ಬೆಂಗಳೂರು: ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯು ವಲಸೆ ಕಟ್ಟಡ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸುತ್ತಿದೆ. ಆದರೆ, ವಿತರಿಸಲಾಗುವ ಆಹಾರ ಕಿಟ್ ಗಳ ಗುಣಮಟ್ಟ ಮತ್ತು ಖರೀದಿಸಲಾದ ಆಹಾರ ಕಿಟ್‌ಗಳಲ್ಲಿ ನಡೆದಿರಬಹುದಾದ ಭ್ರಷ್ಟಚಾರ ಮತ್ತು ಇಡೀ ಆಹಾರ ಕಿಟ್ ವಿತರಣೆಯ ವ್ಯವಹಾರವನ್ನು ಸಂಪೂರ್ಣ ತನಿಖೆಗೆ ಒಳಪಡಿಸಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ರಾಜ್ಯ ಸಮಿತಿ ಆಗ್ರಹಿಸಿದೆ.
ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಸಿಐಟಿಯು ರಾಜ್ಯ ಅಧ್ಯಕ್ಷರಾದ ಎಸ್ ವರಲಕ್ಷ್ಮಿ ಅವರು ʻʻಕೋವಿಡ್ ಎರಡನೇ ಸೊಂಕಿನಲ್ಲಿ ಸಂಕಷ್ಟಕ್ಕೀಡಾಗಿದ್ದ ಕಾರ್ಮಿಕರಿಗೆ ಮಂಡಳಿಯು ಆಹಾರ ಕಿಟ್ ವಿತರಿಸುತ್ತದೆ. ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪಗಳು ಕೇಳಿಬರುತ್ತಿವೆ. ಒಂದು ವೇಳೆ ಆರೋಪ ಸಾಬೀತಾದರೆ ಅಪರಾಧಿಗಳನ್ನು ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿ: “ಕೃಷಿ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ” ಜೂನ್ 26 ಕ್ಕೆ ರಾಜಭವನ ಚಲೋ
ಸಿಐಟಿಯು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಅವರು ʻʻಜೂನ್ 9ರಂದು ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ಕಲ್ಯಾಣ ಮಂಡಳಿಯಲ್ಲಿ ನಡೆದ ಕಾರ್ಮಿಕ ಸಂಘಗಳ ಸಭೆಯಲ್ಲಿ ಎಲ್ಲ ಕಾರ್ಮಿಕ ಸಂಘಗಳು ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿರುವ ಈ ಸನ್ನಿವೇಶದಲ್ಲಿ ಆಹಾರ ಕಿಟ್‌ಗಳನ್ನು ವಿತರಿಸುವ ಪ್ರಸ್ತಾಪ ಕೈ ಬಿಟ್ಟು ನೋಂದಾಯಿತ ಪ್ರತಿ ಕಾರ್ಮಿಕನಿಗೆ ಮಾಸಿಕ ರೂ. 10 ಸಾವಿರ ಹಣವನ್ನು ನೇರವಾಗಿ ಖಾತೆಗೆ ವರ್ಗಾಹಿಸಬೇಕೆಂದು ಆಗ್ರಹಿಸಿದ್ದವು. ಅಲ್ಲದೆ ಕಲ್ಯಾಣ ಮಂಡಳಿ ಹಣದಲ್ಲಿ ಶಾಸಕರಿಗೆ ಆಹಾರ ಕಿಟ್ ಗಳನ್ನು ನೀಡುವ ಕ್ರಮವನ್ನು ವಿರೋಧಿಸಿದ್ದವುʼʼ ಎಂದು ತಿಳಿಸಿದ್ದಾರೆ.
ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ಸಂಗ್ರಹವಾಗಿರುವ ಹಣವನ್ನು ಕಟ್ಟಡ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಮಾತ್ರ ಉಪಯೋಗಿಸಬೇಕೆಂಬ ಸರ್ವೋಚ್ಚ ನ್ಯಾಯಾಲಯದ ಆದೇಶ ಇರುವುದನ್ನು ಮಂಡಳಿಯ ಗಮನಕ್ಕೆ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ತಂದಿದ್ದರು.
ಇದನ್ನು ಓದಿ: ಮನೆಗೆಲಸಗಾರರ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ
ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ಸಂಗ್ರಹವಾಗಿರುವ ಹಣವನ್ನು ಸರಕಾರಿ ಯೋಜನೆಗಳಿಗೆ ಹಾಗು ಇತರೆ ರಾಜಕೀಯ ಪ್ರೇರಿತ ಉದ್ದೇಶಗಳಿಗೆ ಹಾಗು ಹಣವನ್ನು ಇನ್ಯಾವುದೋ ಯೋಜನೆಗಳ ಹೆಸರಲ್ಲಿ ರಾಜಕಾರಣಿಗಳು ಹಾಗು ಪ್ರಭಾವಿ ವ್ಯಕ್ತಿಗಳು ಲೂಟಿ ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅಂತಹದೇ ಲೂಟಿಯ ಪ್ರಯತ್ನವನ್ನು ಕೋವಿಡ್ ಪರಿಹಾರದ ಹೆಸರಲ್ಲಿ ಮಾಡಲಾಗುತ್ತದೆ ಎಂದು ಸಿಐಟಿಯು ರಾಜ್ಯ ಸಮಿತಿ ಅಭಿಪ್ರಾಯ ಪಟ್ಟಿದೆ. ಹಾಗು ಈ ಅಕ್ರಮ ಹಣದ ಲೂಟಿಯನ್ನು ಖಂಡಿಸುತ್ತದೆ. ಸಮರ್ಪಕ ತಣಿಕೆಯಾಗ ಬೇಕೆಂದು ಸಿಐಟಿಯು ಸಂಘಟನೆಯು ಒತ್ತಾಯಿಸಿದೆ.
ಆದರೆ ಕಾರ್ಮಿಕ ಸಚಿವರು ಕಟ್ಟಡ ಕಾರ್ಮಿಕ ಸಂಘಗಳು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಧಿಕ್ಕರಿಸಿ ಏಕಪಕ್ಷೀಯವಾಗಿ ಆಹಾರ ಕಿಟ್ ವಿತರಿಸುವ ನಿರ್ಧಾರ ಕೈಗೊಂಡಿದ್ದರು. ಈಗ ವಿತಸಲಾಗುತ್ತಿರುವ ಆಹಾರದ ಗುಣಮಟ್ಟ ಹಾಗೂ ಖರೀದಿಯಲ್ಲೂ ಹತ್ತಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರವಾಗಿರುವ ಸಾಧ್ಯತೆಗಳ ಎಂಬುದು ಬೆಳಕಿಗೆ ಬರುತ್ತಿವೆ.
ಈ ಹಿನ್ನೆಲೆಯಲ್ಲಿ ಕೊರೊನಾ ನೆಪದಲ್ಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸುವ ನೆಪದಲ್ಲಿ ಕಾರ್ಮಿಕ ಸಚಿವಾಲಯ ಹಾಗೂ ಕಲ್ಯಾಣ ಮಂಡಳಿಯಲ್ಲಿ ಈ ನಿರ್ಧಾರವನ್ನು ಕೂಡಲೇ ತನಿಖೆಗೆ ಒಳಪಡಿಸಬೇಕೆಂದು ಸಿಐಟಿಯು ಆಗ್ರಹಿಸಿದೆ.