ಬೆಂಗಳೂರು: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ನಡೆಸಿದ್ದು, ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್(ರಿ)-(ಸಿಐಟಿಯು) ಆಗ್ರಹಿಸಿದೆ.
ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಅವರು, ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮವಹಿಸದಿದ್ದರೆ ಕಾರ್ಮಿಕ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲು ಕರೆ ನೀಡಿದ್ದಾರೆ.
ಕೊರೊನಾ ಮತ್ತು ಕೊರೊನೋತ್ತರ ಈ ಕಾಲಘಟ್ಟದಲ್ಲಿ ಕಾರ್ಮಿಕ ಸಚಿವರು ಮತ್ತು ಮಂಡಳಿ ಕಾರ್ಯದರ್ಶಿಗಳು ಹಾಗೂ ಕಾರ್ಮಿಕ ಆಯುಕ್ತರು ಸೇರಿ ಮಂಡಳಿ ಸಭೆಯನ್ನು ಸೇರಿಸದೇ ಎಲ್ಲ ನಿಯಮಾವಳಿ ಹಾಗೂ ಕೇಂದ್ರ ಕಾರ್ಮಿಕ ಇಲಾಖೆಯ ಆದೇಶಗಳನ್ನು ಉಲ್ಲಂಘಿಸಿ ರೇಷನ್ ಕಿಟ್, ಟೂಲ್ ಕಿಟ್, ಬೂಸ್ಟರ್ ಕಿಟ್ ಗಳನ್ನು, ದುಬಾರಿ ಕಾರುಗಳು, ಅಂಬ್ಯೂಲೆನ್ಸ್ ಗಳನ್ನು ಹಾಗೂ ಕಾರ್ಮಿಕ ಇಲಾಖೆಗೆ ಸ್ವತಂತ್ರ ತಂತ್ರಾಂಶ, ಕ್ಯಾಲೆಂಡರ್ ಮುದ್ರಣ ಹೀಗೆ ಕಟ್ಟಡ ಕಾರ್ಮಿಕರಿಗೆ ಪ್ರಯೋಜನವಾಗದ ಬಹುತೇಕ ಸಾಮಾಗ್ರಿಗಳನ್ನು ಖರೀದಿಸಿ ನೂರಾರು ಕೋಟಿಗಳ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.
ಮಂಡಳಿಯ ಎಲ್ಲ ಘೋಷಿತ ಸೌಲಭ್ಯಗಳನ್ನು ಫಲಾನುಭವಿ ಕಾರ್ಮಿಕರ ಖಾತೆಗೆ ನೇರಹಣ ವರ್ಗಾವಣೆ ಮೂಲಕವೇ ನೀಡಬೇಕೆಂಬ ನಿಯಮವನ್ನು ಗಾಳಿಗೆ ತೂರಲಾಗಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಒಂದು ತ್ರಿಪಕ್ಷೀಯ ಸಮಿತಿ. ಯಾವುದೇ ಟೆಂಡರ್ ಕರೆಯುವುದಿದ್ದರೂ ಸಮಿತಿಯಲ್ಲಿ ತೀರ್ಮಾನವಾಗಬೇಕು. ಆದರೆ ಮೇಲ್ಕಂಡ ಎಲ್ಲ ಖರೀದಿಗಳನ್ನು ಮಂಡಳಿ ಸಭೆಯಲ್ಲಿ ತೀರ್ಮಾನಿಸದೇ ತೀರ್ಮಾನಕೈಗೊಂಡಿರುವುದನ್ನು ಸಂಘಟನೆಯು ಖಂಡಿಸಿದೆ.
