ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕನಕಪುರ ಕ್ಷೇತ್ರದಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ. ಡಿಕೆಶಿ ವಿರುದ್ಧ ತೊಡೆತಟ್ಟಿದ್ದ ಆರ್. ಅಶೋಕ್ಗೆ ತೀವ್ರ ಮುಖಭಂಗ ಉಂಟಾಗಿದೆ.
ಸುಮಾರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಡಿ.ಕೆ. ಶಿವಕುಮಾರ್ ಅವರು ಆರ್. ಅಶೋಕ್ ವಿರುದ್ಧ ಗೆಲುವು ದಾಖಲಿಸಿದ್ದಾರೆ. ಅಧಿಕೃತ ಘೊಷಣೆಯೊಂದೇ ಬಾಕಿ ಇದೆ. ಸತತ 7 ಗೆಲುವು ಸಾಧಿಸಿದ್ದ ಡಿ.ಕೆ.ಶಿವಕುಮಾರ್ ಸೋಲಿಸಲು ಬಿಜೆಪಿ ರಾಷ್ಟ್ರೀಯ ನಾಯಕರು ಶಪಥ ಮಾಡಿದಂತೆ ಈ ಚುನಾವಣೆ ಭಾಸವಾಗಿತ್ತು. ಆರ್.ಅಶೋಕ್ ಪದ್ಮನಾಭನಗರ ಕ್ಷೇತ್ರದ ಜತೆ ಕನಕಪುರ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಿದ್ದರು.
ಒಟ್ಟು 2,20,391 ಮತದಾರರನ್ನು ಹೊಂದಿರುವ ಕನಕಪುರ ಕ್ಷೇತ್ರದಲ್ಲಿ 1,09, 876 ಪುರುಷರು, 1,10,500 ಮಹಿಳಾ ಮತದಾರದ್ದರೆ, ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗರ 99,567 ವೋಟ್ ಇಲ್ಲಿದೆ. ದಲಿತ ಸಮುದಾಯದ 44 ಸಾವಿರ ಮತಗಳು, ಮುಸ್ಲಿಮರ 22,500, ಲಿಂಗಾಯತರ 18,500 ಮತಗಳು ಇವೆ. ಇನ್ನುಳಿದಂತೆ ಕುರುಬರು 5,600, ತಿಗಳರು 10,500, ಕ್ರೈಸ್ತರು 2,507, ಬೆಸ್ತರು 6000 & ಇತರೆ ಸಮುದಾಯದ 9400 ಮತದಾರರಿದ್ದರು. ಈ ಪೈಕಿ ಕನಕಪುರ ಮತದಾರರು ಮತ್ತೆ ಡಿಕೆಶಿಗೆ ಆಶೀರ್ವಾದ ಮಾಡಿದ್ದಾರೆ.
ಚುನಾವಣಾ ಫಲಿತಾಂಶದ ಸದ್ಯದ ಟ್ರೆಂಡ್ ಪ್ರಕಾರ ಕಾಂಗ್ರೆಸ್ 131 ಸ್ಥಾನಗಳಲ್ಲಿ ಮುಂದಿದ್ದರೆ, ಬಿಜೆಪಿ 131 ಮತ್ತು ಜೆಡಿಎಸ್ 21 ಹಾಗೂ ಇತರೆ 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಸ್ಪಷ್ಟಬಹುಮತದತ್ತ ಕಾಂಗ್ರೆಸ್ ದಾಪುಗಾಲು ಇಟ್ಟಿದ್ದು, ಸರ್ಕಾರ ರಚನೆ ಮಾಡುವುದು ಬಹುತೇಕ ಫಿಕ್ಸ್ ಆಗಿದೆ.