ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಇ-ಶ್ರಮ ಭಾಗ್ಯ ಕಾರ್ಡ್ ವಿತರಣೆ

ಮೈಸೂರು: ಯಾರೊಬ್ಬರ ಮಧ್ಯಸ್ಥಿಕೆಯೂ ಇಲ್ಲದೆ ನೇರವಾಗಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸಬೇಕೆಂಬ ಕೇಂದ್ರ ಸರ್ಕಾರದ ಉದ್ದೇಶವಾಗಿದ್ದು, ಈಗಾಗಲೇ ದೇಶದಾದ್ಯಂತ ಅಸಂಘಟಿತ ಕಾರ್ಮಿಕರನ್ನು ಇ- ಶ್ರಮ್ ವ್ಯಾಪ್ತಿಯಲ್ಲಿ ಒಗ್ಗೂಡಿಸುವ ಕೆಲಸ ನಡೆಯುತ್ತಿದೆ. ಇಂತಹ ಮಹತ್ವದ ಬೆಳೆವಣಿಗೆಯಲ್ಲಿ ಮೈಸೂರಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಇ- ಶ್ರಮ್ ಕಾರ್ಡ್ ವಿತರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಹಲವು ಮೊದಲುಗಳಿಗೆ ಹೆಸರಾಗಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೇಶದಲ್ಲೇ ಮೊಟ್ಟಮೊದಲ ಬಾರಿಗೆ 50ಕ್ಕೂ ಹೆಚ್ಚು ಮಂದಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಇ- ಶ್ರಮ್ ಕಾರ್ಡ್ ಮಾಡಿ ಕೊಟ್ಟಿದ್ದಾರೆ.

ಇಲ್ಲಿ ಜನರ ಗುಂಪು ಸೇರಿದ್ದು ನೋಡಿ ಸ್ಥಳಕ್ಕೆ ಬಂದೆವು. ಇ-ಶ್ರಮ್ ಬಗ್ಗೆ ಅಧಿಕಾರಿಗಳು, ಡಿಜಿಟಲ್ ಸೇವಾ ಕೇಂದ್ರದವರು ಕೊಟ್ಟ ವಿವರಣೆಯಿಂದ ಪ್ರೇರಪಣೆಗೊಂಡು 15ಕ್ಕೂ ಹೆಚ್ಚು ಮಂದಿ ಕಾರ್ಡ್ ಮಾಡಿಸಿದೆವು. ಎಲ್ಲರೂ ಇದನ್ನು ಮಾಡಿಸಿ ಪ್ರಯೋಜನ ಪಡಿಸಿಕೊಳ್ಳಬೇಕು. ಇಂತಹದೊಂದು ಯೋಜನೆಗೆ ನಮ್ಮನ್ನು ಸೇರಿಸಿದವರಿಗೆ ಅಭಿನಂದನೆ ಸಲ್ಲಿಸುತ್ತೇವೆ. – ಪ್ರಮೋದಿನಿ, ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ

ಇ-ಶ್ರಮ್ ಕಾರ್ಡ್ ವೈಶಿಷ್ಟ್ಯತೆ:

ಪ್ರಧಾನಮಂತ್ರಿ ನರೇಂದ್ರಮೋದಿ ಇತ್ತೀಚಿಗೆ ಶ್ರಮಿಕ ಕಾರ್ಡ್ ಅನ್ನು ಅಸಂಘಟಿತ ಕಾರ್ಮಿಕ ಅಭಿವೃದ್ಧಿ ಕಲ್ಯಾಣ ಯೋಜನೆಯಡಿ ಜಾರಿಗೊಳಿಸಿದರು. ಕಟ್ಟಡ ಮತ್ತು ಇತರೆ ನಿರ್ಮಾಣ, ಕೃಷಿ ಕಾರ್ಮಿಕರು, ಮೀನುಗಾರರು, ಆಶಾ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಚಾಲಕರು, ಟೈಲರ್‌ಗಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಕೇಂದ್ರ ಸರ್ಕಾರವು ಗುರುತಿಸಿರುವ ಸುಮಾರು 156 ವರ್ಗಗಳ ಕಾರ್ಮಿಕರು ಹಾಗೂ ಪಟ್ಟಿಯಲ್ಲಿ ಸೇರಿರದ ಅಸಂಘಟಿತ ಕಾರ್ಮಿಕರು ಇತರೆ ವರ್ಗಗಳಡಿ ನೋಂದಣಿಯಾಗಬಹುದಾಗಿದೆ. ಈ ಶ್ರಮ ಕಾರ್ಡನ್ನು ಮಾಡಿಸಲು ಫೋನ್ ನಂಬರ್, ಆಧಾರ್ ನಂಬರ್, ಬ್ಯಾಂಕ್ ಅಕೌಂಟ್ ನಂಬರ್ ಇದ್ದರೆ ಸಾಕು ಸ್ಥಳದಲ್ಲೇ ಕಾರ್ಡು ನಿಮ್ಮ ಕೈ ಸೇರಲಿದೆ. ಇದಕ್ಕಾಗಿ ನೀವು ಗಂಟೆಗಟ್ಟಲೆ ಎಲ್ಲಿಯೂ ಕಾಯಬೇಕಾದ ಅವಶ್ಯಕತೆಯೂ ಇಲ್ಲ.

ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಜನರ ಬಳಿಗೆ ತೆರಳಿ ಕಾರ್ಡ್ ಮಾಡಿ ಕೊಡುವ ಕೆಲಸ ಭರದಿಂದ ಸಾಗಿದ್ದು, ಇದುವರೆವಿಗೂ ಜಿಲ್ಲೆಯಲ್ಲಿ 17,500 ಮಂದಿಗೆ ಕಾರ್ಡ್ ನೀಡಲಾಗಿದೆ.  ಇದರ ಭಾಗವಾಗಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಈ ಸೌಲಭ್ಯ ಕಲ್ಪಿಸುವ ಮೂಲಕ ದಾಖಲೆ ಬರೆದಿರುವುದು ವಿಶೇಷ.

ಇದನ್ನು ಓದಿ: ಅಸಂಘಟಿತ ಕಾರ್ಮಿಕರ ಡಾಟಾ ಬೇಸ್ ಈ-ಶ್ರಮ ಕಾರ್ಡ್ ಮತ್ತೊಂದು ಏಕೆ: ಸಿಪಿಐ(ಎಂ)

ಕಾರ್ಮಿಕ ಇಲಾಖೆ ಹಾಗೂ ಡಿಜಿಟಲ್ ಸೇವಾ ಕೇಂದ್ರದ ಈ ಕಾರ್ಯಕ್ಕೆ ದೆಹಲಿಯ ಕಾರ್ಮಿಕ ಇಲಾಖೆಯಿಂದಲೂ ಅಭಿನಂದನೆ ವ್ಯಕ್ತವಾಗುವ ಮೂಲಕ ದೇಶದಲ್ಲೇ ಅತಿ ಮುಂಚೂಣೆಯಲ್ಲಿ ಯೋಜನೆಯನ್ನು ಸಕಾರಗೊಳಿಸುತ್ತಿರುವ ಜಿಲ್ಲೆಯಾಗಿ ಇದು ರೂಪುಗೊಂಡಿದೆ.

