ಉತ್ತರ ಕನ್ನಡ: ಕಾಳಿ ನದಿ ನೀರನ್ನು ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ತೆಗೆದುಕೊಂಡು ಹೋಗುವುದನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆ ಪ್ರಬಲವಾಗಿ ವ್ಯಾಪಕಗೊಳ್ಳುತ್ತಿದೆ. ಕಾಳಿ ನದಿ ಜಲ ಆಂದೋಲನ ಸಮಿತಿ ವತಿಯಿಂದ ಜೋಯಿಡಾ ತಾಲೂಕಿನ ರಾಮನಗರ ಬಂದ್ ಮಾಡಿ ರಸ್ತೆ ತಡೆಸಿದರು. ಸ್ಥಳೀಯ ವ್ಯಾಪಾರಿಗಳು ಅಂಗಡಿ ಮುಂಗಟ್ಟು ಬಂದ ಮಾಡಿ ಪ್ರತಿಭಟನೆ ನಡೆಸಿದರು.
ನಮ್ಮ ನದಿ ನಮ್ಮ ಹಕ್ಕು, ತಾಲೂಕಿನ ಜನರಿಗೆ ಮೊದಲು ನೀರು ಕೊಡಿ ಬೇಕೆ ಬೇಕು ನ್ಯಾಯ ಬೇಕು ಎಂದು ಘೋಷಣೆಗಳನ್ನು ಕೂಗುತ್ತ ಎರಡು ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಶಿವಾಜಿ ಸರ್ಕಲ್ ವರೆಗೆ ಮೆರವಣಿಗೆ ನಡೆಸಿದರು.
ಕಾಳಿ ನದಿ ನೀರನ್ನು ಉತ್ತರ ಕರ್ನಾಟಕ ಭಾಗಕ್ಕೆ ಕೊಂಡೊಯ್ಯುವ ಸರಕಾರದ ಕ್ರಮಕ್ಕೆ ರಾಮನಗರ ಜನ ಆಕ್ರೋಶಗೊಂಡಿದ್ದಾರೆ. ಮೊದಲು ರಾಮನಗರ ಮತ್ತು ಜೋಯಿಡಾಕ್ಕೆ ನೀರು ಕೊಟ್ಟು ಬಳಿಕ ಹೊರ ಜಿಲ್ಲೆಗೆ ಕೊಡಿ ಎಂಬ ಕೂಗು ಕೇಳಿ ಬಂದಿದೆ. ಜಿಲ್ಲೆಯ ಜನರಿಗೆ ಸರಿಯಾಗಿ ಕಾಳಿ ನದಿ ನೀರು ಸಿಗುತ್ತಿಲ್ಲ ಈ ನಡುವೆ ಸರಕಾರ ಕಾಳಿ ನದಿ ತಿರುರವಿಗೆ ಮುಂದಾಗಿರೋದು ಅವೈಜ್ಞಾನಿಕ ಕ್ರಮ ಎಂದು ಪ್ರತಿಭಟನಾಕಾರರ ವಾದವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಇಲ್ಲಿನ ಕೆಲವು ಮುಖಂಡರು ನಮ್ಮ ನದಿಯಿಂದ ನಮಗೆ ನೀರು ಸಿಗುತ್ತಿಲ್ಲ ಇದು ಯಾವ ನ್ಯಾಯ? ಇಲ್ಲಿನ ರಾಜಕಾರಣಿಗಳು ಹಳಿಯಾಳಕ್ಕೆ ನೀರು ಕೊಟ್ಟರು, ಅಳ್ನಾವರಕ್ಕೆ ನೀರು ಕೊಟ್ಟರು, ಈಗ ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ನೀರು ಕೊಡುವ ಯೋಜನೆ ನಡೆಯುತ್ತಿದೆ, ಇಲ್ಲಿನ ಮುಗ್ದ ಜನರಿಗೆ ಅನ್ಯಾಯವಾಗಿದೆ ಅಂತ ಆರೋಪಿಸಿದರು.
