ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗೃಹ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದಿದ್ದರು. ಕೆಂಪಣ್ಣನವರ ಪತ್ರಕ್ಕೆ ಕಾರ್ಯಾಲಯ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ಅವರೊಂದಿಗೆ ಚರ್ಚೆ ನಡೆಸಲು ದೆಹಲಿಯಿಂದ ಒಬ್ಬ ಅಧಿಕಾರಿಯನ್ನು ಕಳಿಸಿದೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ 40% ಕಮಿಷನ್ ಆರೋಪಕ್ಕೆ ಸಂಬಂಧಿಸಿ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದೆ. ಕಳೆದ ಶುಕ್ರವಾರ ಕೆಂಪಣ್ಣ ಅವರಿಗೆ ಕೇಂದ್ರ ಗೃಹ ಇಲಾಖೆಯಿಂದ ಫೋನ್ ಕರೆ ಬಂದಿತ್ತು. ಬೆಂಗಳೂರಿನ ಕಚೇರಿಗೆ ಆಗಮಿಸಿ ದಾಖಲೆಗಳನ್ನು ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು(ಜೂನ್ 28) ಬೆಂಗಳೂರು ಕಚೇರಿಗೆ ತೆರಳಿ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡಲಿದ್ದಾರೆ.
ಈ ಕುರಿತು ಕೆಂಪಣ್ಣ “ಶುಕ್ರವಾರ ಕೇಂದ್ರ ಗೃಹ ಇಲಾಖೆಯ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಕರೆ ಮಾಡಿದ್ದರು. ರಾಜ್ಯ ಸರ್ಕಾರದ ಬಗ್ಗೆ ಮಾಡಲಾಗಿದ್ದ 40% ಕಮಿಷನ್ ಆರೋಪದ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದರು. ಆದರೆ ವೈಯಕ್ತಿಕ ಕಾರಣದಿಂದ ನಾನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಮಾಹಿತಿಯನ್ನು ನೀಡುತ್ತೇವೆ. ಆದರೆ ಎಲ್ಲ ದಾಖಲೆ ನೀಡಲು ಸಾಧ್ಯವಿಲ್ಲ ಎಂದರು.
ಪ್ರಧಾನಮಂತ್ರಿ ಕಾರ್ಯಾಲಯ ಕರೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಂಪಣ್ಣ, ದಾಖಲೆ ನೀಡಿರುವ ಗುತ್ತಿಗೆದಾರರಿಗೆ ಈಗಾಗಲೇ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ತನಿಖೆ ಮಾಡಿದರೆ ಮಾತ್ರ ಸಾಕ್ಷಿ ನೀಡುತ್ತೇವೆ. ಇಲ್ಲದಿದ್ದರೆ ಮಾಹಿತಿ ಮಾತ್ರ ನೀಡುತ್ತೇವೆ. ಗೃಹ ಸಚಿವಾಲಯ ಎಂದು ಹೇಳಿದ್ದಾರೆ. ಅವರು ಯಾವ ದಾಖಲೆಗಳನ್ನ ಹೇಳ್ತಾರೋ ಆ ದಾಖಲೆಗಳನ್ನ ನೀಡುತ್ತೇವೆ ಎಂದರು.
ರಾಜ್ಯದಲ್ಲಿ ಪ್ರತಿ ಕಾಮಗಾರಿಗೆ 40% ಕಮಿಷನ್ ನೀಡಬೇಕು. ಇದರಿಂದ ಗುಣಮಟ್ಟದ ಕಾಮಗಾರಿ ಮಾಡಲು ಆಗುತ್ತಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ರಾಜಕಾರಣಿಗಳು, ಅಧಿಕಾರಿಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.
40% ಕಮಿಷನ್ ಆರೋಪ ರಾಜ್ಯಾದ್ಯಂತ ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಹೋರಾಟವನ್ನು ನಡೆಸಿದ್ದವು. ಪರಿಣಾಮ ಈ ಆರೋಪದಿಂದ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣವೂ ಭಾರೀ ಸದ್ದು ಮಾಡಿತ್ತು. ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆ ನೀಡಬೇಕಾಗಿ ಬಂದಿತು. ಈ ನಡುವೆ ಕೇಂದ್ರ ಗೃಹ ಇಲಾಖೆಯಿಂದ ಕೆಂಪಣ್ಣ ಅವರಿಗೆ ಕರೆ ಮಾಡಿ ದಾಖಲೆ ನೀಡುವಂತೆ ಕೇಳಿಕೊಂಡಿರುವುದು ಮುಂದಿನ ವಿದ್ಯಮಾನಗಳು ಕುತೂಹಲ ಮೂಡಿಸಿವೆ.