ಈ ಬಗ್ಗೆ ಉಪ ಕಾರ್ಮಿಕ ಆಯುಕ್ತ ಪ್ರಮೋದ್ ಕುಮಾರ್ ʻಮೈಸೂರಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಇ- ಶರ್ಮ್ ಕಾರ್ಡ್ ನೀಡಿರುವ ವಿಚಾರ ದೆಹಲಿಯ ಹಿರಿಯ ಅಧಿಕಾರಿಗಳಿಗೂ ತಲುಪಿ ದೇಶದಲ್ಲೇ ಮೊದಲ ಬಾರಿಗೆ ಇತಂಹದೊಂದು ಪ್ರಯತ್ನ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇದರಿಂದ ಇಲಾಖೆಗೂ ಗರಿಮೆ ಹೆಚ್ಚಿದ್ದು, ಮತ್ತಷ್ಟು ಮಂದಿ ಇ- ಶ್ರಮ್ ಕಾರ್ಡ್ ಮಾಡಿಸಿಕೊಳ್ಳುವ ಮೂಲಕ ಅನೂಕೂಲ ಪಡೆದುಕೊಳ್ಳಬೇಕಿದೆʼ ಎಂದಿದ್ದಾರೆ.

ಟ್ವನ್ಸ್ ಸಿಎಸ್‌ಸಿ ಡಿಜಿಟಲ್ ಸೇವಾ ಕೇಂದ್ರದ ಆರ್.ಯಶೋಧ ʻಇ- ಶ್ರಮ್ ಕಾರ್ಡ್ ಅನ್ನು ಜನರ ಬಳಿಗೆ ಹೋಗಿ ಮಾಡುವ ಕೆಲಸ ನಡೆಯುತ್ತಿದೆ. ಅದರ ಭಾಗವಾಗಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಈಗಾಗಲೇ ಕಾರ್ಡ್ ಮಾಡಿಕೊಟ್ಟಿದ್ದು, ಮತ್ತೊಂದು ದಿನ ವಿಶೇಷವಾಗಿ ಅವರಿಗೆ ಶಿಬಿರ ನಡೆಸಿ ಕಾರ್ಡ್ ಕೊಡಲಾಗುವುದುʼ ಎಂದು ಹೇಳಿದರು.

ಇ-ಶ್ರಮ ಕಾರ್ಡ್‌ನ ಪ್ರಯೋಜನಗಳು

  1. ಯಾವುದಾದರೂ ವ್ಯಕ್ತಿ ಸಾವನ್ನಪ್ಪಿದಾಗ 2 ಲಕ್ಷ ರೂಪಾಯಿ ತ್ವರಿತವಾಗಿ ಸಿಗಲಿದೆ.
  2. ಯಾವುದಾದರೂ ವ್ಯಕ್ತಿ ಅಪಘಾತದಿಂದ ಅಂಗಾಂಗಗಳು ವೈಫಲ್ಯವಾದರೆ 1 ಲಕ್ಷದವರೆಗೆ ಹಣ ಪಡೆಯಬಹುದು.
  3. ಪ್ರಧಾನಮಂತ್ರಿ ಜೀವನ್ ಭೀಮಾ ಯೋಜನೆ ಸೌಲಭ್ಯ
  4. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಸೌಲಭ್ಯದ ವ್ಯವಸ್ಥೆಯಿದೆ
  5. ಪ್ರಧಾನಮಂತ್ರಿ ಜನಧನ ಯೋಜನೆ ಅಡಿಯಲ್ಲಿನ ವಿವಿಧ ಸೌಲಭ್ಯಗಳು
  6. ವರಿಷ್ಠ ಪೆನ್ಷನ್ ಭೀಮಾ ಯೋಜನೆ
  7. ಪ್ರಧಾನ ಮಂತ್ರಿ ಮುದ್ರಾ ಯೋಜನೆ
  8. ಅಟಲ್ ಪೆನ್ಷನ್ ಯೋಜನೆ
  9. ಸ್ಟ್ಯಾಂಡ್‌ ಆಪ್‌ ಇಂಡಿಯಾ ಯೋಜನೆ ಸೌಲಭ್ಯ
  10. ಹೊಸ ಉದ್ಯೋಗಾವಕಾಶಕ್ಕೆ ಸಹಾಯ

ಇನ್ನೂ ಹತ್ತು ಹಲವಾರು ಯೋಜನೆಗಳು ಇ ಶ್ರಮ ಯೋಜನೆಯ ವ್ಯಾಪ್ತಿಗೆ ಒಳಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *