ಬೆಂಗಳೂರು: ಜನವರಿ 19ರಂದು ಪ್ರಧಾನಿ ನರೇಂದ್ರ ಮೋದಿ ಕಲಬುರಗಿ ಜಿಲ್ಲೆ ಭೇಟಿ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಶಾಸಕರು, ಮಂತ್ರಿಗಳು ಮಾಡುವ ಕೆಲಸವನ್ನು ಪ್ರಧಾನಿಯವರಿಂದ ಮಾಡಿಸಲಾಗುತ್ತಿದೆ ಇದೆಂಥ ವಿಪರ್ಯಾಸವೆಂದು ಹೇಳಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ಕಾರ್ಯಕ್ರಮದೊಂದಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ಮಾಡಲು ಬರುತ್ತಿದ್ದಾರೆ.
ಶಾಸಕ ಅಥವಾ ಮಂತ್ರಿಗಳ ನೇತೃತ್ವದಲ್ಲಿ ನಡೆಯುವಂತಹ ಕಾರ್ಯಕ್ರಮಗಳಾಗಿವೆ. ಕಂದಾಯ ಗ್ರಾಮ ಮಾಡಬೇಕೆಂದು ಕಾಂಗ್ರೆಸ್ ಸರ್ಕಾರದಲ್ಲೇ ಆಗಿತ್ತು. ಬಿಜೆಪಿ ಸರ್ಕಾರದ ಸಾಧನೆ ಶೂನ್ಯವಾಗಿದೆ ಎಂದು ತಿಳಿಸಿದರು.
ಬಿಜೆಪಿ ನಾಯಕರಿಗೆ ಬಸವನಗೌಡ ಯತ್ನಾಳ್ ಬಾಯಿ ಮುಚ್ಚಿಸಲು ಆಗುತ್ತಿಲ್ಲ. ಮುಖ್ಯಮಂತ್ರಿ ಕಚೇರಿಯಲ್ಲಿ ಹನಿಟ್ರ್ಯಾಪ್ ಆಗಿರುವುದು ನಿಜಾನಾ, ಸುಳ್ಳಾ? ಹೈಕೋರ್ಟ್ನಲ್ಲಿ ಶಾಸಕರು ಜಾಮೀನು ಪಡೆದಿದ್ದು, ನಿಜಾನಾ, ಸುಳ್ಳಾ? ಇದು ಲಂಚ, ಮಂಚದ ಸರ್ಕಾರವಲ್ಲವಾ? ಲಂಚ, ಮಂಚದ ಸರ್ಕಾರ ಅಂದಾಗ ನನ್ನ ಮೇಲೆ ಮುಗಿ ಬಿದ್ದಿದ್ದರು. ಸ್ಯಾಂಟ್ರೋ ರವಿ ಪಿಂಪ್ ಎನ್ನುವುದು ನಿಜಾನಾ ಸುಳ್ಳಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.