ಬೆಂಗಳೂರು : ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜೆಸಿಟಿಯು ಕರೆ ನೀಡಿದ್ದ ಬಂದ್ ಗೆ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ. ಬಹುತೇಕ ರಾಜ್ಯಗಳಲ್ಲಿ ಮುಷ್ಕರಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆಕಾರರು ಘೋಷಣೆಗಳನ್ನು ಕೂಗಿದರು.
ಇತ್ತಿಚೆಗೆ ಕೇಂದ್ರ ಸರಕಾರ ನಾಲ್ಕು ಅಪಾಯಕಾರಿ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿತ್ತು, ಕಾರ್ಮಿಕರು ಸಾಕಷ್ಟು ವಿರೋಧ ಮಾಡಿದ್ದರು ಕೂಡಾ ಮೋದಿ ಸರಕಾರ ಕಿವಿಗೊಟ್ಟಿರಲಿಲ್ಲ. ಇದು ಕಾರ್ಮಿಕರ ತಾಳ್ಮೆಯನ್ನು ಪ್ರಶ್ನಿಸುವಂತೆ ಮಾಡಿತ್ತು. ಹಾಗಾಗಿ ಇಂದು ಬಹುತೇಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಪಶ್ಚಿಮ ಬಂಗಾಳ, ತ್ರಿಪೂರ, ದೆಹಲಿ, ತಮಿಳುನಾಡು, ಕೇರಳ, ಆಂದ್ರಪ್ರದೇಶ, ತೆಲೆಂಗಾಣ, ಮಹಾರಾಷ್ಟ್ರ, ಬಿಹಾರ, ರಾಜಸ್ಥಾನ್, ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ಕರ್ನಾಟಕದಲ್ಲಿ ಮುಷ್ಕರಕ್ಕೆ ಉತ್ತಮ ಪ್ರತಿಕ್ರೀಯೆ ದೊರೆತಿದ್ದು, ಲಕ್ಷಾಂತರ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು. ತ್ರಿಪುರಾದಲ್ಲಿ ಸಿಐಟಿಯು ಕಚೇರಿಯ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದು, ಇದು ಕೋಮುವಾದಗಿಳ ಕೈವಾಡ ಇರಬೇಕು ಎಂದು ಸಿಐಟಿಯು ಶಂಕೆಯನ್ನು ವ್ಯಕ್ತಪಡಿಸಿದೆ.
ಇನ್ನೂ ಕರ್ನಾಟಕದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಂ, ಬೆಳಗಾವಿ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ಕೊಡಗು, ಗದಗ್, ಉಡುಪಿ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ವಿಜಯಪುರ, ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ ಜಿಲ್ಲೆಯಲ್ಲಿ ಮುಷ್ಕರಕ್ಕೆ ವ್ಯಾಪಕ ಬೆಂಬಲವ್ಯಕ್ತವಾಗಿದೆ.
ಮಳವಳ್ಳಿ ಪಟ್ಟಣಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕಪ್ಪುಭಾವುಟ ಪ್ರದರ್ಶನ ನಡೆಸುವ ಮೂಲಕ ಕಾರ್ಮಿಕರು ಆಕ್ರೊಶವನ್ನು ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನೆಕಾರರನ್ನು ತಡೆಯಲು ಪೊಲೀಸರು ಮುಂದಾದಾಗ ಸಾಕಷ್ಟು ಜಟಾಪಟಿ ನಡೆಯಿತು.
ಗಜೇಂದ್ರಗಡದಲ್ಲಿ ನಡೆದ ಮುಷ್ಕರದಲ್ಲಿ ಮಾನವ ಸರಪಳಿಯನ್ನು ರಚಿಸುವ ವೇಳೆ ಪ್ರತಿಭಟನೆಕಾರರಿಗೂ ಮತ್ತು ಪೊಲೀಸರಿಗೂ ಮಾತಿನ ಚಕಮಕಿ ನಡೆಯಿತು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಗೋವಾ ರಸ್ತೆಯನ್ನು ತಡೆಯುವ ಮೂಲಕ ಪ್ರತಿಭಟನೆ ನಡೆಸಿದ್ದು ವಿಶೇಷವಾಗಿತ್ತು, ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಲಾಯಿತು.
ನಾಲ್ಕು ಸಂಹಿತೆಗಳನ್ನು ಜಾರಿ ಮಾಡುವ ಮೂಲಕ ಕೇಂದ್ರ ಸರಕಾರ ಕಾರ್ಮಿಕರ ಬದುಕನ್ನು ನಾಶಪಡಿಸುತ್ತಿದೆ. ಈ ಮುಷ್ಕರ ಮೋದಿ ಸರಕಾರಕ್ಕೆ ಎಚ್ಚರಿಕೆ ಘಂಟೆಯಾಗಲಿದೆ ಎಂದು ಜೆಸಿಟಿಯು ಮುಖಂಡರಾದ ಮಿನಾಕ್ಷಿ ಸುಂದರಂ ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ಜಾಥಾವನ್ನು ಸಂಘಟಿಸಿ ನಾಳೆ ದೆಹಲಿ ಚಲೋ ನಡೆಸುತ್ತಿರುವ ಅಖಿಲ ಭಾರತ ಕಿಸಾನ ಸಂಘರ್ಷ ಸಮಿತಿಯ ಮುಖಂಡರ ಮೇಲೆ ಹಾಗೂ ರೈತರ ಮೇಲೆ ಮೋದಿ ಸರಕಾರ ಜಲಫಿರಂಗಿ ಬಳಸಿರುವುದಕ್ಕೆ ವ್ಯಾಪಕ ಆಕ್ರೊಶ ಕೇಳಿ ಬರುತ್ತಿದೆ. ಮೋದಿ ಸರಕಾರ ವಿರುದ್ದ ನಾಳೆ ರೈತರು ದೇಶವ್ಯಾಪಿ ರಸ್ತೆತಡೆ ನಡೆಸಲಿದ್ದಾರೆ ಎಂದು ಎಐಕೆಸಿಸಿಯ ರಾಜ್ಯ ಸಂಚಾಲಕರಾದ ಜಿಸಿಬಯ್ಯಾರೆಡ್ಡಿಯವರು ತಿಳಿಸಿದ್ದಾರೆ.
ಮೋದಿ ಸರಕಾರ ಪದೆ ಪದೆ ಕಾರ್ಮಿಕರ ಬದುಕಿನಲ್ಲಿ ಆಟವಾಡುತ್ತಿದೆ. ಅಪಾಯಕಾರಿ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡುವ ಮೂಲಕ ಕಾರ್ಮಿಕರ ಭದ್ರತೆಗೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಇಷ್ಟೆಲ್ಲ ವಿರೊಧವ್ಯಕ್ತವಾಗುತ್ತಿರುವಾಗ ಸರಕಾರ ಎಚ್ಚೆತ್ತುಕೊಳ್ಳುವ ಮೂಲಕ ಕಾರ್ಮಿಕರ ಹಿತವನ್ನು ಕಾಪಾಡಲು ಮುಂದೆ ಬರಬೇಕಿದೆ.