ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಟಿ.ಎಸ್. ಲೋಹಿತಾಶ್ವ ಅವರು ಇಂದು(ನವೆಂಬರ್ 08) ನಿಧನರಾಗಿದ್ದಾರೆ. ಹಲವು ದಿನಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಐಸಿಯುನಲ್ಲಿ ಇರಿಸಲಾಗಿತ್ತು.
ಕೆಲವು ದಿನಗಳ ಹಿಂದೆ ಅವರಿಗೆ ವಯೋಸಹಜವಾಗಿ ಕಾಣಿಸಿಕೊಂಡ ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆರೋಗ್ಯದಲ್ಲಿ ಸುಧಾರಣೆ ಕಂಡುಬಂದು ಚೇತರಿಸಿಕೊಳ್ಳಲಿದ್ದಾರೆ ಎಂದಿರುವಾಗಲೇ, ಅವರಿಗೆ ಹೃದಯಾಘಾತ ಸಂಭವಿಸಿತು. ನಂತರ ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಸುಮಾರು ಒಂದು ತಿಂಗಳ ಕಾಲ ಅವರಿಗೆ ಚಿಕಿತ್ಸೆ ನೀಡಲಾಯಿತು. ಆದರೆ ಇಂದು ಚಿಕಿತ್ಸೆ ಫಲಕಾರಿ ಆಗದೇ ಅವರು ಕೊನೆಯುಸಿರು ಎಳೆದಿದ್ದಾರೆ.
ಇಂದು ರಾತ್ರಿ 7.30ರ ನಂತರ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಕ್ಕೆ ಅವರ ಪಾರ್ಥೀವ ಶರೀರ ಕರೆದೊಯ್ಯಲಾಗುತ್ತದೆ. ರಾತ್ರಿ 11 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಇರುತ್ತದೆ. ನಾಳೆ (ನವೆಂಬರ್ 9) ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ.
ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಡಾ. ರಾಜ್ಕುಮಾರ್, ಅಂಬರೀಷ್, ವಿಷ್ಣುವರ್ಧನ್, ಶಂಕರ್ನಾಗ್ ಮುಂತಾದವರ ಜೊತೆ ವಿಭಿನ್ನ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕರು ಸಂಪಾತ ಸೂಚಿಸಿದ್ದಾರೆ.
ಲೋಹಿತಾಶ್ವ ಅವರ ಪತ್ನಿ ವತ್ಸಲಾ. ಮೂವರು ಮಕ್ಕಳಿದ್ದು, ಅವರಲ್ಲಿ ಕನ್ನಡ ಚಿತ್ರರಂಗದಲ್ಲಿ ಉತ್ತಮ ಖಳನಟನಾಗಿ ಗುರುತಿಸಿಕೊಂಡಿರುವ ಶರತ್ ಲೋಹಿತಾಶ್ವ ಕೂಡ ಒಬ್ಬರು.
ಅಭಿಮನ್ಯು, ಎಕೆ 47, ಅವತಾರ ಪುರುಷ, ಚಿನ್ನ, ಹೊಸ ನೀರು, ಗಜೇಂದ್ರ, ವಿಶ್ವ, ಪ್ರತಾಪ್, ಪೊಲೀಸ್ ಲಾಕಪ್, ರೆಡಿಮೇಡ್ ಗಂಡ, ಸ್ನೇಹಲೋಕ, ಸುಂದರಕಾಂಡ, ಸಿಂಹದ ಮರಿ, ಮೂರು ಜನ್ಮ, ಸಾಂಗ್ಲಿಯಾನ, ಟೈಮ್ ಬಾಂಬ್, ಲಾಕಪ್ ಡೆತ್, ಸಂಭವಾಮಿ ಯುಗೇ ಯುಗೇ, ರಣಚಂಡಿ, ಸಮಯದ ಗೊಂಬೆ, ಸಂಗ್ರಾಮ, ನ್ಯೂ ಡೆಲ್ಲಿ, ಸಾರಥಿ ಸೇರಿದಂತೆ ಹಲವು ಚಿತ್ರಗಳು ಸೇರಿದಂತೆ, ರಂಗಭೂಮಿ ನಾಟಕಗಳು ಮತ್ತು ದೂರದರ್ಶನ ಧಾರಾವಾಹಿಗಳಲ್ಲಿಯೂ ಲೋಹಿತಾಶ್ವ ನಟಿಸಿದ್ದಾರೆ.
ತುಮಕೂರಿನ ತೊಂಡಗೆರೆ ಗ್ರಾಮದವರಾದ ಲೋಹಿತಾಶ್ವ ಅವರು ಅಲ್ಲಿಯೇ ಅವರು ಪ್ರಾಥಮಿಕ ಶಿಕ್ಷಣ ಪಡೆದರು. ತುಮಕೂರಿನಲ್ಲಿ ಹೈಸ್ಕೂಲ್ ವರೆಗೆ ಓದಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಆರಂಭಿಸಿದರು. 33 ವರ್ಷಗಳ ಕಾಲ ಅವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ವಿದ್ಯಾರ್ಥಿ ದೆಸೆಯಿಂದಲೇ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ಲೋಹಿತಾಶ್ವ ಅವರು, ಚಿತ್ರರಂಗ ಪ್ರವೇಶಿಸಿದರು. ಪೋಷಕ ಪಾತ್ರಗಳಲ್ಲಿ ಅವರು ಹೆಚ್ಚಾಗಿ ಗುರುತಿಸಿಕೊಂಡವರು. ಖಳನಟನಾಗಿ ಹಲವು ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ಲೋಹಿತಾಶ್ವ ಅವರು, ಮುಖ್ಯಮಂತ್ರಿ ಪಾತ್ರವನ್ನು ಹಲವಾರು ಸಿನಿಮಾಗಳಲ್ಲಿ ಮಾಡಿದ್ದರು.