಪ್ಪಳ, ಬಾಗಲಕೋಟೆ, ಕಲಬುರ್ಗಿ, ಹಾಸನ, ಚಿತ್ರದುರ್ಗ, ಧಾರವಾಡ ಸೇರಿದಂತೆ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಕೂಡ ಸಾರಿಗೆ ನೌಕರರು ಇಂದು ಕೆಲಸಕ್ಕೆ ಹಾಜರಾಗದೇ ತಮ್ಮ ಮುಷ್ಕರ ಮುಂದುವರೆಸಿದ್ದಾರೆ.

ಆಟೋದವರಿಂದ ದುಪ್ಪಟ್ಟು ಹಣ ವಸೂಲಿ : ಇನ್ನೊಂದೆಡೆ, ಮುಷ್ಕರದ ಲಾಭ ಪಡೆಯುತ್ತಿರುವ ಆಟೋ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಹಲವು ದೂರುಗಳು ಕೇಳಿ ಬಂದಿದ್ದು, ಮೆಜೆಸ್ಟಿಕ್​ನಿಂದ ಬಸವನಗುಡಿಗೆ ತೆರಳು ಮಹಾರಾಷ್ಟ್ರದಿಂದ ಬಂದವರ ಬಳಿ ₹  150 ಕೇಳಿದ್ದಾರೆ. ಆ ಕಡೆಯಿಂದ ಖಾಲಿ ಬರಬೇಕು. ಕಡಿಮೆ ತೆಗೆದುಕೊಂಡ್ರೆ ನಮಗೆ ನಷ್ಟ ಎಂದು ಸಬೂಬು ನೀಡಿದ್ದಾರೆ. ಸಾಮಾನ್ಯ ದರವೇ ₹  70 ರಿಂದ ₹  80 ಮೀರುವುದಿಲ್ಲ, ಮೀಟರ್​ ಎಷ್ಟಿದೆಯೋ ಅಷ್ಟು ಮಾತ್ರ ತೆಗೆದುಕೊಳ್ಳಬೇಕು ಎಂದು ಹೇಳಿದಾಗ, ಕನಿಷ್ಟ ₹  120 ಆದರೂ ನೀಡಿ ಎಂದು ಬೇಡಿಕೆ ಇಡುತ್ತಿದ್ದಾರೆ. ಬೆಂಗಳೂರಿನ ಸ್ಥಳದ ಬಗ್ಗೆ ಅರಿವು ಇರದವರು ಅಟೋ ಚಾಲಕರು ನಿಡಿದಷ್ಟು ಹಣವನ್ನು ನೀಡಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸರಕಾರ ಪರ್ಯಾಯ ಮಾರ್ಗಗಳನ್ನು ಹುಡುಕುವ ಬದಲು ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು, ಖಾಸಗಿ ವಾಹನಗಳನ್ನು ಓಡಾಡಿಸುವುದು ಪರ್ಯಾಯ ಮಾರ್ಗವಲ್ಲ, ಹಲವು ದಶಕಗಳಿಂದ ಸರಕಾರಿ ಸಾರಿಗೆ ಸಂಸ್ಥೆಯನ್ನು ಅವರು ಕಟ್ಟಿ ಬೆಳಸಿದ್ದಾರೆ, ಹಾಗಾಗಿ ಅವರ ಬೇಡಿಕೆಗಳನ್ನು ಸರಕಾರ ಕೂಡಲೆ ಈಡೇರಿಸಬೇಕು ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Donate Janashakthi Media

Leave a Reply

Your email address will not be published. Required fields are marked *