ಮೇ 3ನೇ ವಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ..?

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಮೇ ತಿಂಗಳ 3ನೇ ವಾರದಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ದತೆ ನಡೆಸಿದ್ದು, ಈ ಬಾರಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣೆಗೆ ಅಗತ್ಯವಿರುವ ಸಿದ್ದತೆಗಳು ಬಹುತೇಕ ಪೂರ್ಣ ಗೊಳಿಸಿರುವ ಆಯೋಗ ಏಪ್ರಿಲ್ ತಿಂಗಳ 2ನೇ ವಾರದಲ್ಲಿ ದಿನಾಂಕವನ್ನು ಘೋಷಣೆ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮತದಾರರ ಅಂತಿಮ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಕಾರಿಗಳು ಪೂರ್ಣಗೊಳಿಸಿರುವುದು, ಇವಿಎಂ ಯಂತ್ರ ಉಪಯೋಗಿಸುವ ಕುರಿತಂತೆ ತರಬೇತಿ, ಭದ್ರತೆ ಸೇರಿದಂತೆ ಚುನಾವಣೆಗೆ ಬೇಕಿರುವ ಪ್ರಕ್ರಿಯೆಗಳು ಆರಂಭವಾಗಿರುವುದರಿಂದ ಮೇ 20ರೊಳಗೆ ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆ ಮುಗಿಯಲಿದೆ.

ಮೇ 31ರೊಳಗೆ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮುಗಿಸಲು ಆಯೋಗ ಸಿದ್ದತೆ ಮಾಡಿಕೊಂಡಿದೆ. ಜೂನ್ 1ರಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗದಂತೆ ಮೇ ತಿಂಗಳೊಳಗೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಲು ಆಯೋಗ ಯೋಜನೆಗಳನ್ನು ಹಾಕಿಕೊಂಡಿದೆ.

ಇದನ್ನೂ ಓದಿಚುನಾವಣೆಯಲ್ಲಿ ಸ್ಪರ್ಧಿಸಲು ಪೊಲೀಸ್ ಹುದ್ದೆಗೆ ರಾಜೀನಾಮೆ.!

2018ರ ವಿಧಾನಸಭೆ ಚುನಾವಣೆ ಮೇ 12ರಂದು ಮತದಾನ ನಡೆದು, ಮೇ 15ರಂದು ಮತ ಎಣಿಕೆ ನಡೆದಿತ್ತು. ಏಪ್ರಿಲ್ 17ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿ ಏ.24 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಏ.25 ನಾಮಪತ್ರಗಳ ಪರಿಶೀಲನೆ ಹಾಗೂ ಏ.27 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು.

ಪ್ರಸಕ್ತ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.31ರಿಂದ ಪ್ರಾರಂಭವಾಗಿ ಏ.15ಕ್ಕೆ ಕೊನೆಗೊಳ್ಳಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಮಾ.9ರಿಂದ 29ರವರೆಗೆ ನಡೆಯಲಿದೆ. ಉಳಿದಂತೆ ಪದವಿ ಪರೀಕ್ಷೆಗಳು ಏಪ್ರಿಲ್ ತಿಂಗಳ 2ನೇ ವಾರದೊಳಗೆ ಪೂರ್ಣಗೊಳ್ಳುವುದರಿಂದ ಮತ ಎಣಿಕೆ ಕೇಂದ್ರಗಳಿಗೆ ಶೈಕ್ಷಣಿಕ ಸಂಸ್ಥೆಗಳು ಲಭ್ಯವಾಗುವ ಸಾಧ್ಯತೆ ಇದೆ.

ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪ್ರತ್ಯೇಕವಾಗಿ ಪತ್ರ ಬರೆದಿರುವ ಕೇಂದ್ರ ಚುನಾವಣಾ ಆಯೋಗ ಚುನಾವಣೆ ನಡೆಸುವ ಸಂಬಂಧ 5 ದಿನಾಂಕಗಳನ್ನು ಕಳುಹಿಸಿಕೊಡುವಂತೆ ಸೂಚನೆ ನೀಡಿದೆ. ಧಾರ್ಮಿಕ ಹಬ್ಬಗಳು ಹಾಗೂ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ದಿನಾಂಕವನ್ನು ಸೂಚಿಸುವಂತೆಯೂ ನಿರ್ದೇಶನ ನೀಡಿದೆ ಎಂದು ತಿಳಿದುಬಂದಿದೆ.

ಈ ಬಾರಿ ರಾಜ್ಯದಲ್ಲಿ ಒಟ್ಟು 224 ವಿಧಾನಸಭಾ ಕ್ಷೇತ್ರಗಳಿಗೆ ಎರಡುಹಂತದ ಮತದಾನ ನಡೆಯುವ ಸಾಧ್ಯತೆ ಇದೆ. ಈ ಹಿಂದೆ ಸಾಮಾನ್ಯವಾಗಿ ಒಂದೇ ಹಂತದ ಮತದಾನ ನಡೆಯುತ್ತಿತ್ತು. ಈ ಬಾರಿ ಎರಡು ಹಂತದಲ್ಲಿ ಮತದಾನ ನಡೆಸಲು ಆಯೋಗ ಚಿಂತನೆ ನಡೆಸಿದೆ.

ಇದನ್ನೂ ಓದಿಮೂರು ಚುನಾವಣೆ : ಗೆದ್ದದ್ದು ಒಂದು! ಕಳೆದುಕೊಂಡಿದ್ದು ಎರಡು !!

2008ರಲ್ಲಿ ಎರಡು ಹಂತದ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ ನೂರು ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ 2ನೇ ಹಂತದಲ್ಲಿ 124 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು.

ಈ ಬಾರಿಯು ತುಮಕೂರು, ರಾಮನಗರ, ಬಿಬಿಂಪಿ ಸೇರದಿಂತೆ ಬೆಂಗಳೂರುನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಜಿಲ್ಲೆಗಳಲ್ಲಿ ಮತದಾನ ನಡೆಯುವ ಸಂಭವವಿದೆ.

2ನೇ ಹಂತದಲ್ಲಿ ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ವಿಜಾಪುರ, ಬೀದರ್, ಯಾದಗಿರಿ ಮತ್ತು ಗುಲ್ಬರ್ಗ ಸೇರಿದಂತೆ ಒಟ್ಟು 124 ಕ್ಷೇತ್ರಗಳಿಗೆ ಮತದಾನ ನಡೆಸಲಿದೆ.

Donate Janashakthi Media

Leave a Reply

Your email address will not be published. Required fields are marked *