ಸುಪಾ ಅಣೆಕಟ್ಟು ಕಟ್ಟಲು ಮನೆ ಮಠ ಜಮೀನು ಸರ್ವಸ್ವವನ್ನೂ ತ್ಯಾಗ ಮಾಡಿದ ಜನರಿಗೆ ಅನ್ಯಾಯ ಮಾಡಿದ ಇಲ್ಲಿನ ರಾಜಕಾರಣಿಗಳಿಗೆ ಮತ್ತು ಸರ್ಕಾರದವರಿಗೆ ಹಿಡಿಶಾಪ ಹಾಕಿದರು. ಸರ್ಕಾರ ಮೊದಲು ರಾಮನಗರ ಮತ್ತು ಜೋಯಿಡಾ ಜನತೆಗೆ ನೀರು ಕೊಡುವ ಕೆಲಸ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ರಾಮನಗರ ನೀರು ಆಂದೋಲನ ಸಮಿತಿಯ ಶರಶ್ಚಂದ್ರ ಗುರ್ಜರ್ ಮಾತನಾಡಿ, ‘ಕಾಳಿ ನದಿಗೆ ಜಲಾಶಯ ನಿರ್ಮಿಸಿ 47 ಹಳ್ಳಿಗಳನ್ನು ಮುಳುಗಿಸಲಾಯಿತು. ನಂತರ ರಾಮನಗರದಲ್ಲಿ ಕೃಷಿಗೆ, ಕುಡಿಯಲು ನೀರು ಕೊಡುವುದಾಗಿ ಭರವಸೆ ಕೊಟ್ಟು ನಿರಾಶ್ರಿತರನ್ನು ರಾಮನಗರಕ್ಕೆ ಕರೆತರಲಾಯಿತು. ಯಾವುದೇ ಸರ್ಕಾರ ಬಂದರೂ ಇದುವರೆಗೆ ನಮಗೆ ಹನಿ ನೀರನ್ನು ಕಾಳಿನದಿಯಿಂದ ಕೊಡಲಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಘೋಟ್ನೆಕರ ಮಾತನಾಡಿ, ಇಲ್ಲಿ 40 ವರ್ಷಗಳಿಂದ ರಾಜಕೀಯ ಮಾಡಿದ ಧುರೀಣರು ಇಲ್ಲಿನ ಜನರನ್ನು ಮರೆತಿದ್ದಾರೆ ಎಂದು ಆರೋಪಿಸಿದರು. ಕಾಳಿ ನದಿಯ ನೀರನ್ನು ತಾಲೂಕಿನ ಜನರಿಗೆ ಮೊದಲು ಸಿಗುವ ವ್ಯವಸ್ಥೆ ಮಾಡಬೇಕು, ಇಲ್ಲಿನ ಜನರಿಗೆ ನೀರು ಕೊಡುವುದಾಗಿ ಸುಳ್ಳು ಹೇಳಿ ರಾಜಕೀಯ ಮಾಡಲಾಗುತ್ತಿದೆ. ಕಾಳಿ ನದಿ ಮತ್ತು ಜಲಾಶಯಕ್ಕೆ ಜೀವನ ತ್ಯಾಗ ಮಾಡಿದ ಇಲ್ಲಿನ ಜನರನ್ನು ಸರ್ಕಾರ ಮರೆತಿದೆ. ಇಲ್ಲಿನ ಜನರಿಗೆ ನೀರು ಕೊಡದೆ ಬೇರೆ ಜಿಲ್ಲೆಗಳಿಗೆ ನೀರು ತೆಗೆದುಕೊಂಡು ಹೋಗುವುದಕ್ಕೆ ನನ್ನ ವಿರೋಧವಿದೆ ಎಂದರು.
ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಕಾಳಿ ನದಿ ನೀರನ್ನು ಬೇರೆ ಜಿಲ್ಲೆಗಳಿಗೆ ತೆಗೆದುಕೊಂಡು ಹೋಗುವುದಕ್ಕೆ ನಾನು ಅಧಿವೇಶನದಲ್ಲಿಯೇ ವಿರೋಧಿಸಿದ್ದೇನೆ ಎಂದರು. ಅದೇನೆ ಇರಲಿ ಇಷ್ಟು ವರ್ಷ ತಾಲೂಕ್ಕನು ಆಳಿದ ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳು, ಅಧಿಕಾರಿಗಳು ರಾಮನಗರ ಜೋಯಿಡಾ ಜನರಿಗೆ ಕಾಳಿ ನದಿ ನೀರನ್ನು ಕೊಡದೆ ಬೋರವೆಲ್ ನೀರು ಕೊಟ್ಟು ಶಾಶ್ವತ ನೀರಿನ ವ್ಯವಸ್ಥೆ ಮಾಡದಿರುವುದು ಬೇಸರದ ಸಂಗತಿಯಾಗಿದೆ.
ಐದು ಜಿಲ್ಲೆಗಳಿಗೆ ನೀರು ಕೊಡಲು ವಿರೋಧಿಸುತ್ತಿರುವ ಜನರ ಜೊತೆ ನಾನೂ ಇದ್ದೇನೆ. ಈ ಪ್ರಸ್ತಾವ ಅನುಷ್ಠಾನಗೊಳ್ಳಲು ಬಿಡುವುದಿಲ್ಲ. ಒಂದು ವೇಳೆ ಸರ್ಕಾರ ಪ್ರಸ್ತಾವ ಜಾರಿಗೆ ಮುಂದಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಿಮ್ಮ ಹೋರಾಟದಲ್ಲಿ ಭಾಗಿಯಾಗುತ್ತೇನೆ’ ಎಂದು ಹೇಳಿದರು.