ಕಲ್ಯಾಣ ಕರ್ನಾಟಕ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸದ 41 ಶಾಸಕರ ನಿವಾಸದೆದುರು ಜ.26ಕ್ಕೆ ಬೊಬ್ಬೆ ಚಳವಳಿ

ಬೀದರ್: ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಕಲಾವಿದರು ಸಂಕಷ್ಟಕ್ಕೀಡಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲಾ ಪ್ರಕಾರದ ಕಲಾವಿದರಿಗೆ ರಾಜ್ಯ ಸರ್ಕಾರ 10 ಸಾವಿರ ರೂಪಾಯಿ ಪರಿಹಾರ ಹಣವನ್ನು ಕಲಾವಿದರ ಖಾತೆಗೆ ನೇರವಾಗಿ ಜಮೆ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನಳ್ಳಿ ಅವರು ಜಂಟಿ ಪತ್ರಿಕಾ ಪ್ರಕಟಣೆಯ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ವಾರಾಂತ್ಯ ಕರ್ಫ್ಯೂ ಹಿನ್ನಲೆಯಲ್ಲಿ ಕಲಾವಿದರು, ಸಾಹಿತಿಗಳು, ಚಿಂತಕರು, ಕಾರ್ಯಕ್ರಮ ಆಯೋಜನೆ ಮಾಡಬೇಕಾದರೆ, ರಾಜ್ಯ ಸರಕಾರ ಕೋವಿಡ್ ನಿಯಮ ಪಾಲನೆಗೆ ನಿರ್ಭಂದ ವಿಧಿಸುತ್ತಿದೆ. ಆದರೆ, ರಾಜಕೀಯ ನಾಯಕರು ಯಾವುದೇ ಕಾರ್ಯಕ್ರಮಗಳು ಮಾಡಿದರೆ, ರಾಜ್ಯ ಸರಕಾರ ನಿರ್ಭಂದ ಹೇರುತ್ತಿಲ್ಲ. ಇದರಿಂದ ಸ್ಪಷ್ಟವಾಗುತ್ತಿದೆ. ರಾಜ್ಯ ಸರಕಾರ ಕಲಾವಿದರಿಗೊಂದು ನಿಯಮ, ರಾಜಕಿಯ ನಾಯಕರಿಗೊಂದು ನಿಯಮ ಜಾರಿ ಮಾಡಿ, ಬಡವ ಮತ್ತು ಶ್ರೀಮಂತ ಎನ್ನುವ ರೀತಿಯಲ್ಲಿ ತಾರತಮ್ಯವನ್ನು ಉಗ್ರವಾಗಿ ಖಂಡಿಸಿದ್ದಾರೆ.

ಕಲ್ಯಾಣ ಕರ್ನಾಟಕ ಕಲಾವಿದರ ಪ್ರಮುಖ ಬೇಡಿಕೆಗಳ ಕುರಿತು ವಿಧಾನಸೌಧ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿ ಈ ಭಾಗದ ಶಾಸಕರು, ಸಚಿವರಿಗೆ ಆಗಸ್ಟ್‌ 15ರಂದು ಪ್ರತ್ಯೇಕವಾಗಿ ಮನವಿಪತ್ರ ಸಲ್ಲಿಸಲಾಗಿತ್ತು. ಆದರೂ ಈ ಪ್ರದೇಶದ ಜನ ಪ್ರತಿನಿಧಿಗಳು ಇತ್ತೀಚಿಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಶಾಸಕರು ಈ ಭಾಗದ ಕಲಾವಿದರ ಸಮಸ್ಯೆಗಳ ಸ್ಪಂದಿಸುವ ಬಗ್ಗೆಯಾಗಲಿ ಮನಸ್ಸು ಮಾಡಲಿಲ್ಲ ಅಥವಾ ಬೇಡಿಕೆಗಳ ಈಡೇರಿಕೆಯ ಬಗ್ಗೆಯಾಗಲಿ ಚಕಾರ ಎತ್ತಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಸರ್ಕಾರದ ಮೇಲೆಯೂ ಒತ್ತಡ ಹೇರುವ ಮನಸ್ಸು ಸಹ ಮಾಡದ ಈ ಭಾಗದ ಶಾಸಕರ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿತನ ವಿರೋಧಿಸಿ ಜನವರಿ 26ರಂದು ಗಣರಾಜ್ಯೋತ್ಸವ ದಿನದಂದು ಬೆಳಿಗ್ಗೆ 11 ಗಂಟೆಗೆ 41 ಶಾಸಕರ ನಿವಾಸದ ಮುಂದೆ ಬೊಬ್ಬೆ ಚಳವಳಿ ಹಮ್ಮಿಕೊಂಡಿದ್ದಾರೆ. ಒಕ್ಕೂಟದ ಕಲಾವಿದರು ಬೊಬ್ಬೆ ಹೊಡೆಯುವ ಚಳವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *