ಹಿರಿಯ ಸ್ವಾತಂತ್ರ್ಯ ಸೇನಾನಿ ಹೆಚ್ ಎಸ್ ದೊರೆಸ್ವಾಮಿಯವರಿಗೆ ಸಿಪಿಐ(ಎಂ) ಶ್ರದ್ಧಾಂಜಲಿ

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಸೇನಾನಿ, ಪ್ರಜಾಪ್ರಭುತ್ವ ಪ್ರೇಮಿ, ಜನಪರ ಹೋರಾಟಗಾರ ಶ್ರೀ ಹೆಚ್.ಎಸ್.ದೊರೆಸ್ವಾಮಿ ಯವರು ತಮ್ಮ 104ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅಗಲಿದ ಅವಿಶ್ರಾಂತ ಸೇನಾನಿಗೆ ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದೆ.

ಅವರ ಅಪಾರ ಬೆಂಬಲಿಗರು  ಹಾಗೂ ಕುಟುಂಬದ ಸದಸ್ಯರಿಗೆ ಸಂತಾಪಗಳನ್ನು ತಿಳಿಸುತ್ತದೆ ಸಿಪಿಐ(ಎಂ) ಪಕ್ಷದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು ತಿಳಿಸಿದ್ದಾರೆ.

ಇದನ್ನು ಓದಿ: ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಹೆಚ್‌ ಎಸ್‌ ದೊರೆಸ್ವಾಮಿ ನಿಧನ

ಹೇಳಿಕೆಯನ್ನು ನೀಡಿರುವ ಸಿಪಿಐ(ಎಂ) ರಾಜ್ಯ ಸಮಿತಿಯು ʻʻದೇಶ ಹಾಗೂ ರಾಜ್ಯದ ಜನತೆ ಅತ್ಯಂತ ಸಂಕಷ್ಠದಲ್ಲಿರುವಾಗ, ಜನಪರ ಹೋರಾಟಗಳಿಗೆ ತಮ್ಮ ಇಳಿವಯಸ್ಸಿನಲ್ಲಿಯೂ ಸ್ಪೂರ್ತಿದಾಯಕವಾಗಿದ್ದ ಹಿರಿಯ ಸೇನಾನಿಯ ಅಗಲಿಕೆ ಜನ ಚಳುವಳಿಗಳಿಗೆ ತೀವ್ರ ಸಂಕಟವನ್ನು ಉಂಟು ಮಾಡಿದೆ ಎಂದು ತಿಳಿಸಿದೆ.

ಸ್ವಾತಂತ್ರ್ಯಾ ನಂತರವೂ ಸ್ವಾತಂತ್ರ್ಯಕ್ಕಾಗಿ‌ ಎಡೆಬಿಡದೆ ಹೋರಾಡಿದ, ಶ್ರೀ ಹಾರನಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿಯವರು ಬ್ರಿಟೀಷರ ವಿರುದ್ಧ ಚಲೇಜಾವ್ ಚಳುವಳಿ, ಮೈಸೂರು ಸಂಸ್ಥಾನದೊಳಗೆ ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಮೈಸೂರು ಚಲೋ ಮತ್ತು ಗ್ರಾಮಗಳನ್ನು ವಿಮೋಚನೆಗೊಳಿಸುವ ಚಳುವಳಿ, ಕಾರ್ಮಿಕರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸುವ ಚಳುವಳಿಗಳಲ್ಲಿ ಕ್ರಿಯಾಶೀಲ ಪಾತ್ರವಹಿಸುವ ಮೂಲಕ ಸ್ವಾತಂತ್ರ್ಯ ಹೋರಾಟದ ಪ್ರಮುಖ ಕೊಂಡಿಯಾಗಿದ್ದರು.

ಪತ್ರಿಕಾ ಸ್ವಾತಂತ್ರ್ಯಕ್ಕಾಗಿ, ಪತ್ರಿಕೆಗಳ ಮೇಲಿನ ನಿಷೇಧವನ್ನು ಉಲ್ಲಂಘಿಸಿ ಸ್ವಾತಂತ್ರ್ಯ ಹೋರಾಟದ ಸುದ್ದಿಗಳನ್ನು ಜನರಿಗೆ ತಲುಪಿಸುವುದಕ್ಕಾಗಿ ಭೂಗತವಾಗಿ ಪತ್ರಿಕೆಯನ್ನು ಹೊರತರುವ ಕ್ಲಿಷ್ಟ ಮತ್ತು‌ ಅಪಾಯಕಾರಿ ಕೆಲಸವನ್ನು ಅವರು ಕೈಗೊಂಡಿದ್ದರು. ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ಮತ್ತು ನಂತರ ನಾಲ್ಕಾರು ಪತ್ರಿಕೆಗಳ ಸಂಪಾದಕರಾಗಿದ್ದರು. ಅವರ ಬರಹಗಳು, ಭಾಷಣಗಳು ಜನರನ್ನು ಹೋರಾಟಕ್ಕೆ ಸೆಳೆಯುತ್ತಿದ್ದವು ಎಂಬ ಅಂಶವು ಪ್ರಮುಖವಾದವು.

ಚಲೇಜಾವ್ ಚಳುವಳಿಯ ಭಾಗವಾಗಿ ರಹಸ್ಯ ಕಾರ್ಯಾಚರಣೆ, ಬಾಂಬ್ ತಯಾರಿಕೆ, ಸಾಗಾಣಿಕೆ, ತಹಸೀಲ್ದಾರ್ ಮೊದಲಾದ ಬ್ರಿಟಿಷರ ಮುಖ್ಯ ಕಛೇರಿಗಳನ್ನು ಸುಡುವುದು ಇತ್ಯಾದಿ  ಸಮರಶೀಲ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಈ ಸಂದರ್ಭಗಳಲ್ಲಿಯೇ ಅವರು ಜೈಲುವಾಸವನ್ನು ಅನುಭವಿಸಿದರು.

ಇದನ್ನು ಓದಿ: ಸ್ವಾತಂತ್ರ್ಯ ಸೇನಾನಿ ಹೆಚ್‌ ಎಸ್‌ ದೊರೆಸ್ವಾಮಿ ಅವರಿಗೆ ಗಣ್ಯರ ನುಡಿನಮನ

ಸ್ವಾತಂತ್ರ್ಯಾ ನಂತರ ಯಾವ ಪದವಿ, ಅಧಿಕಾರಗಳ ಆಮಿಷಕ್ಕೆ ಬಲಿಯಾಗದೆ ಸರ್ವೋದಯ ಕಾರ್ಯವನ್ನು ಮುಂದುವರೆಸಿದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಸಾಮಾನ್ಯ ಜನರಿಗೆ ಸ್ವಾತಂತ್ರ್ಯ ಸಿಗದ ಪರಿಸ್ಥಿತಿಯಿಂದ  ನೊಂದ ಅವರು ಜನರ ಸಮಸ್ಯೆಗಳಿಗಾಗಿ ಹೋರಾಟದಲ್ಲಿ ತೊಡಗಿದರು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಇಂದಿರಾಗಾಂಧಿಯವರಿಗೆ ಪತ್ರ ಬರೆದರೆಂಬ ಪ್ರಜಾಪ್ರಭುತ್ವ ಪ್ರೇಮದ ಕಾರಣಕ್ಕೇ ಮತ್ತೆ ಜೈಲುವಾಸ ಅನುಭವಿಸಿದ್ದರು.

ಜಾಗತೀಕರಣ, ಖಾಸಗೀಕರಣಗಳು ಜನರಿಗೆ ಸಿಕ್ಕ ಅಲ್ಪಸ್ವಲ್ಪ ಸ್ವಾತಂತ್ರ್ಯವನ್ನೂ ಕಸಿದುಕೊಳ್ಳುತ್ತಿರುವುದನ್ನು ಅವಲೋಕಿಸಿ  ಮತ್ತೆ ತಮ್ಮ ಇಳಿ ವಯಸ್ಸಿನಲ್ಲಿ, ಯೌವ್ವನದ ಹುರುಪಿನಿಂದ ನಿರಂತರವಾಗಿ ಹೋರಾಟದ ಕಣಕ್ಕೆ ಧುಮುಕಿದರು. ತೀವ್ರವಾದಕ್ಕೆ ಸಿಲುಕಿ ಸಂಕಷ್ಠದಲ್ಲಿದ್ದ ಹಲವು ಯುವಜನರನ್ನು ಮುಖ್ಯವಾಹಿನಿಗೆ ತರುವಲ್ಲಿ ಅವರ ಪಾತ್ರವನ್ನು ಗಮನಿಸಬಹುದು. ಅವರು ಭೂಹೀನರ, ಆದಿವಾಸಿಗಳು, ಸ್ಲಂ ಪ್ರದೇಶದ ಜನರ ಭೂಮಿ, ವಸತಿ ಪ್ರಶ್ನೆಗಳಿಗಾಗಿ ನಡೆದ ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಒಂದು ಮಟ್ಟಿನ ನ್ಯಾಯ ದೊರಕಿಸಲು ಸಾಧ್ಯವಾದುದು ಉಲ್ಲೇಖನೀಯ ಎಂದು ಸಿಪಿಐ(ಎಂ) ಪಕ್ಷವು ತಿಳಿಸಿದೆ.

ಕೋಮುದಂಗೆಗಳು, ಬಾಬ್ರಿ ‌ಮಸೀದಿ ನಾಶ, ಕೋಮುವಾದಿ ಶಕ್ತಿಗಳು ಅಧಿಕಾರವನ್ನು ಹಿಡಿದದ್ದು, ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ‌ ಧಾಳಿ ಅವರನ್ನು ಮತ್ತಷ್ಟು ಕೃದ್ಧರನ್ನಾಗಿಸಿತು. ಕೋಮುಸೌಹಾರ್ದತೆ, ನಾಗರೀಕ ಹಕ್ಕುಗಳಿಗಾಗಿ ಅಹೋರತ ಶ್ರಮಿಸಿದವರು ಹೆಚ್‌ ಎಸ್‌ ದೊರೆಸ್ವಾಮಿ ಅವರು.

ಕಳೆದ ಮೂರು ದಶಕಗಳಲ್ಲಿ ಅವರು ಭಾಗವಹಿಸಿದ, ನೇತೃತ್ವ ವಹಿಸಿದ ಹೋರಾಟಗಳು ಅಸಂಖ್ಯ. ಇಂತಹ ದಣಿವರಿಯದ ಸ್ವಾತಂತ್ರ್ಯ ಹೋರಾಟಗಾರನ ನಿಧನ ಕರ್ನಾಟಕಕ್ಕೆ ಮಾತ್ರವಲ್ಲ ದೇಶಕ್ಕೆ ಅಪಾರ ನಷ್ಟವಾಗಿದೆ ಎಂದು ಸಿಪಿಐ(ಎಂ) ಕಂಬನಿ ಮಿಡಿದು ಗೌರವಪೂರ್ವಕ ಶ್ರದ್ಧಾಂಜಲಿಯನ್ನು ಸಲ್ಲಿಸಿದೆ.

Donate Janashakthi Media

Leave a Reply

Your email address will not be published. Required fields are marked *