ರಾಯಚೂರು: ರಾಜ್ಯ ಸರಕಾರ 371ಜೆ ಅನುಷ್ಠಾನಕ್ಕಾಗಿ ಜೂನ್ 15ರ 2022 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಗೊಂದಲಗಳು ಮತ್ತು 371ಜೆ ಅಡಿಯಲ್ಲಿ ಹೊರಡಿಸಲಾದ ವಿವಿಧ ಸುತ್ತೋಲೆಗಳಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಆಗ್ರಹಿಸಿ ಕಲ್ಯಾಣ ಕರ್ನಾಟಕ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ನಗರದ ಡಾ. ಬಿ. ಆರ್.ಅಂಬೇಡ್ಕರ್ ವೃತದಲ್ಲಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ಅನುಚ್ಛೇದ 371ಜೆ ಅಡಿಯಲ್ಲಿ ರಚಿಸಲಾದ ಕಾನೂನು ಅನುಷ್ಠಾನಕ್ಕಾಗಿ ಸರಕಾರದಿಂದ ಹಲವಾರು ಸುತ್ತೋಲೆಗಳನ್ನು ಹೊರಡಿಸಲಾಗಿದೆ, ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಪ್ರತಿ ನೇಮಕಾತಿಯಲ್ಲಿ ವಿಭಿನ್ನ ರೀತಿಯ ಆಯ್ಕೆಪಟ್ಟಿ ತಯಾರಿಸುವ ಸುತ್ತೋಲೆಗಳಿಂದ ಗೊಂದಲಗಳಾಗುತ್ತಿದೆ.
ಈ ಹಿಂದೆ ಮೇ 22ರ 2015ರಂದು ಮೊದಲನೇಯ ಬಾರಿಗೆ 371ಜೆ ಮೀಸಲಾತಿ ಕೋರಿರುವ ಅಭ್ಯರ್ಥಿಯನ್ನು ಬಹು ಆಯ್ಕೆಯ ವಿಧಾನವನ್ನು ಸೂಚಿಸಲಾಯಿತು. ಇದರ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದ್ದರಿಂದ ನವೆಂಬರ್ 16ರ 2015ರಂದು ಸುತ್ತೋಲೆಯನ್ನು ಹೊರಡಿಸಿ 371ಜೆ ಮೀಸಲಾತಿ ಕೋರಿರುವ ಅಭ್ಯರ್ಥಿಯನ್ನು ಮೊದಲಿಗೆ ಮೆರಿಟ್ ಆಧಾರದಲ್ಲಿ ಮಿಕ್ಕುಳದ ವೃಂದಕ್ಕೆ ಆಯ್ಕೆ ಮಾಡುವದು ನಂತರ ಸ್ಥಳೀಯ ವೃಂದದ ಹುದ್ದೆಗೆ ಪರಿಗಣಿಸುವಂತೆ ಸೂಚನೆ ನೀಡಿದರು ಎಂದರು.
ಸರಕಾರವು ಇತ್ತೀಚಿಗೆ ಜೂನ್ 15ರ 2022ರಂದು ಮತ್ತೊಂದು ಸುತ್ತೋಲೆಯನ್ನು ಹೊರಡಿಸಿ ಈಗಾಗಲೇ ನಡೆಯುತ್ತಿರುವ ಎಲ್ಲಾ ನೇಮಕಾತಿಗಳನ್ನು ಹಿಂದಿನ ಸುತ್ತೋಲೆಯಂತೆ ಮತ್ತು ಇನ್ನು ಮುಂದೆ ನಡೆಯುವ ನೇಮಕಾತಿಗಳನ್ನು ಗೆಜೆಟೆಡ್ ಪ್ರೋಬೆಷನರ್ ಹುದ್ದೆಗಳಿಗೆ ವೃಂದಗಳ ಆಯ್ಕೆಗೆ ಅವಕಾಶ, ಇನ್ನುಳಿದ ಹುದ್ದೆಗಳಿಗೆ ಎರಡೆರಡೂ ಅಧಿಸೂಚನೆ, ಎರಡು ಅರ್ಜಿ, ಎರಡು ಶುಲ್ಕ, ಎರಡು ಪರೀಕ್ಷೆ, ಎರಡು ಆಯ್ಕೆ ಪಟ್ಟಿ ರಚಿಸಲು ಸೂಚಿಸಲಾಗಿದ್ದು ಇದರಿಂದ ನೇಮಕಾತಿ ಪ್ರಾಧಿಕಾರಗಳು ಮತ್ತು ಅಭ್ಯರ್ಥಿಗಳಲ್ಲಿ ಗೊಂದಲಗಳು ಉಂಟಾಗಿವೆ ಎಂದು ಆರೋಪ ಮಾಡಿದರು. ಪ್ರತಿಯೊಂದು ನೇಮಕಾತಿಗಳು ನ್ಯಾಯಾಲಯಗಳ ಕಟ್ಟೆ ಏರುತ್ತಿರುವದರಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಕ್ಕಿರುವ ಸಂವಿಧಾನ ಬದ್ಧ ಹಕ್ಕು ಕಸಿದುಕೊಂಡಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾರಿಯಲ್ಲಿರುವ ಎಲ್ಲಾ ಸುತ್ತೋಲೆಗಳನ್ನು ತಕ್ಷಣ ವಾಪಸ್ಸು ಪಡೆದು ನವೆಂಬರ್ 16, 2015ರ ಸುತ್ತೋಲೆಯಂತೆ ಮೆರಿಟ್ ಆಧಾರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳನ್ನು ಮೊದಲಿಗೆ, ಮಿಕ್ಕುಳದ ವೃಂದದ ಹುದ್ದೆಗಳಿಗೆ ಪರಿಗಣಿಸಿ ಆಯ್ಕೆ ಪಟ್ಟಿಯನ್ನು ತಯಾರಿಸುವದು, ನಂತರ ಇನ್ನುಳಿದ ಅಭ್ಯರ್ಥಿಗಳನ್ನು ಸ್ಥಳೀಯ ವೃಂದದ ಹುದ್ದೆಗಳಿಗೆ ಪರಿಗಣಿಸಿ ಆಯ್ಕೆ ಪಟ್ಟಿ ತಯಾರಿಸುವಂತೆ ಹೊಸದಾಗಿ ಸೂಕ್ತ ಸುತ್ತೋಲೆ ಹೊರಡಿಸಬೇಕೆಂದು ಸರಕಾರಕ್ಕೆ ಒತ್ತಾಯಸಿದರು.
ಈ ಸಂದರ್ಭದಲ್ಲಿ ಡಾ.ರಝಾಕ ಉಸ್ತಾದ, ರಾಜೇಶ ಕುಮಾರ, ವಿಶ್ವನಾಥ ಪಟ್ಟಿ, ಶಿವಕುಮಾರ ಯಾದವ, ವಿನೋದ ರೆಡ್ಡಿ, ವಿರೇಶ ಹೀರಾ, ಮೊಹಮ್ಮದ ರಫೀ ಸೇರಿದಂತೆ ಉಪಸ್ಥಿತರಿದ್ದರು.