ಕಬ್ಬಿಣ ಕಳ್ಳತನ ಆರೋಪ : ಕಾರ್ಮಿಕನನ್ನು ಕೊಂದ ಎಂಜಿನಿಯರ್‌

ಬೆಂಗಳೂರು : ನಿರ್ಮಾಣ ಹಂತದ ಕಟ್ಟಡದಲ್ಲಿ ಕಬ್ಬಿಣ ಕಳವು ಆರೋಪದ ಮೇರೆಗೆ ಕೂಲಿ ಕೆಲಸಗಾರನ ಮೇಲೆ ಎಂಜಿನಿಯರ್‌ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಟ್ಟಮಡು ನಿವಾಸಿ ಕಾರ್ಮಿಕ ತಂಗರಸನ್‌ (34) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಈ ಹತ್ಯೆ ಸಂಬಂಧ ಬನಶಂಕರಿ ನಿವಾಸಿ ಸೈಟ್‌ ಎಂಜಿನಿಯರ್‌ ಭಾರ್ಗವನನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಕಲ್ಲಸಂದ್ರ ಬಳಿ ನಿರ್ಮಾಣ ಹಂತದ ವಾಣಿಜ್ಯ ಕಟ್ಟಡದಲ್ಲಿ ತಂಗರಸನ್‌ ಕೆಲಸ ಮಾಡುವಾಗ ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ಹಿನ್ನೆಲೆ : ಮೃತ ತಂಗರಸನ್‌ ಮೂಲತಃ ತಮಿಳುನಾಡು ರಾಜ್ಯದವನಾಗಿದ್ದು, ಹಲವು ದಿನಗಳಿಂದ ತನ್ನ ಕುಟುಂಬದ ಜತೆ ಇಟ್ಟಮಡುವಿನಲ್ಲಿ ನೆಲೆಸಿದ್ದ ಎನ್ನಲಾಗಿದೆ. ಕಳೆದ ಹದಿನೈದು ವರ್ಷಗಳಿಂದ ಗುತ್ತಿಗೆದಾರ ಭಾಸ್ಕರ್‌ ಬಳಿ ಕೆಲಸ ಮಾಡುತ್ತಿದ್ದ ಆತ, ಕೆಲ ದಿನಗಳ ಹಿಂದೆ ಚಿಕ್ಕಕಲ್ಲಸಂದ್ರದ ಅಬ್ಬಯ್ಯ ನಾಯ್ಡು ಸ್ಟುಡಿಯೋ ಬಳಿ ನಿರ್ಮಾಣವಾಗುತ್ತಿದ್ದ ವಾಣಿಜ್ಯ ಕಟ್ಟಡದ ಕಾಮಗಾರಿಗೆ ನಿಯೋಜಿತನಾಗಿದ್ದ. ಇದೇ ಸೈಟ್‌ನಲ್ಲಿ ಭಾರ್ಗವ ಕೂಡ ಕಾರ್ಯನಿರ್ವಹಿಸುತ್ತಿದ್ದ.

ಇತ್ತೀಚೆಗೆ ಕಟ್ಟಡದ ಆವರಣದಲ್ಲಿ 100 ಕೆಜಿ ಕಬ್ಬಿಣ ಕಳ್ಳತನವಾಗಿತ್ತು. ಆದರೆ ಈ ಬಗ್ಗೆ ದೂರು ದಾಖಲಿಸದ ಸೈಟ್‌ ಎಂಜಿನಿಯರ್‌ ಭಾರ್ಗವ, ಜು.29ರಂದು ಕಳ್ಳತನ ಆರೋಪ ಹೊರಿಸಿ ತಂಗರಸನ್‌ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದ, ಬಳಿಕ ಆತನ ಕಪಾಳಕ್ಕೆ ಹೊಡೆದ. ಹಲ್ಲೆಗೊಳಗಾಗಿ ಕುಸಿದು ಬಿದ್ದ ತಂಗರಸ್‌ನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಮೃತನ ತಂದೆ-ತಾಯಿ ಬಂದಿದ್ದಾರೆ. ನಂತರ ಕೂಡಲೇ ಸುಬ್ರಹ್ಮಣ್ಯ ಠಾಣೆಗೆ ದೂರು ದಾಖಲಿಸಿದ್ದಾರೆ. ನಂತರ ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *