ಬೆಂಗಳೂರು: ರಾಜ್ಯದಲ್ಲಿ ಅತ್ಯಂತ ಸಮರ್ಪಕವಾಗಿ ಕಾನೂನು ಸುವ್ಯವಸ್ಥೆ ಕಾಪಾಡಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಗೃಹ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು ರಾಜ್ಯದಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ಪೊಲೀಸರಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಪೊಲೀಸರು ಹೆಚ್ಚಾಗಿ ಜನಸ್ನೇಹಿಯಾಗಿ ಇರಬೇಕಾಗಿದೆ. ಭೂ ಮಾಫಿಯಾದಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಬೇಕೆಂದು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇದನ್ನು ಓದಿ: ಸೆಪ್ಟೆಂಬರ್ ಮೊದಲ ವಾರ ವಿಧಾನಸಭಾ ಅಧಿವೇಶನ ಸಾಧ್ಯತೆ
ಅಪರಾಧ ಪ್ರಕರಣ ತಡೆಯುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ. ಅಪರಾಧವನ್ನು ಸಶಕ್ತವಾಗಿ ಸದೆಬಡಿಯಬೇಕು. ಭೂವಿವಾದದ ಹಿನ್ನೆಲೆಯಲ್ಲಿ ಸಂಭವಿಸುವ ಅಪರಾಧ ಪ್ರಕರಣಗಳನ್ನು ತಡೆಗಟ್ಟಬೇಕು. ಜೂಜು, ಡಾರ್ಕ್ ವೆಬ್ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳನ್ನು ಸಂಪೂರ್ಣ ನಾಶಕ್ಕೆ ಮುಂದಾಗಬೇಕಿದೆ. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚಿಸಿದರು.
‘ಹಿಂಸೆಗೆ ಹಿಂಸೆಯೇ ಮದ್ದಲ್ಲವೆಂದು ಖಂಡಿತವಾಗಿ ನಾನೂ ಒಪ್ಪುತ್ತೇನೆ. ಆದರೆ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಾತುಗಳು ನೋವಿನಿಂದ ಹೇಳಿದ ಮಾತಾಗಿತ್ತು ಹೊರತು ಪ್ರಚೋದನಾಕಾರಿ ಹೇಳಿಕೆ ಅಲ್ಲ. ಕಾಂಗ್ರೆಸ್ ಸರಕಾರದ ಆಡಳಿತ ಸಂದರ್ಭದಲ್ಲಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಹಾಗೂ ದೌರ್ಬಲ್ಯಗಳನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡರು.
ಕೋವಿಡ್ 19 ಮೂರನೇ ಅಲೆ ಎದುರಾಗುವ ಸಂಭವಗಳು ಇರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮವಹಿಸಬೇಕು. ರಾಜ್ಯದ ಗಡಿ ಜಿಲ್ಲೆಗಳಲ್ಲಿ ಹೆಚ್ಚು ನಿಗಾವಹಿಸಬೇಕಿದೆ. ಹಿರಿಯ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಗಡಿ ಚೆಕ್ ಪೋಸ್ಟ್ ಗಳ ತಪಾಸಣೆ ನಡೆಸಬೇಕು ಎಂದು ಚರ್ಚೆಗಳನ್ನು ನಡೆಸಲಾಗಿದೆ.
ಇದನ್ನು ಓದಿ: ಸಚಿವರಿಗೆ ಖಾತೆಗಳು ಹಂಚಿಕೆ: ಸಿಎಂಗೆ ಹಣಕಾಸು, ಆರಗ ಜ್ಞಾನೇಂದ್ರಗೆ ಗೃಹ, ಸಿ.ಸಿ.ಪಾಟೀಲ ಲೋಕೋಪಯೋಗಿ
ಪೊಲೀಸ್ ವ್ಯವಸ್ಥೆಯಲ್ಲಿ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲು ಬಗ್ಗೆಯೂ, ವಿಧಿ ವಿಜ್ಞಾನ ಪ್ರಯೋಗಾಲಯವನ್ನು ಉನ್ನತೀಕರಿಸುವುದು ಸೇರಿದಂತೆಕರ್ನಾಟಕ ಮೀಸಲು ಪೊಲೀಸ್ ಪಡೆ, ಅಗ್ನಿಶಾಮಕ ವಿಭಾಗಕ್ಕೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಪೊಲೀಸ್ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲಾಗುವುದು, ಇಲಾಖೆಯ ದಕ್ಷತೆಯನ್ನು ಹೆಚ್ಚಿಸುವುದು ಸರ್ಕಾರದ ಬದ್ಧತೆಯಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಇಲಾಖೆಯ ಸುಧಾರಣೆ ಮತ್ತು ಅತ್ಯುತ್ತಮ ಕಾರ್ಯ ನಿರ್ವಹಣೆಗೆ ಬೆಂಬಲ ನೀಡುವಂತೆ ಚರ್ಚಿಸಲಾಗಿದೆ. ಇಲಾಖೆಯು ಅಪರಾಧ ಪ್ರಕರಣಗಳ ಶೀಘ್ರ ತನಿಖೆಗೆ ಆದ್ಯತೆ ನೀಡಬೇಕು. ಇದರಲ್ಲಿ ವಿಳಂಬ ಧೋರಣೆ ಅನುಸರಿಸುವಂತಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಒಳಾಡಳಿತ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.