87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ʼಮನೆಗೊಂದು ಕೋಳಿ ಮತ್ತು ಊರಿಗೊಂದು ಕುರಿ ಸಂಗ್ರಹʼ ಅಭಿಯಾನ

ಮಂಡ್ಯ: ’87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧಿಸಿರುವುದನ್ನು ವಿರೋಧಿಸಿ ‘ಮನೆಗೊಂದು ಕೋಳಿ ಮತ್ತು ಊರಿಗೊಂದು ಕುರಿ ಸಂಗ್ರಹ’ ಅಭಿಯಾನಕ್ಕೆ ಚಾಲನೆ ನೀಡಿ, ಸಮ್ಮೇಳನದಲ್ಲಿ ಮಾಂಸಪ್ರಿಯರಿಗೆ ಅಡುಗೆ ಮಾಡಿಸುತ್ತೇವೆ’ ಎಂದು ಸಾಹಿತಿ ರಾಜೇಂದ್ರ ಪ್ರಸಾದ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ಪ್ರಾತಿನಿಧ್ಯವಿರುಬೇಕೆಂಬುದು ನಮ್ಮ ಉದ್ದೇಶ. ತಂಬಾಕು, ಮದ್ಯಪಾನ ಹಾಗೂ ಮಾಂಸಾಹಾರ ನಿಷೇಧಿಸಲಾಗಿದೆ ಎಂಬ ನಿಬಂಧನೆಯನ್ನು ಖಂಡಿಸಿಯೇ ಇದು ಪ್ರಾರಂಭವಾಗಿದ್ದು ಎಂಬುದನ್ನು ಅರಿತುಕೊಳ್ಳಬೇಕು’ ಎಂದರು.

‘ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ನಿಷೇಧವಿಲ್ಲ. ಆದರೂ ಅದನ್ನು ಕೀಳಾಗಿ ಕಾಣುತ್ತಿರುವುದನ್ನು ಹೋಗಲಾಡಿಸುವ ಹಾಗೂ ಆಹಾರದಲ್ಲಿ ಸಮಾನತೆ ತರುವ ಪ್ರಯತ್ನ ನಮ್ಮದು. ಸಾರ್ವಜನಿಕರ ಹಣವನ್ನು ಸಮ್ಮೇಳನದಲ್ಲಿ ಬಳಸುತ್ತಿದ್ದು, ಒಂದು ಮೊಟ್ಟೆ ಹಾಗೂ ಒಂದು ತುಂಡು ಮಾಂಸ ನೀಡಲು ಸಮಸ್ಯೆ ಏನಿದೆ’ ಎಂದು ಪ್ರಶ್ನಿಸಿದರು.

ಈಗಾಗಲೇ ರಾಜ್ಯದಾದ್ಯಂತ ಸಮಾನ ಮನಸ್ಕರು ಕುರಿ, ಕೋಳಿ ಕೊಡುತ್ತೇವೆ ಎಂದು ಮುಂದೆ ಬಂದಿದ್ದಾರೆ. ಸುಮಾರು 5-6 ಟನ್ ಕೋಳಿ ಸಂಗ್ರಹವಾಗುವ ನಿರೀಕ್ಷೆಯಿದೆ. ಇದರಿಂದ 50 ಸಾವಿರದಿಂದ 1 ಲಕ್ಷ ಜನರಿಗೆ ಮಾಂಸದ ಊಟ ಬಡಿಸಬಹುದಾಗಿದೆ ಎಂದರು.

ಒಂದು ವೇಳೆ ಸರ್ಕಾರವೇ ಸಾಹಿತ್ಯ ಸಮ್ಮೇಳನದ ಆಹಾರ ಸಮಿತಿ ಮೂಲಕ ಮಾಂಸಾಹಾರ ನೀಡಲು ಮುಂದೆ ಬಂದರೆ ನಾವು ಸಂಗ್ರಹಿಸಿರುವ ಸಾಮಗ್ರಿಗಳನ್ನು ಸಮಿತಿಗೆ ನೀಡುತ್ತೇವೆ. ಇಲ್ಲದಿದ್ದರೆ ನಾವೇ ಮಾಂಸಾಹಾರ ತಯಾರಿಸಿ ಸಾಹಿತ್ಯ ಸಮ್ಮೇಳನದ ಮೈದಾನದಲ್ಲೇ ವಿತರಿಸುತ್ತೇವೆ ಎಂದರು.

ಇದನ್ನೂ ಓದಿ : ಉತ್ತರ ಕರ್ನಾಟಕ ಅಭಿವೃದ್ಧಿಗೆ ಔದ್ಯೋಗಿಕ ಕ್ರಾಂತಿ ಆಗಬೇಕು : ಶಾಸಕ ಲಕ್ಷ್ಮಣ್ ಸವದಿ

ಕರುನಾಡು ಸೇವಕರ ಸಂಘಟನೆಯ ಎಂ.ಬಿ.ನಾಗಣ್ಣಗೌಡ, ‘ಸಮ್ಮೇಳನಕ್ಕೆ ಹಾಕಿರುವ ಬ್ರಾಹ್ಮಣ್ಯದ ಜನಿವಾರವನ್ನು ಬಾಡೂಟದ ಮೂಲಕ ತೆರವುಗೊಳಿಸುವ ಪ್ರಯತ್ನ ಮಾಡುತ್ತೇವೆ’ ಎಂದರು. ಸಾಮಾಜಿಕ ಕಾರ್ಯಕರ್ತ ಸಂತೋಷ್ ಮಾತನಾಡಿದರು. ಲಕ್ಷ್ಮಣ್ ಚೀರನಹಳ್ಳಿ, ಸಿ. ಕುಮಾರಿ, ಶಿವಶಂಕರ್, ಧನುಷ್, ಮನು ಇದ್ದರು.

ಇದನ್ನೂ ನೋಡಿ : ಕನ್ನಡ ಸಾಹಿತ್ಯ ಸಮ್ಮೇಳನ |ಮಂಡ್ಯದ ಪ್ರೀತಿಯ ನಾಟಿ ಕೋಳಿ ಸಾರುಮುದ್ದೆ ನೀಡಬೇಕು – ಎಂ.ಜಿ.ಹೆಗಡೆ Janashakthi Media

Donate Janashakthi Media

Leave a Reply

Your email address will not be published. Required fields are marked *