ಬೆಂಗಳೂರು: ಕೃಷಿ ಕಾಯ್ದೆಗಳ ರದ್ದತಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಡೆಯುತ್ತಿರುವ ದೆಹಲಿ ಗಡಿಗಳ ರೈತ ಹೋರಾಟಕ್ಕೆ ಆರು ತಿಂಗಳು, ಮೋದಿ ಸರಕಾರದ ಜನ ವಿರೋಧಿ ಆಡಳಿತಕ್ಕೆ ಏಳು ವರ್ಷದ ಹಿನ್ನಲೆಯಲ್ಲಿ ದೇಶದಾದ್ಯಂತ ಕರಾಳ ದಿನಾಚರಣೆ ಆಚರಣೆ ಅಂಗವಾಗಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಕರೆಯ ಭಾಗವಾಗಿ ಬೆಂಗಳೂರು, ಮಂಡ್ಯ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಐಟಿಯು-ಜೆಸಿಟಿಯು ಕಾರ್ಮಿಕರು ಪ್ರತಿಭಟನೆ ಭಾಗವಹಿಸಿದರು.
2020ರ ನವೆಂಬರ್ 26ರಂದು ಕೇಂದ್ರ ಬಿಜೆಪಿ ನೇತೃತ್ವದ ನರೇಂದ್ರಮೋದಿ ಸರಕಾರವು ಜಾರಿಗೊಳಿಸಲು ಹೊರಟಿರುವ ಮೂರು ಕೃಷಿ ಕಾಯ್ದೆಗಳ ರದ್ದತಿ, ವಿದ್ಯುತ್ ಮಸೂದೆ ವಾಪಸ್ಸಾತಿ ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗಾಗಿ ಆಗ್ರಹಿಸಿ ದೆಹಲಿ ಚಲೋಗೆ ಬಂದಿದ್ದ ಲಕ್ಷಾಂತರ ರೈತರನ್ನು ದೆಹಲಿ ಗಡಿಗಳಲ್ಲಿ ತಡೆ ಹಿಡಿಯಲಾಗಿತ್ತು. ಅದೇ ದಿನ ಇಡೀ ದೇಶದಾದ್ಯಂತ ಕಾರ್ಮಿಕ ಸಂಹಿತೆಗಳ ವಿರುದ್ಧ ಹಾಗೂ ಖಾಸಗೀಕರಣ ನೀತಿ ಖಂಡಿಸಿ ಕಾರ್ಮಿಕರು ದೇಶಾದ್ಯಂತ ಮುಷ್ಕರ ನಡೆಸಿದ್ದರು ನೀತಿಗಳನ್ನು ಯಾವುದೇ ರೀತಿಯಲ್ಲಿ ವಾಪಸ್ಸು ಪಡೆಯದೇ ರೈತ ಕಾರ್ಮಿಕ ವಿರೋಧಿಯಾಗಿದೆ ಎಂದು ಪ್ರತಿಭಟನಾಕಾರರು ಸರಕಾರದ ಕ್ರಮವನ್ನು ಖಂಡಿಸಿದರು.
ಸರಕಾರ ಕಾರ್ಪೊರೇಟ್ ಕಂಪನಿಗಳ ಸಂಪತ್ತು ಹೆಚ್ಚಿಸುವ ನವ ಉದಾರೀಕರಣ ನೀತಿಗಳನ್ನು ಜಾರಿಗೊಳಿಸಲು ಅತ್ಯುತ್ಸಾಹವನ್ನು ಬಿಜೆಪಿ ಸರಕಾರ ತೋರುತ್ತಿದೆ. ಏಳು ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ನಿರಂತರವಾಗಿ ಜಾರಿಗೊಳಿಸುತ್ತಿರುವ ಆರ್ಥಿಕ ನಿಲುವುಗಳು ಸಂಪೂರ್ಣವಾಗಿ ಸಾಮಾನ್ಯ ಜನರ ಹಿತಾಸಕ್ತಿಗೆ ವಿರುದ್ದವಾಗಿವೆ ಎಂದು ಆಗ್ರಹಿಸಿದರು.