ವಿಪತ್ತು ನಿರ್ವಹಣಾ ಕಾಯ್ದೆ, ಕರ್ನಾಟಕ ಸಾರ್ವಜನಿಕ ಖರೀದಿಗಳ ಪಾರಾದರ್ಶಕ ಕಾಯ್ದೆ ಎರಡನ್ನೂ ಸ್ಪಷ್ಟವಾಗಿ ದುರುಪಯೋಗ ಮಾಡಿಕೊಂಡು ಈ ಎಲ್ಲ ಖರೀದಿಗಳನ್ನು ನಡೆಸಿರುವ ಮಂಡಳಿಯು ನಂತರ ನೆಪಕ್ಕೆ ಘಟನೋತ್ತರ ಅನುಮೋದನೆ ಪಡೆದುಕೊಂಡಿರುವುದು ಬೃಹತ್ ಭ್ರಷ್ಟಾಚಾರದ ಕ್ರಮವಾಗಿದೆ.
ಸಾಲದೆಂಬಂತೆ ಇತ್ತೀಚಿಗೆ ಕಾರ್ಮಿಕರಿಗೆ ಮತ್ತು ಅವಲಂಬಿತರಿಗೆ ಉಚಿತ ಆರೋಗ್ಯ ತಪಾಸಣೆ ಹೆಸರಲ್ಲಿ ಕಾರ್ಮಿಕ ಸಚಿವರು ಮತ್ತು ಮಂಡಳಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ.
ಇದರ ವಿರುದ್ದ ರಾಜ್ಯದ ಕಟ್ಟಡ ಕಾರ್ಮಿಕ ಸಂಘಗಳು “ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ” ಹೆಸರಿನಲ್ಲಿ ಒಂದಾಗಿ ಕಲ್ಯಾಣ ಮಂಡಳಿ ಹಣ ದುರುಪಯೋಗದ ವಿರುದ್ದ ವ್ಯಾಪಕವಾದ ಹೋರಾಟವನ್ನು ನಡೆಸುತ್ತಾ ಬಂದಿದೆ.
ಕಳೆದ ಎರಡು ವರ್ಷಗಳಿಂದ ಹೋರಾಟ ತೀವ್ರಸ್ವರೂಪದಲ್ಲಿ ನಡೆಸಲಾಗಿದೆ. ಈ ಚಳವಳಿ ಪರಿಣಾಮ ಕೊರೊನಾ ಲಸಿಕೆ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕಾರ್ಮಿಕ ಸಚಿವರು ಧಾರೆ ಎರೆಯಲು ಹೊರಟಿದ್ದ ರೂ. 700 ಕೋಟಿ ಹಣದ ಆದೇಶ ಹಿಂಪಡೆಯಲಾಗಿದೆ. ಆದರೂ ಕಾರ್ಮಿಕ ಸಚಿವರು ಮತ್ತು ಅವರ ಹಿಂಬಾಲಕರು ವಿವಿಧ ಖರೀದಿಗಳ ಮೂಲಕ ತಮ್ಮ ಭ್ರಷ್ಟಾಚಾರವನ್ನು ಮುಂದುವರೆಸಿರುವುದನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್(ರಿ)-(ಸಿಐಟಿಯು) ಖಂಡಿಸಿದೆ.
ಸಚಿವರ ಈ ಎಲ್ಲ ಭ್ರಷ್ಟಾಚಾರ ಹಿಂದೆ ಮಂಡಳಿಯ ಹಿಂದಿನ ಕಾರ್ಯದರ್ಶಿ ಹಾಗೂ ಹಾಲಿ ಕಾರ್ಮಿಕ ಆಯುಕ್ತ ಅಕ್ರಂಪಾಷಾ ಮತ್ತು ಕೆಲವು ಉಪ ಕಾರ್ಮಿಕ ಆಯುಕ್ತರ ನೇರ ಕೈವಾಡವಿರುವುದು ಸ್ಪಷ್ಟವಾಗಿದೆ ಎಂದು ಸಂಘಟನೆಯು ಆರೋಪಿಸಿದೆ.
ಸಿಐಟಿಯು ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಟನೆಯು ಈ ಎಲ್ಲ ಹಗರಣಗಳ ಬಗ್ಗೆ ತನಿಖೆ ನಡೆಸಬೇಕೆನ್ನುವ ಹೋರಾಟದ ಮುಂದಾಳತ್ವ ವಹಿಸಿ ನಡೆಸಿದೆ.
