ಬೆಂಗಳೂರು: ಬಹು ನಿರೀಕ್ಷಿತ 2020-21 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ನಾಳೆ ಮಧ್ಯಾಹ್ನ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ನಾಳೆ ಫಲಿತಾಂಶ ಪ್ರಕಟವಾಗಲಿದೆ ಎಂದು ಸಚಿವರು ಅಧಿಕೃತವಾಗಿ ಘೋಷಿಸಿದ್ದು ಸುದ್ದಿಗೋಷ್ಟಿ ಮೂಲಕ ಫಲಿತಾಂಶ ಪ್ರಕಟಿಸುವದಾಗಿ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು ಇಲಾಖೆ ವೆಬ್‍ಸೈಟ್ http://www.karresults.nic.in ನಲ್ಲಿ ಫಲಿತಾಂಶ ಪ್ರಕಟಿಸುವದಾಗಿ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿ ಜೀವನದ 2ನೇ ಅತಿ ಮಹತ್ವದ ಘಟ್ಟ ಎನಿಸಿದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಯಾವುದೇ ಅಡೆತಡೆ ಇಲ್ಲದೆ ಪ್ರಕಟಿಸಲು ಪದವಿಪೂರ್ವ ಶಿಕ್ಷಣ ಮಂಡಳಿ ಈಗಾಗಲೇ ಅಗತ್ಯ ಸಿದ್ದತೆಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ ಈ ಬಾರಿ ಕೋವಿಡ್ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆ ನಡೆಸದೆ ಫಲಿತಾಂಶ ಪ್ರಕಟಿಸಲು ಮಂಡಳಿ ಮುಂದಾಗಿದೆ. ಈ ವರ್ಷ ಪರೀಕ್ಷೆ ನಡೆಸದೆಯೇ ಮುಂದಿನ ತರಗತಿಗೆ ಪ್ರಮೋಟ್ ಮಾಡಲಾಗಿದ್ದು, ಗ್ರೇಡಿಂಗ್ ಬದಲು ಪ್ರತಿ ವರ್ಷದಂತೆ ಅಂಕ ಆಧಾರಿತ ಫಲಿತಾಂಶವನ್ನೇ ನೀಡಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್ ಮಾಹಿತಿ ನೀಡಿದ್ದಾರೆ.
ಪದವಿ ಪೂರ್ವ ಶಿಕ್ಷಣ ಮಂಡಳಿಯ ಅಧಿಕೃತ ವೆಬ್‍ಸೈಟ್ http://pue.kar.nic.in ನಲ್ಲಿ ಫಲಿತಾಂಶ ಬಿಡುಗಡೆ ಮಾಡಲಾಗುತ್ತದೆ. ಪ್ರತಿ ವರ್ಷ ವಿದ್ಯಾರ್ಥಿಗಳು ತಮ್ಮ ರಿಜಿಸ್ಟ್ರೇಷನ್ ನಂಬರ್ ಮೂಲಕ ರಿಸಲ್ಟ್ ಚೆಕ್ ಮಾಡುತ್ತಿದ್ದರು. ಆದರೆ ಈ ಬಾರಿ ಪರೀಕ್ಷೆ ನಡೆಸದೇ ಫಲಿತಾಂಶ ನೀಡುತ್ತಿರುವ ಕಾರಣ ವಿದ್ಯಾರ್ಥಿಗಳ ಬಳಿ ರಿಜಿಸ್ಟ್ರೇಷನ್ ನಂಬರ್ ಇರುವುದಿಲ್ಲ.
ಇಲಾಖೆಯು ಪ್ರಸಕ್ತ ವರ್ಷ ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕ ನೋಂದಣಿ ಸಂಖ್ಯೆ ಸೃಷ್ಟಿಸಿ ಅದನ್ನು ಇಲಾಖಾ ವೆಬ್‍ಸೈಟ್ ಮೂಲಕವೇ ಪಡೆದುಕೊಳ್ಳಲು ಶುಕ್ರವಾರದಿಂದ ಅವಕಾಶ ಮಾಡಿಕೊಡಲಾಗುವುದು ಎಂದು ಸ್ನೇಹಲ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಮಂಡಳಿಯ ವೆಬ್‍ಸೈಟ್ http://pue.kar.nic.in/ ಭೇಟಿ ನೀಡಿ, Know my Registration Number’ ಎಂಬ ಲಿಂಕ್ ಕ್ಲಿಕ್ ಮಾಡಿ, ಅದರ ಮೂಲಕ ಪ್ರತಿ ವಿದ್ಯಾರ್ಥಿಯೂ ನೋಂದಣಿ ಸಂಖ್ಯೆ ಪಡೆದುಕೊಳ್ಳಬಹುದು. ಈ ಕುರಿತು ಪ್ರತಿ ವಿದ್ಯಾರ್ಥಿಯ ಮೊಬೈಲ್ ನಂಬರ್, ಇ-ಮೇಲ್‍ಗೆ ಲಿಂಕ್ ಕಳಿಸಲಾಗುತ್ತದೆ ಎಂದು ಸ್ನೇಹಲ್ ತಿಳಿಸಿದ್ದಾರೆ.