ಈ ಅವಧಿಯಲ್ಲೇ ನಿರುದ್ಯೋಗ, ಜಿಡಿಪಿ, ನೋಟು ರದ್ದು, ಜಿ.ಎಸ್.ಟಿ. ಯಂತಹ ಕಾರಣದಿಂದಾಗಿ ನಮ್ಮ ಆರ್ಥಿಕತೆ ಹಾಗೂ ಜನ ಜೀವನದ ಮೇಲೆ ಗಂಭೀರ ಪರಿಣಾಮಗಳು ಉಂಟಾಗಿದೆ ಎಂದ ಪ್ರತಿಭಟನೆಯನ್ನು ನಡೆಸಿದರು.
ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಜೆಸಿಟಿಯು ಕಾರ್ಮಿಕರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಾರ್ಮಿಕ ಸಂಹಿತೆಗಳ ತಿದ್ದುಪಡಿ ಪ್ರತಿಯನ್ನು ಸುಡುವ ಮೂಲಕ ಪ್ರತಿಭಟನೆಯನ್ನು ನಡೆಸಿದರು. ಸಿಐಟಿಯು ರಾಜ್ಯ ಅಧ್ಯಕ್ಷರಾದ ಎಸ್. ವರಲಕ್ಷ್ಮಿ ಸೇರಿದಂತೆ ಜೆಸಿಟಿಯು ನೇತೃತ್ವದ ವಿವಿಧ ಕಾರ್ಮಿಕ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ರಾಯಚೂರಿನ ಜಾಲಹಳ್ಳಿಯಲ್ಲಿ ನಡೆದ ಕರಾಳ ದಿನ ಪ್ರತಿಭಟನೆಯಲ್ಲಿ ಸಿಐಟಿಯು, ಕೆಪಿಆರ್ಎಸ್, ಎಐಕೆಎಸ್ಸಿಸಿ, ಎಸ್ಎಫ್ಐ, ಡಿವೈಎಫ್ಐ, ಡಿಹೆಚ್ಎಸ್ ಎಐಟಿಯುಸಿ ಸೇರಿದಂತೆ ವಿವಿಧ ಸಂಘಟನೆಗಳು ಭಾಗವಹಿಸಿದ್ದವು.
ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡ ಸಂಗಮೇಶ ಮೂಲಿಮನಿ,ಗುರು ನಾಯಕ, ಬೋಜ, ದುರುಗಪ್ಪ, ಮೌನೇಶ ದಾಸರ್, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ನರಸಣ್ಣ ನಾಯಕ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಿದ್ದರು.
ಮಂಡ್ಯದಲ್ಲಿ ನಡೆದ ಹಳೇಬೂದನೂರು ಉದ್ಯೋಗ ಖಾತ್ರಿ ಕಾರ್ಮಿಕರು ಹಾಗೂ ಸಿಐಟಿಯು ಜಿಲ್ಲಾ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಜಿಲ್ಲೆಯಲ್ಲಿ ಕೆಲಸ ಸ್ಥಳಗಳು ಹಾಗೂ ಮನೆ ಮನೆಗಳ ಬಳಿ ಪ್ರತಿಭಟನೆ ನಡೆಸಿದ ಕಾರ್ಮಿಕರು, ರೈತರು ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿದರು ಎಂದು ವರದಿಯಾಗಿದೆ.
ರಾಜ್ಯದಂತ ನಡೆದ ಜಂಟಿ ಪ್ರತಿಭಟನೆಯಲ್ಲಿ ರೈತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ವಿದ್ಯಾರ್ಥಿ-ಯುವಜನರು ಭಾಗವಹಿಸಿದ್ದರು.