ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಅಥ್ಲೀಟ್‌ಗಳ ಅಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಕೋಚ್‌ಗಳು ದೂರಿದ್ದಾರೆ.
‘ಟ್ರ್ಯಾಕ್‌ನ ಮಧ್ಯಭಾಗದಲ್ಲಿರುವ ಹುಲ್ಲಿನ ಅಂಕಣವನ್ನು ಹೊಸದಾಗಿ ಸಜ್ಜುಗೊಳಿಸುವ ಕೆಲಸ ನಡೆಯುತ್ತಿದೆ.’ಟ್ರ್ಯಾಕ್‌ನ ಸುತ್ತಲೂ 20 ರಿಂದ 30 ಲೋಡ್‌ಗಳಷ್ಟು ಮರಳು ರಾಶಿ ಹಾಕಿದ್ದಾರೆ. ಇದರಿಂದ ಮಳೆ ನೀರು ಸರಿಯಾಗಿ ಹರಿದುಹೋಗದೆ ಟ್ರ್ಯಾಕ್ ಮೇಲೆ ನಿಲ್ಲುತ್ತಿದೆ. ಸತತ ಮಳೆಯಿಂದಾಗಿ ಅಭ್ಯಾಸ ಇಲ್ಲದೆ ಅಥ್ಲೀಟ್‌ಗಳ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ.
ಹಾಳಾದ ಸಿಂಥೆಟಿಕ್ ಟ್ರಾಕ್ : ಸಾಧಾರಣ ಮಳೆಗೆಲ್ಲಾ ಕಂಠೀರವ ಸ್ಟೇಡಿಯಂ ಜಲಾವೃತಗೊಳ್ಳುತ್ತಿತ್ತು. ಅದನ್ನು ತಡೆಯುವುದಕ್ಕಾಗಿ, ಖೇಲೋ ಇಂಡಿಯಾಗಾಗಿ ಸುಮಾರು 5.80 ಕೋಟಿ ಖರ್ಚು ಮಾಡಿ ಸಿಂಥೆಟಿಕ್ ಟ್ರಾಕ್
ಅಳವಡಿಸಲಾಗಿತ್ತು. ಐದಾರು ವರ್ಷ ಬಾಳಿಕೆ ಬರತ್ತೆ ಅಭ್ಯಾಸ ಚನ್ನಾಗಿ ಮಾಡಬಹುದು ಎಂದು ಕ್ರೀಡಾಪಟುಗಳು ಕನಸು ಕಾಣುತ್ತಿದ್ದರು. ಆದ್ರೆ, ಒಂದೇ ಮಳೆಗೆ ಹಾಳಾಗಿ, ಮೇಲ್ಮೈ ಭಾಗ ಕಿತ್ತು ಬಂದಿದೆ. ಅಮೆರಿಕದಿಂದ ಇದನ್ನು ತರಿಸಿದ್ದು ಎಂದು ಕ್ರೀಡಾ ಸಚಿವ ನಾರಾಯಣಗೌಡ ಜಂಭ ಕೊಚ್ಚಿಕೊಂಡಿದ್ದರು. ಈಗ ಮಳೆಗೆ ಅದು ಕಿತ್ತು ಹೋಗಿದೆ. ಸಚಿವರು ಈಗ ಸಂಪರ್ಕಕ್ಕೆ ಸಿಗುತ್ತಿಲ್ಲ.
ಖೇಲೋ ಇಂಡಿಯಾಗಾಗಿ ಕೋಟಿ ಕೋಟಿ ಹಣ ಖರ್ಚು ಮಾಡಲಾಗಿತ್ತು. ಕ್ರೀಡಾಂಗಣದ ಒಳಗೆ ರಸ್ತೆ, ಚರಂಡಿ ರಿಪೇರಿ ಹೀಗೆ ಹಲವು ಕಾಮಗಾರಿಗಳಿಗೆ ಹಣ ಖರ್ಚು ಮಾಡಲಾಗಿತ್ತು. ಈಗ ಕ್ರೀಡಾಂಗಣ ತುಂಬಾ ನೀರು ತುಂಬಿಕೊಂಡಿದೆ, ಸಿಂಥೆಟಿಕ್ ಟ್ರಾಕ್ ಕಿತ್ತು ಹೋಗಿದೆ, ರಸ್ತೆಗೆ ಹಾಕಲಾಗಿದ್ದ ಟಾರ್ ಕೊಚ್ಚಿ ಹೋಗಿ, ಜಲ್ಲಿಕಲ್ಲುಗಳು ಮಾತ್ರ ಉಳಿದಿವೆ. ಮೊನ್ನೆ ಪ್ರಾಕ್ಟೀಸ್‌ಗೆ ಬಂದಿದ್ದ ಕೋಚ್ ಹಾಗೂ ಅವ್ರ ಪುತ್ರಿ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದರು. ಇಲ್ಲಿ ಆಗಿರೋ ಅವಾಂತರಗಳಿಂದ ಇನ್ನೆಷ್ಟು ಕ್ರೀಡಾಪಟುಗಳು ಆಸ್ಪತ್ರೆ ಸೇರ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಕೋಟ್ಯಂತರ ರೂಪಾಯಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂಬುದು ಕ್ರೀಡಾಪಟುಗಳ ಆರೋಪವಾಗಿದೆ.
ಖೇಲೋ ಇಂಡಿಯಾ ಹೆಸರಿನಲ್ಲಿ ನಡೆದ ಕಾಮಗಾರಿಗಳಲ್ಲಿ ಕೋಟಿ ಕೋಟಿ ರೂ ಗುಳುಂ ಮಾಡಲಾಗಿದೆ. ಕಳಪೆ ಕಾಮಗಾರಿ ಮಾಡಲಾಗಿದೆ. 40% ಕಮೀಷನ್ ಕಾಮಗಾರಿಯಲ್ಲಿ ಇದೂ ಒಂದು ಇರಬೇಕು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.