ದೇಶದ ಪ್ರಮುಖ ಕೇಂದ್ರೀಯ ಕಾರ್ಮಿಕ ಸಂಘಟನೆಯಾದ ಸಿಐಟಿಯು ವನ್ನು ಕಾರ್ಮಿಕ ಸಚಿವರು ಹಾಗೂ ಕಾರ್ಮಿಕ ಆಯುಕ್ತರು ಉದ್ದೇಶಪೂರ್ವಕವಾಗಿ ಕನಿಷ್ಟ ವೇತನ ಸಲಹಾ ಮಂಡಳಿ, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಮತ್ತಿತರ ತ್ರಿಪಕ್ಷೀಯ ಸಮಿತಿಗಳಿಂದ ಕೈಬಿಟ್ಟಿದೆ. ಮಾತ್ರವಲ್ಲ ಕಟ್ಟಡ ಕಾರ್ಮಿಕರನ್ನು ಸಂಘಟಿಸುತ್ತಾ ಅವರ ಹಕ್ಕು ಮತ್ತು ಸೌಲಭ್ಯಗಳಿಗಾಗಿ ನಿರಂತರವಾಗಿ ಹೋರಾಡುತ್ತಿರುವ ಸಿಐಟಿಯು ನೇತೃತ್ವದ ಕಟ್ಟಡ ಕಾರ್ಮಿಕ ಸಂಘಟನೆಯನ್ನು ತ್ರಿಪಕ್ಷೀಯ ಸಮಿತಿಯಿಂದ ಹೊರಗಿಟ್ಟಿರುವುದು ನೋಡಿದರೆ, ಸರ್ಕಾರ ಹಾಗೂ ಮಂಡಳಿಯ ಅಕ್ರಮ ಎಷ್ಟು ದೊಡ್ಡದಾಗಿರಬಹುದೆಂದು ಸ್ಪಷ್ಟವಾಗುತ್ತದೆ.
ಕಟ್ಟಡ ಕಾರ್ಮಿಕರ ಜೀವ ಮತ್ತು ಜೀವನ ಹಾಗೂ ಅವರ ಹಕ್ಕುಗಳ ರಕ್ಷಣೆ ಹಾಗೂ ಸೌಲಭ್ಯಗಳ ಜಾರಿಗಾಗಿ ಜತೆಗೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಅದರಲ್ಲಿ ಸಂಗ್ರಹವಾಗಿರುವ ಸಾವಿರಾರು ಕೊಟಿ ಸೆಸ್ ಹಣದ ರಕ್ಷಣೆಗಾಗಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಹಾಗೂ ಸಿಐಟಿಯು ಹೋರಾಟ ಮುಂದುವರೆಸಲಿದ್ದಾರೆ ಎಂದು ಕೆ. ಮಹಾಂತೇಶ ಅವರು ತಿಳಿಸಿದ್ದಾರೆ.
ತುಮಕೂರಿನಲ್ಲಿ ಜೂನ್ 26-27ರಂದು ನಡೆಯುವ ರಾಜ್ಯ ಸಮ್ಮೇಳನದಲ್ಲಿ ಕಲ್ಯಾಣ ಮಂಡಳಿ ಭ್ರಷ್ಟಾಚಾರ ಹಾಗೂ ಕಾರ್ಮಿಕ ಸಚಿವರ ವಜಾ ಹಾಗೂ ಕಾರ್ಮಿಕ ಆಯುಕ್ತರ ವರ್ಗಾವಣೆಗಾಗಿ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ. ಸಮ್ಮೇಳನದ ನಂತರದಲ್ಲಿ ಸಂಘಟನೆಯು ಇತರೆ ಕಟ್ಟಡ ಕಾರ್ಮಿಕ ಸಂಘಗಳ ಜತೆಗೂಡಿ ಅನಿರ್ಧಿಷ್ಟ ಹೋರಾಟಕ್ಕೂ ಮುಂದಾಗಲು ನಿರ್ಧರಿಸಿದೆ.