ಕೋವಿಡ್ ಪರೀಕ್ಷೆಯಲ್ಲಿ ಕಡಿತ ಮೂರನೇ ಅಲೆಗೆ ಆಹ್ವಾನ ಡಾ.ಗಿರಿಧರ ಆರ್ ಬಾಬು
ಬೆಂಗಳೂರು: ರಾಜ್ಯದಲ್ಲಿ ಇಂದು (ಬುಧವಾರ) ಕೊರೊನಾದಿಂದ 49,953 ರೋಗಿಗಳು ಚೇತರಿಸಿಕೊಂಡಿದ್ದಾರೆ. ಈ ಮೂಲಕ ಸತತ ಎರಡನೇ ದಿನ ಹೊಸ ಪ್ರಕರಣಗಳಿಗಿಂತ ಹೆಚ್ಚು ರೋಗಿಗಳು ಗುಣಮುಖರಾಗಿದ್ದಾರೆ. ಕೋವಿಡ್ ಟೆಸ್ಟಿಂಗ್ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ.
ಬುಧವಾರ ಕರ್ನಾಟಕದಲ್ಲಿ 34,281 ಹೊಸ ಸೋಂಕಿನ ಪ್ರಕರಣಗಳು ದೃಢಪಟ್ಟಿದ್ದು, ಪಾಸಿಟಿವಿಟಿ ದರ ಶೇ. 26.46ರಷ್ಟಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 23,06,655 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ.
ಈ ಅವಧಿಯಲ್ಲಿ ಕೋವಿಡ್‌ನಿಂದ 468 ರೋಗಿಗಳು ಮರಣ ಹೊಂದಿದ್ದಾರೆ. ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದರೂ, ಸಾವಿನ ಸಂಖ್ಯೆಯಲ್ಲಿ ಅಷ್ಟೇನೂ ಇಳಿಕೆಯಾಗಿಲ್ಲ. ಇಲ್ಲಿಯವರೆಗೆ ಕರ್ನಾಟಕದಲ್ಲಿ ಕೊರೊನಾದಿಂದ 23,306 ಜನರು ಅಸುನೀಗಿದ್ದಾರೆ.
ಬೆಂಗಳೂರು ನಗರದಲ್ಲಿ 218 ಜನರು ಸಾವನ್ನಪ್ಪಿದ್ದರೆ, ಬಳ್ಳಾರಿಯಲ್ಲಿ 23, ಶಿವಮೊಗ್ಗದಲ್ಲಿ 19, ತುಮಕೂರಿನಲ್ಲಿ 19, ಕಲಬುರಗಿಯಲ್ಲಿ 18, ಕೊಪ್ಪಳದಲ್ಲಿ 14, ಮೈಸೂರಿನಲ್ಲಿ 14, ಉತ್ತರ ಕನ್ನಡದಲ್ಲಿ 14, ಬೆಂಗಳೂರು ಗ್ರಾಮಾಂತರದಲ್ಲಿ 13, ಹಾವೇರಿಯಲ್ಲಿ 11, ಬೆಳಗಾವಿಯಲ್ಲಿ 11, ಧಾರವಾಡದಲ್ಲಿ 10 ಸೋಂಕಿತರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ : ಕೋವಿಡ್ ವಿಶೇಷ ಪ್ಯಾಕೇಜ್ ಘೋಷಿಸಿದ ರಾಜ್ಯ ಸರಕಾರ : ರೂ 1250 ಕೋಟಿಯಲ್ಲಿ ಯಾರ ಪಾಲು ಎಷ್ಟು?
ಬೆಂಗಳೂರು, ಬೆಳಗಾವಿಯಲ್ಲಿ ಸೋಂಕು ಏರಿಕೆ : ಬೆಂಗಳೂರಿನಲ್ಲಿ ಬುಧವಾರ 11,772 ಹೊಸ ಪ್ರಕರಣಗಳು ಪತ್ತೆಯಾಗಿವೆ. ತುಮಕೂರಿನಲ್ಲಿ 2427, ಬೆಳಗಾವಿಯಲ್ಲಿ 2234, ಮೈಸೂರಿನಲ್ಲಿ 1730, ಹಾಸನದಲ್ಲಿ 1428, ಬಳ್ಳಾರಿಯಲ್ಲಿ 1297, ಚಿಕ್ಕಮಗಳೂರಿನಲ್ಲಿ 1047 ಹೊಸ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ಮತ್ತು ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ, ಜಿಲ್ಲೆಗಳಲ್ಲಿ ವರದಿಯಾಗುತ್ತಿರುವ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. 12 ಜಿಲ್ಲೆಗಳಲ್ಲಿ 500ಕ್ಕಿಂತ ಕಡಿಮೆ ಕೇಸ್‌ಗಳು ವರದಿಯಾಗಿರುವುದೇ ಇದಕ್ಕೆ ಸಾಕ್ಷಿ.
