ಕರಾವಳಿಯ ಮೂರು ಬೀಚ್‍ಗಳ ದತ್ತು ಪಡೆದ ಕೇಂದ್ರ ಸರ್ಕಾರ

  • ಕಡಲ ತೀರಗಳ ಸ್ವಚ್ಛತಾ ಕಾರ್ಯಕ್ರಮದಡಿ ಕುಂದಾಪುರದ ಕೋಡಿ, ಸುರತ್ಕಲ್‍ನ ಇಡ್ಯಾ, ಗೋಕರ್ಣ ಬೀಚ್‍ಗಳು ಆಯ್ಕೆ 

 

ಉಡುಪಿ:  ಪಡುಬಿದ್ರಿ  ಬೀಚ್‌ಗೆ ಪ್ರತಿಷ್ಠಿತ ಬ್ಲ್ಯೂಫ್ಲಾಗ್‌ ಪ್ರಮಾಣಪತ್ರ ದೊರೆತ ಬೆನ್ನಲ್ಲೇ ಕುಂದಾಪುರದ ಕೋಡಿ ಬೀಚ್‌ಗೂ ಬ್ಲ್ಯೂಫ್ಲಾಗ್‌ ಮಾನ್ಯತೆ ಸಿಗುವ ಕಾಲ ಸನ್ನಿಹಿತವಾಗುತ್ತಿದೆ. ಈ ಸಂಬಂಧ ಕೇಂದ್ರ ಸರ್ಕಾರ ಕರಾವಳಿ ಜಿಲ್ಲೆಗಳ ಮೂರು ಬೀಚ್‌ಗಳನ್ನು ದತ್ತು ತೆಗೆದುಕೊಂಡಿದ್ದು, ಅಭಿವೃದ್ಧಿಗೆ ಮುಂದಾಗಿದೆ.

ಕೇಂದ್ರ ಸರ್ಕಾರ ಕಡಲ ತೀರಗಳ ಸ್ವಚ್ಛತಾ ಕಾರ್ಯಕ್ರಮದಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಡಿ, ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ಇಡ್ಯಾ, ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಬೀಚ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದು, ಎಕಾಲಜಿ ಅಂಡ್ ಎನ್ವಿರಾನ್‌ಮೆಂಟ್ ಇಲಾಖೆಯಡಿ ಕಾರ್ಯ ನಿರ್ವಹಿಸುವ ಎಂಪ್ರಿ (ಎನ್ವಿರಾನ್‌ಮೆಂಟಲ್‌ಮ್ಯಾನೇಜ್‌ಮೆಂಟ್‌ ಅಂಡ್‌ ಪಾಲಿಸಿ ರಿಸರ್ಚ್‌ ಇನ್‌ಸ್ಟಿಟ್ಯೂಟ್‌) ಸಂಸ್ಥೆಗೆ ಬೀಚ್‌ಗಳನ್ನು ಸ್ವಚ್ಛಗೊಳಿಸುವ ಜವಾಬ್ದಾರಿ ವಹಿಸಿದೆ.

ಈ ಮೂರು ಬೀಚ್‌ಗಳಿಗೆ 2ನೇ ಹಂತದಲ್ಲಿ ಬ್ಲ್ಯೂಫ್ಲಾಗ್ ಪ್ರಮಾಣ ಪತ್ರ ಸಿಗಬೇಕು, ಕರಾವಳಿಯ ಕಡಲ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು ಎಂಬುದು ಸರ್ಕಾರದ ಉದ್ದೇಶ. ಅದಕ್ಕೆ ಪೂರ್ವಭಾವಿಯಾಗಿ ಬೀಚ್‌ಗಳ ಸ್ವಚ್ಛತೆ ಹಾಗೂ ನಿರ್ವಹಣೆಗೆ ಎಂಪ್ರಿ ಸಂಸ್ಥೆಗೆ ನಿರ್ಧಿಷ್ಟ ಅನುದಾನ ಬಿಡುಗಡೆ ಮಾಡಿರುವ ಕೇಂದ್ರ, ಪ್ರತಿ ಬೀಚ್‌ನ ಸ್ವಚ್ಛತೆ ಹಾಗೂ ನಿರ್ವಹಣೆಗೆ ತಲಾ ಇಬ್ಬರು ಸಿಬ್ಬಂದಿಯನ್ನೂ ನಿಯೋಜಿಸಿದೆ.

ಬ್ಲೂಫ್ಲಾಗ್‌ ಮಾನ್ಯತೆಗೆ ನಿಗದಿಯಾದ ಬೀಚ್‌ಗಳ ಸ್ಥಳವನ್ನು ಪ್ರತಿದಿನ ಸ್ವಚ್ಛಗೊಳಿಸುವುದು, ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಕಡಲ ತೀರಗಳ ಸ್ವಚ್ಛತೆ ಕುರಿತು ಅರಿವು ಮೂಡಿಸುವುದು, ಮುಖ್ಯವಾಗಿ ಹಸಿರೀಕರಣಕ್ಕೆ ಒತ್ತು ನೀಡುವುದು ಸಿಬ್ಬಂದಿಯ ನಿತ್ಯದ ಕೆಲಸ.

ಮೊದಲ 6 ತಿಂಗಳು ಅರಣ್ಯ ಮತ್ತು ಪರಿಸರ ಇಲಾಖೆ ನಿರ್ವಹಣೆ ಹಾಗೂ ಸ್ವಚ್ಛತಾ ಕಾರ್ಯ ನಡೆಯಲಿದೆ. ಬ್ಲ್ಯೂಫ್ಲಾಗ್ ಮಾನ್ಯತೆ ಸಿಗುವ ಹಂತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ದೊಡ್ಡ ಪ್ರಮಾಣದಲ್ಲಿ ಅನುದಾನ ಬಿಡುಗಡೆಯಾಗಲಿದ್ದು, ಅಂತರ ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಬೀಚ್‌ಗಳ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಅರಣ್ಯ ಇಲಾಖೆ (ಪರಿಸರ) ಜಿಲ್ಲಾ ಪ್ರಾದೇಶಿಕ ನಿರ್ದೇಶಕ ಡಾ.ವೈ.ಕೆ. ದಿನೇಶ್ ಮಾಹಿತಿ ನೀಡಿದರು.

ಈಗಾಗಲೇ ಬೀಚ್‌ ದತ್ತು ಸ್ವೀಕಾರ ಯೋಜನೆ ಅನುಷ್ಠಾನಕ್ಕೆ ಸಿದ್ಧತೆಗಳು ಅಂತಿಮಗೊಂಡಿದ್ದು, ನ.10ರಂದು ದತ್ತು ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ಅರಣ್ಯ ಇಲಾಖೆ (ಪರಿಸರ) ಜಿಲ್ಲಾ ಪ್ರಾದೇಶಿಕ ನಿರ್ದೇಶಕ ಡಾ.ದಿನೇಶ್‌ ಮಾಹಿತಿ ನೀಡಿದರು.

Donate Janashakthi Media

Leave a Reply

Your email address will not be published. Required fields are marked *