ಮೈಸೂರು: ಪ್ರಮುಖ ಕಾಮಗಾರಿಗಳಿಗೆ ಗುತ್ತಿಗೆ ನೀಡುವಾಗ ಶೇಕಡಾ 40 ರಷ್ಟು ಕಮಿಷನ್ ಭ್ರಷ್ಟಾಚಾರ ನಡೆಯುತ್ತಿರುವುದೇ ಕಾಮಗಾರಿಗಳು ಕಳಪೆಯಾಗಲು ಕಾರಣವಾಗುತ್ತಿದೆ. ಈ ಸಂಬಂಧ ನಿವೃತ್ತ ನ್ಯಾಯಧೀಶರ ನೇತೃತ್ವದಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, 2019ರ ಮೊದಲು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಶೇ.5ರಷ್ಟು ಕಮಿಷನ್ ಇತ್ತು. ನಂತರದ ದಿನಗಳಲ್ಲಿ ಅದು ಶೇ. 40ಕ್ಕೆ ಏರಿಕೆಯಾಗಿದೆ. ಅಲ್ಲದೆ, ಶೇ.15-16ರಷ್ಟು ತೆರಿಗೆಯನ್ನೂ ಪಾವತಿಸಬೇಕಿದೆ. ಸಾಲದ್ದಕ್ಕೆ ಬಿಲ್ ಪಾವತಿಸುವುದಕ್ಕೂ ಕಮಿಷನ್ ನೀಡಬೇಕಿದೆ. ಇನ್ನು ಉಳಿಯುವ ಶೇ.40-44 ರಷ್ಟು ಹಣದಲ್ಲಿ ಗುಣಮಟ್ಟದ ಕಾಮಗಾರಿ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಇದರೊಡನೆ ಸಣ್ಣಪುಟ್ಟ ಮೊತ್ತದ ಗುತ್ತಿಗೆ ಕಾಮಗಾರಿಗಳನ್ನೆಲ್ಲ ಪ್ಯಾಕೇಜ್ ವ್ಯವಸ್ಥೆ ಅಡಿಯಲ್ಲಿ ಹೊರ ರಾಜ್ಯದವರಿಗೆ ನೀಡಲಾಗುತ್ತಿದೆ. ಈ ಬಗ್ಗೆ ಶಾಸಕರೊಬ್ಬರನ್ನು ಪ್ರಶ್ನಿಸಿದಲ್ಲಿ, ಇಲ್ಲಿನ ಸಣ್ಣಪುಟ್ಟ ಗುತ್ತಿಗೆದಾರರಿಂದ ಸಣ್ಣ ಸಣ್ಣ ಪ್ರಮಾಣದಲ್ಲಿ ಕಮಿಷನ್ ಬರುತ್ತದೆ. ಆದರೆ ಒಂದೇ ಬಾರಿ ಪ್ಯಾಕೇಜ್ ಎಂಬಂತೆ ನೀಡಿದಲ್ಲಿ ಇಡುಗಂಟು ಬರುತ್ತದೆ ಎಂದು ನೇರವಾಗಿಯೇ ಹೇಳಿದ್ದಾರೆ.
ಯಾವುದೇ ಸರ್ಕಾರದ ಬಂದರೂ ಅಧಿಕಾರಿ ವರ್ಗ, ಜನಪ್ರತಿನಿಧಿಗಳ ಹಾದಿಯಾಗಿ ಕಮಿಷನ್ ಪಡೆಯುವ ಪ್ರಮಾಣ ಹೆಚ್ಚಾಗುತ್ತಿದೆ. ಇದರ ವಿರುದ್ಧ ಮಾರ್ಚ್ ತಿಂಗಳ ಕೊನೆಯ ವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಡಿ.ಕೆಂಪಣ್ಣ ತಿಳಿಸಿದರು.
ನಮ್ಮ ಪ್ರಮುಖ ಬೇಡಿಕೆಗಳಲ್ಲಿ ಭ್ರಷ್ಟಾಚಾರ ಕುರಿತು ತನಿಖೆ ನಡೆಯಬೇಕು, ಪ್ಯಾಕೇಜ್ ಪದ್ಧತಿ ರದ್ದುಗೊಳಿಸಬೇಕು, ಬಾಕಿ ಉಳಿಸಿಕೊಂಡಿರುವ ರೂ. 20 ಸಾವಿರ ಕೋಟಿಗಳನ್ನು ಗುತ್ತಿಗೆದಾರರಿಗೆ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಲಿದ್ದೇವೆ ಎಂದರು.
ಈ ಕುರಿತು ಪ್ರಧಾನಿ, ಮುಖ್ಯಮಂತ್ರಿಗಳಿಗೆ ತನಿಖೆಗೆ ಆಗ್ರಹಿಸಿ ಪತ್ರ ಬರೆದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಪತ್ರಿಕೆಗಳ ಮುಂದೆ ಬರಬೇಕಾಯಿತು. ಜೊತೆಗೆ, ಶೇ. 40 ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ ಎಂಬ ತಮ್ಮ ಆರೋಪವನ್ನು ಸಮಿತಿ ರಚಿಸಿ ತನಿಖೆ ನಡೆಸಿದರೆ ತಾವು ತಮ್ಮ ಆರೋಪ ಸಾಬೀತುಪಡಿಸಲು ಸಿದ್ಧ. ಅದಕ್ಕೆ ಸೂಕ್ತ ದಾಖಲೆಗಳೂ ನಮ್ಮ ಬಳಿಯಿವೆ ಎಂದು ಹೇಳಿದರು.
ಪ್ಯಾಕೇಜ್ ಗುತ್ತಿಗೆಗಳು ಭಾರೀ ಪ್ರಮಾಣದಲ್ಲಿರುತ್ತವೆ. ಈ ಕಾರಣ ಇಲ್ಲಿನ ಸಣ್ಣಪುಟ್ಟ ಗುತ್ತಿಗೆದಾರರಿಂದ ಭರಿಸಲು ಸಾಧ್ಯವಾಗುವುದಿಲ್ಲ. ಇದರೊಡನೆ ಟೆಂಡರ್ ಅರ್ಹತೆಗಳನ್ನು ಸಹ ಹೊರ ರಾಜ್ಯದವರಿಗೆ ಅನುಕೂಲವಾಗುವಂತೆ ರೂಪಿಸಲಾಗುತ್ತಿದೆ. ಭ್ರಷ್ಟ ರಾಜಕಾರಣಿಗಳು ಹಾಗೂ ಭ್ರಷ್ಟ ಅಧಿಕಾರಿಗಳಿಂದ ಈ ರೀತಿ ಆಗುತ್ತಿದೆ ಎಂದು ದೂರಿದರು.