ಬೆಂಗಳೂರು; ಜ, 08 : ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಹಾಗು ಜನ ವಿರೋಧಿ ವಿದ್ಯುತ್ ಮಸೂದೆಯನ್ನು ಹಿಂಪಡೆಯಲು ಒತ್ತಾಯಿಸಿ ದೇಶದ ರೈತ ಸಮೂಹವು ನಡೆಸುತ್ತಿರುವ ಹೋರಾಟ ತೀವ್ರವಾಗುತ್ತಿದೆ. ಇದೇ ಸಂದರ್ಭದಲ್ಲಿ ಬಂಡವಾಳಗಾರರ ಪರವಾಗಿರುವ 4 ಕಾರ್ಮಿಕ ಸಂಹಿತೆಗಳನ್ನು ರದ್ಧುಗೊಳಿಸಲು ಒತ್ತಾಯಿಸಿ ಹಾಗು ಇತರೆ ಬೇಡಿಕೆಗಳನ್ನು ಒತ್ತಾಯಿಸಿ ರಾಷ್ಟ್ರಾದ್ಯಂತ ಪ್ರತಿಭಟನೆಗಳನ್ನು ನಡೆಸಲು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕರೆ ನೀಡಿತ್ತು.
ಅದರ ಭಾಗವಾಗಿ ಈಗಾಗಲೇ ಸಿಐಟಿಯು ರಾಜ್ಯ ಸಮಿತಿ ನೇತೃತ್ವದಲ್ಲಿ ಜನವರಿ 1 ರ ನೂತನ ವರ್ಷದಂದು 962 ಕೇಂದ್ರಗಳಲ್ಲಿ ಸುಮಾರು 21 ಸಾವಿರಕ್ಕಿಂತ ಅಧಿಕ ವಿವಿಧ ವಿಭಾಗದ ಕಾರ್ಮಿಕರು ರೈತ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಮತ್ತು ವಿದ್ಯುತ್ ಕಾನೂನು ಪ್ರತಿಗಳನ್ನು ತಮ್ಮ ತಮ್ಮ ಕೆಲಸದ ಸ್ಥಳಗಳಲ್ಲಿ ಸಾಮೂಹಿಕವಾಗಿ ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತನ್ನ ಹಠಮಾರಿ ಧೋರಣೆ ಮುಂದುವರೆಸಿದೆ. ಇದುವರೆಗೂ ಏಳು ಬಾರಿ ಮಾತುಕತೆಗಳನ್ನು ರೈತ ಸಂಘಟನೆಗಳ ಜೊತೆ ನಡೆಸಿದ್ದರೂ ಅದು ಮೂರು ಕೃಷಿ ಮಸೂದೆಗಳನ್ನು ಮಾತ್ರ ವಾಪಸ್ಸ ಪಡೆಯಲು ಸಿದ್ದವಿಲ್ಲ. ಇದರಿಂದ ಸ್ಪಷ್ಟವಾಗುವುದೆನೇಂದರೆ ಮೋದಿ ಸರಕಾರ ರೈತರ ಬೆಳೆಗೆ ಬೆಂಬಲ ಖಾತ್ರಿಯಾದ ಬೆಂಬಲ ಬೆಲೆ ಖಾತ್ರಿಗೊಳಿಸಲು ತಯಾರಿಲ್ಲ ಎನ್ನುವುದು ಹೀಗಾಗಿ ಕೇಂದ್ರ ಸರಕಾರದ ಈ ಗೊಸುಂಬೆತನವನ್ನು ಚೆನ್ನಾಗಿ ಬಲ್ಲ ರೈತರು ತಮ್ಮ ದೇಶವ್ಯಾಪಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ ಅನ್ನದಾತರ ಈ ಹೋರಾಟವನ್ನು ಸಿಐಟಿಯು ಸಂಪೂರ್ಣವಾಗಿ ಬೆಂಬಲಿಸುತ್ತದೆ.
ಅಲ್ಲದೆ “ಕಾರ್ಮಿಕ ಹಕ್ಕುಗಳನ್ನು ಉಳಿಸುತ್ತೇವೆ, ರೈತರ ಬದುಕನ್ನು ರಕ್ಷಿಸುತ್ತೇವೆ-ಕಾರ್ಫೋರೇಟ್ ಹಿಡಿತದಿಂದ ದೇಶವನ್ನು ಕಾಪಾಡುತ್ತೇವೆ.” ಎಂಬ ಪ್ರತಿಜ್ಞೆ ಯೊಂದಿಗೆ ರಾಜ್ಯಾದ್ಯಂತ ಪ್ರಮುಖ 10 ಬೇಡಿಕೆಗಳನ್ನು ಹೀಡೆರಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ದೇಶವ್ಯಾಪಿಯಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ಪ್ರತಿಭಟನೆ ನಡೆದಿದ್ದು, ತುಮಕೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನ ನಡೆಸಿದ ಸಿಐಟಿಯು ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು. ಬೆಂಗಳೂರು, ಮಂಡ್ಯ, ಮೈಸೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೋಲಾರ, ಕೊಪ್ಪಳ, ಬಳ್ಳಾರಿ, ರಾಯಚೂರು, ಕಲಬುರ್ಗಿ, ದಾವಣಗೆರೆ, ಗದಗ್, ಧಾರವಾಡ ಸೇರಿದಂತೆ ಅನೇಕ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆದಿದೆ.
ಜಿಲ್ಲೆಗಳ ಹೋರಾಟದ ಫೋಟೋಗಳು
(ಫೊಟೊಗಳು ಮೇಲಿನಿಂದ ಕೆಳಕ್ಕೆ ತುಮಕೂರು, ದಕ್ಷಿಣ ಕನ್ನಡ, ದಾವಣಗೆರೆ, ಕುರುಗೋಡು, ಮೈಸೂರು, ಕೋಲಾರ)