ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ಮತದಾನಕ್ಕೆ ತೆರೆ ಬೀಳುತ್ತಿದ್ದಂತೆ ಎಕ್ಸಿಟ್ ಪೋಲ್ ಸಮೀಕ್ಷೆಗಳ ಭರಾಟೆ ಶುರುವಾಗಿದೆ. ರಾಷ್ಟ್ರೀಯ, ಸ್ಥಳೀಯ ಏಜೆನ್ಸಿಗಳಿಂದ ಥರಹೇವಾರಿ ಸಮೀಕ್ಷೆಗಳು ಹೊರಬಿದ್ದಿವೆ. ನಿನ್ನೆ ಸಂಜೆ ಕೆಲ ಮತಗಟ್ಟೆ ಸಮೀಕ್ಷೆಗಳು ಅತಂತ್ರ ಫಲಿತಾಂಶ ಬರಬಹುದು ಎಂದು ಹೇಳಿವೆ. ರಾತ್ರಿ ಪ್ರಕಟವಾದ ಕೆಲ ಸಮೀಕ್ಷೆಗಳು ಕಾಂಗ್ರೆಸ್ ಮುನ್ನಡೆ ಸಾಧಿಸಿ ಅಧಿಕಾರದ ಸನಿಹ ಬರಬಹುದು ಎಂದು ಹೇಳುತ್ತಿವೆ.
ಚುನಾವಣಾ ಪೂರ್ವ ಸಮೀಕ್ಷೆಗಳಿಗಿಂತ ಮತದಾನೋತ್ತರ ಸಮೀಕ್ಷೆಗಳು ನಿಖರ ಎಂಬ ಮಾತಿದೆ. ಏಕೆಂದರೆ, ಮತಗಟ್ಟೆಗಳಲ್ಲಿ ಕೈಗೊಳ್ಳಲಾಗುವ ಈ ಸರ್ವೆಗಳಲ್ಲಿ ಏನಾಗಬಹುದು ಎಂಬದು ಒಂದಿಷ್ಟು ನಿಚ್ಚಳವಿರುತ್ತದೆ. ಮತ ಚಲಾಯಿಸಿದವರ ಮನಸ್ಥಿತಿ ಮತ್ತು ಅವರೊಂದಿಗೆ ನಡೆಸಿದ ಮಾತುಕತೆ ಆಧರಿಸಿ ಒಂದು ನಿರ್ಣಯಕ್ಕೆ ಬರುವ ಈ ಸಮೀಕ್ಷೆಗಳು ವಾಸ್ತವದ ಹತ್ತಿರ ಬಂದಿರುವ ನಿದರ್ಶನಗಳಿವೆ.
ರಾಜ್ಯದಲ್ಲಿ 2013ರಲ್ಲಿ ಸಮೀಕ್ಷೆಗಳ ಅಂದಾಜು ಬಹುತೇಕ ಕರಾರುವಾಕ್ಕಾಗಿತ್ತು. ಅದಕ್ಕಿಂತಲೂ ಮುಖ್ಯವಾಗಿ ಆವತ್ತಿನ ರಾಜಕೀಯ ಸನ್ನಿವೇಶದ ಕಾರಣದಿಂದ ಚುನಾವಣೆ ಘೋಷಣೆಗೆ ಮೊದಲೇ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಅದೇ ಮುನ್ನಡೆಯನ್ನು ಮತದಾನದವರೆಗೂ ಕಾಯ್ದುಕೊಂಡಿತ್ತು. ಅದಕ್ಕೆ ಕಾರಣವೇನೆಂದರೆ, 2013ರಲ್ಲಿ ಬಿಜೆಪಿ ಮೂರು ಹೋಳಾಗಿತ್ತು. ಅದರ ಲಾಭ ಕಾಂಗ್ರೆಸ್‌ಗೆ ಅನಾಯಾಸವಾಗಿ ದೊರಕಿತ್ತು.
2018 ರ ವಿಧಾನ ಸಭೆಯ ಮತಗಟ್ಟೆಯ ಸಮೀಕ್ಷೆಗಳು ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ, ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಹೇಳಿದ್ದವು. ಅದರಂತೆ 2018ರಲ್ಲಿ 104 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿಯು ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಆದರೆ, ಕೇವಲ 80 ಸ್ಥಾನ ಗಳಿಸಿದ್ದ ಕಾಂಗ್ರೆಸ್ ಹಾಗೂ 37 ಸ್ಥಾನ ಗಳಿಸಿದ್ದ ಜೆಡಿಎಸ್ ಪಕ್ಷಗಳು ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದವು. ಆ ನಂತರದ ದಿನಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ತಮ್ಮ ತಮ್ಮ ಪಕ್ಷಗಳಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಪರಿಣಾಮ, ಸಮ್ಮಿಶ್ರ ಸರ್ಕಾರ ಪತನವಾಗಿ 2019ರಲ್ಲಿ ಉಪ ಚುನಾವಣೆ ಎದುರಾಯ್ತು. ಈ ಉಪ ಚುನಾವಣೆಯಲ್ಲಿ ಒಟ್ಟು 15 ಸ್ಥಾನಗಳ ಪೈಕಿ ಬಿಜೆಪಿ 12 ಸ್ಥಾನಗಳಲ್ಲಿ ಜಯ ಗಳಿಸಿ ಸರ್ಕಾರ ಸುಭದ್ರ ಮಾಡಿಕೊಂಡಿತ್ತು.