ಕೋವಿಡ್ ಪರೀಕ್ಷೆಯಲ್ಲಿ ಕಡಿಮೆ ತಜ್ಞರ ಕಳವಳ : ಕರ್ನಾಟಕದಲ್ಲಿ ಒಂದು ತಿಂಗಳ ಹಿಂದೆ ಪ್ರತಿದಿನ 1.9 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಈಗ ಅದನ್ನು ಕೇವಲ 93,000ಕ್ಕೆ ಇಳಿಸುವ ಮೂಲಕ ರಾಜ್ಯದಲ್ಲಿ ಮತ್ತೊಂದು ಕೊರೋನಾ ಅಲೆಯನ್ನುಆಹ್ವಾನಿಸಲಾಗುತ್ತಿದೆ ಎಂದು ರಾಜ್ಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ(ಟಿಎಸಿ)ಯ ಸದಸ್ಯ ಡಾ.ಗಿರಿಧರ ಆರ್ ಬಾಬು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಸೋಮವಾರ 97,236 ಕೋವಿಡ್ ಪರೀಕ್ಷೆಗಳನ್ನು ನಡೆಸಿದ್ದು, ಅದರಲ್ಲಿ 38,603 ಮಂದಿಗೆ ಪಾಸಿಟಿವ್ ಬಂದಿದೆ. ಮಂಗಳವಾರ 93,247 ಪರೀಕ್ಷೆಗಳನ್ನು ನಡೆಸಲಾಗಿದ್ದು, 30,309 ಜನರಿಗೆ ಪಾಸಿಟಿವ್ ಬಂದಿದೆ. ಇದು ಕಳೆದ ಏಪ್ರಿಲ್ 28 ರಂದು 1.72 ಲಕ್ಷ ಮತ್ತು ಏಪ್ರಿಲ್ 24 ರಂದು ನಡೆಸಿದ 1.9 ಲಕ್ಷ ಕೋವಿಡ್ ಪರೀಕ್ಷೆಗಳಿಗೆ ತದ್ವಿರುದ್ಧವಾಗಿದೆ ಎಂದಿದ್ದಾರೆ. ಇನ್ನೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದವರು ಸೋಂಕನ್ನು ಮತ್ತಷ್ಟು ಹರಡಬಹುದು ಎಂದು ಡಾ.ಗಿರಿಧರ ಆರ್ ಬಾಬು ಹೇಳಿದ್ದಾರೆ.
ಇದನ್ನು ಓದಿ: ಲಸಿಕೆಗಳೆ ಲಭ್ಯವಿಲ್ಲ 2ನೇ ಡೋಸ್ ಹೇಗೆ ನೀಡುತ್ತೀರಿ, ಏನಿದು ನಿಮ್ಮ ಲಸಿಕೆ ಅಭಿಯಾನ?’: ಸರ್ಕಾರಕ್ಕೆ ಹೈಕೋರ್ಟ್ ತರಾಟೆ
“ಒಂದು ರೀತಿಯಲ್ಲಿ ನಾವು ಮೂರನೇ ಅಲೆಯನ್ನು ಆಹ್ವಾನಿಸುತ್ತಿದ್ದೇವೆ. ಏಕೆಂದರೆ ಜನರು ಸೋಂಕನ್ನು ಹರಡುತ್ತಿದ್ದಾರೆ ಮತ್ತು ಅದು ವೇಗವಾಗಿ ಹರಡುತ್ತದೆ. ನಂತರ ಅದು ಹೆಚ್ಚು ಸೋಂಕಿಗೆ ಕಾರಣವಾಗುತ್ತದೆ ಮತ್ತು ನಾವು ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಇದಕ್ಕೆ ಇರುವ ಏಕೈಕ ಪರಿಹಾರವೆಂದರೆ ವ್ಯಾಪಕವಾಗಿ ಪರೀಕ್ಷಿಸುವುದು” ಎಂದು ಬಾಬು ತಿಳಿಸಿದ್ದಾರೆ. ಪರೀಕ್ಷೆಗಳನ್ನು ಕಡಿಮೆ ಮಾಡುವುದು ಸರ್ಕಾರದ ವೆಚ್ಚ ಕಡಿತ ಕ್ರಮವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದುಹೋದ ಜೀವಗಳನ್ನು ಟೆಸ್ಟ್ ಕಿಟ್ ಬೆಲೆಗೆ ಹೋಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.