2023ರ ಮತದಾನೋತ್ತರ ಸಮೀಕ್ಷೆ ಈ ರೀತಿ ಇದೆ
ಚಾನೆಲ್ | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಇತರೆ |
ಟಿವಿ 9 ಕನ್ನಡ | 83-95 | 100-112 | 21-29 | 0-06 |
ಭಾರತ ವರ್ಷ್ | 88-98 | 99-109 | 21-26 | 0-04 |
ಜನ್ ಕೀ ಬಾತ್ | 94-107 | 91-106 | 14-24 | 0-02 |
ಜೀ ನ್ಯೂಸ್ | 79-94 | 103-118 | 25-32 | 02-05 |
ರಿಪಬ್ಲಿಕ್ ಟಿವಿ | 85-100 | 95-108 | 24-32 | 02-06 |
ಟೈಮ್ಸ್ ನೌ | 85 | 113 | 23 | 03 |
ಆಜ್‌ತಕ್ ಆಕ್ಸಿಸ್ ಮೈ ಇಂಡಿಯಾ | 62-80 | 122-140 | 22-25 | 0-3 |
ಎಬಿಪಿ-ಸಿ ವೋಟರ್ | 83-95 | 100-112 | 21-29 | 2-6 |
ನ್ಯೂಸ್ ನೇಷನ್ | 114 | 86 | 21 | 3 |
ಇಂಡಿಯಾ ಟಿವಿ | 80-90 | 110-120 | 20-24 | 3 |
ಯಾವ ಭಾಗದಲ್ಲಿ ಯಾರಿಗೆ ಎಷ್ಟು ಮತ
ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಇತರ | |
ಕರಾವಳಿ ಕರ್ನಾಟಕ | 16 (50%) | 3 (40%) | – (6%) | 0 (4%) |
ಕೇಂದ್ರ ಕರ್ನಾಟಕ | 10 (41%) | 12 (35%) | 1 (17%) | 0 (7%) |
ಬೆಂಗಳೂರು | 10 (38%) | 17 (44%) | 1 (15%) | 0 (3%) |
ಹೈದರಾಬಾದ್ ಕರ್ನಾಟಕ | 7 (36%) | 32 (47%) | 1 (13%) | 0 (4%) |
ಮುಂಬೈ ಕರ್ನಾಟಕ | 21 (42%) | 28 (45%) | 1 (8%) | 0 (5%) |
ಹಳೆ ಮೈಸೂರು | 6(25%) | 36 (40%) | 18(28%) | 3(7%) |
ಒಟ್ಟು | 62-80 (35%) | 122-140 (43%) | 20-25 (16%) | 0-3 (6% |
ಮತಗಟ್ಟೆ ಸಮೀಕ್ಷೆಯ ಭವಿಷ್ಯ ವಾಣಿ, ಅಂದಾಜುಗಳು ಏನೇ ಇರಲಿ, ಶನಿವಾರ ಮೇ 13 ನಡೆಯಲಿರುವ ಮತ ಎಣಿಕೆ ಸಂದರ್ಭದಲ್ಲಿ ಯಾವ ಪಕ್ಷಕ್ಕೆ ಅಧಿಕಾರ ಸಿಗಲಿದೆ ಅನ್ನೋದು ಬಯಲಾಗಲಿದೆ. ಕರ್ನಾಟಕ ರಾಜ್ಯದ ಮತದಾರ ಯಾವ ಪಕ್ಷಕ್ಕೆ ಮಣೆ ಹಾಕಿದ್ದಾನೆ, ಯಾವ ಪಕ್ಷದ ಅಭ್ಯರ್ಥಿಗಳ ಭವಿಷ್ಯ ಏನು ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಶನಿವಾರ ಮೇ 13 ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಕಾರ್ಯ ಆರಂಭ ಆಗಲಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ ಫಲಿತಾಂಶದ ಸಮಗ್ರ ಚಿತ್ರಣ ಸಿಗಲಿದೆ.